ಪುತ್ತೂರು: ಅಭಿವೃದ್ಧಿಗೆ ಸಂಬಂಧಿಸಿ 9/11 ಆದೇಶ ಪಡೆಯಲು ಜನತೆಗೆ ಎದುರಾಗಿದ್ದ ತೊಡಕನ್ನು ನಿವಾರಿಸಲು ಎರಡು ಪ್ರಮುಖ ನಿಯಮಗಳಿಗೆ ರಿಯಾಯಿತಿ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. 25 ಸೆಂಟ್ಸ್ ವರೆಗಿನ ಜಾಗದ ಅಭಿವೃದ್ಧಿಗೆ ಇನ್ನು ಮುಂದೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ತಾಲ್ಲೂಕು ಕೇಂದ್ರಗಳಲ್ಲಿ ಆದೇಶ ದೊರೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ತಾಲ್ಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ವೆಂಕಟಾಚಲಪತಿ ಅವರೊಂದಿಗೆ 9/11 ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ನಡೆದ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
9/11 ಆದೇಶ ನೀಡಲು ಈ ಹಿಂದೆ ಇದ್ದ ರಸ್ತೆ ಹಾಗೂ ದಾನಪತ್ರದ ಎರಡೂ ನಿಯಮಗಳಿಗೂ ರಿಯಾಯತಿ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಭೂಮಿಗೆ ಸಂಪರ್ಕ ರಸ್ತೆ ಇದ್ದರೆ ಸಾಕು. 25 ಸೆಂಟ್ಸ್ ವರೆಗಿನ ಜಾಗದ ಅಭಿವೃದ್ಧಿ, ಮನೆಕಟ್ಟುವವರಿಗೆ ಯಾವುದೇ ಸಮಸ್ಯೆ ಇಲ್ಲದೆ ಆದೇಶಪತ್ರ ಕೈಗೆ ಸಿಗುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಈ ಆದೇಶ ನೀಡಲಾಗುವ ವ್ಯವಸ್ಥೆ ಇತ್ತು. ಆದರೆ ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋದ ಕಾರಣ ಈ ಆದೇಶ ನೀಡುವ ಜವಾಬ್ದಾರಿಯನ್ನು ನಗರಪಾಲಿಕೆ ಪ್ರಾಧಿಕಾರ (ಮೂಡಾ)ಗಳಿಗೆ ನೀಡಲಾಯಿತು. ಇದರಿಂದ ಗ್ರಾಮೀಣ ಜನತೆಗೆ ಸಂಕಷ್ಟ ಉಂಟಾಯಿತು. ಮೂಡಾದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಆದೇಶ ಸಿಗುವ ವರೆಗೆ ಹಳ್ಳಿಯ ರೈತನೊಬ್ಬ ತಿಂಗಳುಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮ ಪಂಚಾಯಿತಿ ಮೂಲಕ ಅರ್ಜಿ ಸಲ್ಲಿಸಿದರೆ ಮುಂದಿನ ಹಂತದಲ್ಲಿ ತಾಲ್ಲೂಕು ಪ್ರಾಧಿಕಾರದ ಅಧಿಕಾರಿ ಸ್ಥಳಪರಿಶೀಲನೆ ನಡೆಸಿ 12ರಿಂದ 15 ದಿನಗಳ ಒಳಗೆ 9/11 ಆದೇಶಪತ್ರ ನೀಡಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ವೆಂಕಟಾಚಲಪತಿ ಮಾತನಾಡಿ, 9/11 ಮಾಡಿಸುವ ಪ್ರತಿಯೊಬ್ಬರೂ ತಮ್ಮ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ದಾಖಲೆ ಸಹಿತ ಅರ್ಜಿ ಸಲ್ಲಿಸಬೇಕಾಗುತ್ತದೆ. ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕು ಪ್ರಾಧಿಕಾರದ ಅಧಿಕಾರಿ ವಾರದಲ್ಲಿ 2ರಿಂದ ಮೂರುದಿನ ಹಾಜರಿದ್ದು, 9/11 ಆದೇಶ ನೀಡುವರು. ಕಡಬ ತಾಲ್ಲೂಕಿನವರು ಪುತ್ತೂರು ಪೂಡಾದಲ್ಲಿ ಆದೇಶ ಪಡೆಯಬೇಕಾಗುತ್ತದೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯವರಿಗೂ ಪೂಡಾದಲ್ಲಿಯೇ ಆದೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪುತ್ತೂರು ಉಪವಿಭಾಗದ ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿಗೆ ಸೇರಿದಂತೆ ಈ ರಿಯಾಯತಿ ನಿಯಮ ಜಾರಿಗೊಂಡಿದ್ದು, ಸರ್ಕಾರದ ಆದೇಶದಲ್ಲಿ ಕಡಬ ತಾಲ್ಲೂಕು ಹೆಸರು ಸೇರಿಲ್ಲವಾದರೂ ಈ ಭಾಗಕ್ಕೂ ಅನ್ವಯವಾಗಲಿದೆ. ಬೆಳ್ತಂಗಡಿಗೆ ಮೂಡುಬಿದಿರೆ ಪ್ರಾಧಿಕಾರದ ಅಧಿಕಾರಿ ಬರಲಿದ್ದಾರೆ. ಪುತ್ತೂರು ಹಾಗೂ ಸುಳ್ಯ ತಾಲ್ಲೂಕಿಗೆ ಪೂಡಾ ಕಾರ್ಯದರ್ಶಿ ಆದೇಶ ನೀಡುವರು ಎಂದು ಅವರು ತಿಳಿಸಿದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕಿ ಪಂಕಜಾ, ಉಪನಿರ್ದೇಶಕ ಡಾ.ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಪುತ್ತೂರಿನ ನವೀನ್‌ಕುಮಾರ್ ಭಂಡಾರಿ, ಬೆಳ್ತಂಗಡಿಯ ಭವಾನಿಶಂಕರ್, ಸುಳ್ಯದ ರಾಜಣ್ಣ, ಬಂಟ್ವಾಳದ ಸಚಿನ್ ಕುಮಾರ್, ಪುತ್ತೂರು ಪೂಡಾ ಕಾರ್ಯದರ್ಶಿ ಅಭಿಲಾಷ್, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ರೈ, ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.