ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಪಾವತಿ ವಿಳಂಬ: ಸಂರಕ್ಷಣೆಯೇ ಸವಾಲು ಎಂದ ರೈಲ್ವೆ ಎಡಿಜಿಪಿ ಭಾಸ್ಕರ ರಾವ್

Last Updated 10 ಜೂನ್ 2021, 10:38 IST
ಅಕ್ಷರ ಗಾತ್ರ

ಮಂಗಳೂರು:ಜೋಕಟ್ಟೆಯಿಂದ ಕಾರವಾರವರೆಗಿನ ಕೊಂಕಣ ರೈಲ್ವೆ ಇನ್ನೂ ರೈಲ್ವೆ ಪೊಲೀಸ್ ವ್ಯಾಪ್ತಿಗೆ ಸೇರಿಲ್ಲ. ಪ್ರಯತ್ನ ಅಂತಿಮ ಹಂತದಲ್ಲಿದೆ. ಕೊಂಕಣ ರೈಲ್ವೆಯಿಂದ ಹಣ ಪಾವತಿ ವಿಳಂಬವಾಗಿದೆ. ಆದರೂ ರಾಜ್ಯದ ಪೊಲೀಸರು ರೈಲ್ವೆ ಮಾರ್ಗದಲ್ಲಿ ಸಂರಕ್ಷಣೆಯನ್ನು ಸವಾಲಿನಂತೆ ನಿರ್ವಹಿಸುತ್ತಿದ್ದಾರೆ ಎಂದು ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.
ಮಂಗಳೂರು ರೈಲ್ವೆ ಪೊಲೀಸ್ ವಿಭಾಗದ ಸುರಕ್ಷಾ ಕ್ರಮಗಳನ್ನು ಗುರುವಾರ ಪರಿಶೀಲಿಸಿ, ಸಿಬ್ಬಂದಿಗೆ ಕೋವಿಡ್ ನಿಯಂತ್ರಣ ಪರಿಕರಗಳು, ಮಾಸ್ಕ್, ಆಮ್ಲಜನಕ ಸಾಂದ್ರಕ ವಿತರಿಸಿ ಅವರು ಮಾತನಾಡಿದರು.

ಮಂಗಳೂರು ಪಾಲಕ್ಕಾಡು ರೈಲ್ವೆ ವಿಭಾಗದಲ್ಲಿದೆ. ಕೊಂಕಣ ರೈಲ್ವೆ ಕರ್ನಾಟಕದಲ್ಲಿ ಪೊಲೀಸ್ ಸಂರಕ್ಷಣೆಗಾಗಿ ಹಣ ಪಾವತಿ ಮಾಡಬೇಕಿದೆ. ಅದು ಇನ್ನೂ ಆಗಿಲ್ಲ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ಆದರೂ ಕರ್ನಾಟಕ ಪೊಲೀಸ್ ಅದಕ್ಕಾಗಿ ಕಾಯುತ್ತ ಕುಳಿತಿಲ್ಲ. ಪ್ರಯಾಣಿಕರ ರಕ್ಷಣೆ, ರೈಲ್ವೆ ಆಸ್ತಿ,ಇತ್ಯಾದಿ ಸಂರಕ್ಷಣೆಯ ಹೊಣೆ ಇದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ) ಪೊಲೀಸರು ಕೊಂಕಣ ರೈಲ್ವೆ ಮಾರ್ಗದಲ್ಲಿ ಸುರಕ್ಷಾ ಕ್ರಮದಲ್ಲಿ ಸಕ್ರಿಯರಾಗಿದ್ದಾರೆ. ತುರ್ತಾಗಿ ರಾಜ್ಯ ಪೊಲೀಸರ ಸುಪರ್ದಿಗೆ ವಹಿಸಬೇಕಿದೆ ಎಂದರು.

ಕೊಟ್ಟೂರು-ಹರಿಹರ ರೈಲ್ವೆ ಮಾರ್ಗ, ಬೀದರ- ಕಲಬುರ್ಗಿ ಮಾರ್ಗಗಳಲ್ಲಿ ಚಟುವಟಿಕೆ ಆರಂಭವಾಗಲಿದೆ. ಇದರೊಂದಿಗೆ ರಾಜ್ಯ ಪೊಲೀಸ್ ತಂಡ ಅಲ್ಲೂ ತನ್ನ ಕಾರ್ಯಾಚರಣೆ ನಡೆಸಲಿದೆ. ರೈಲ್ವೆ ಪೊಲೀಸರು ಹಾಗೂ ಮೀಸಲು ಪಡೆಗಳು ರೈಲ್ವೆ ಆಸ್ತಿ ರಕ್ಷಣೆಯ ಹೊಣೆ ಹೊಂದಿದ್ದು ಸಹಕಾರ ಕೊಡುತ್ತಿದ್ದಾರೆ. ನಾವು ಪ್ರಯಾಣಿಕರ ಸುರಕ್ಷೆ, ಅಕ್ರಮ ಚಟುವಟಿಕೆ - ವ್ಯವಹಾರಗಳನ್ನು ತಡೆಯುವಲ್ಲಿ‌ ನಿಗಾ ಇರಿಸಿದ್ದೇವೆ ಎಂದರು.

ರೈಲ್ವೆ ಹಳಿಯಲ್ಲಿನ ಸಾವು-ನೋವು, ಪ್ರಯಾಣಿಕರ ಸ್ವತ್ತು ಕಳವು ಇತ್ಯಾದಿ ಅಪರಾಧ ಪ್ರಕರಣ ನಿಯಂತ್ರಿಸುತ್ತಿದ್ದೇವೆ. ಪ್ರಕರಣ ದಾಖಲಾಗುತ್ತಿವೆ. ಅಪರಾಧ ಕೃತ್ಯ ತಡೆಯಲು ರೈಲು ಪ್ರಯಾಣಿಕ ದಟ್ಟಣೆ ಇರುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ರೈಲ್ವೆಗೆ ಕೋರಿದ್ದೇವೆ. ಅವರು ಎಲ್ಲೆಡೆ ಕ್ಯಾಮೆರಾ ಅಳವಡಿಸಿದ್ದರೂ ಅವುಗಳ ಕಾರ್ಯ ತೃಪ್ತಿಕರ ಇಲ್ಲ. ಇವೆಲ್ಲವಕ್ಕೂ ಖರ್ಚುವೆಚ್ಚಗಳನ್ನು ಸರ್ಕಾರ, ರೈಲ್ವೆ ಸರದೂಗಿಸುತ್ತಿವೆ. ಈ ಮಧ್ಯೆ ಸಿಬ್ಬಂದಿ ಕೊರತೆ ಇದ್ದು, ತಂತ್ರಜ್ಞಾನ, ಸಿಬ್ಬಂದಿಗೆ ಕ್ಯಾಮೆರಾ ಸಹಿತ ಕಾವಲು ಇತ್ಯಾದಿಗಳಿಂದ ಕ್ಷಮತೆ ಹೆಚ್ಚಿಸಲಾಗುತ್ತಿದೆ ಎಂದು ಎಡಿಜಿಪಿ ಭಾಸ್ಕರ ರಾವ್ ವಿವರಿಸಿದರು.

ಕೋವಿಡ್: ಜನರ ಸೇವೆ

ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಸೋನು ಸೂದ್ ನೆರವಿನೊಂದಿಗೆ ಹುಬ್ಬಳ್ಳಿ, ಬಳ್ಳಾರಿಯಲ್ಲಿ ಅಳವಡಿಸಿದ್ದು, ಮಂಗಳೂರು ವೈದ್ಯಕೀಯವಾಗಿ ಅಭಿವೃದ್ಧಿ ಹೊಂದಿರುವುದರಿಂದ ಇಲ್ಲಿಗೆ ನೀಡಿಲ್ಲ. ಪೊಲೀಸರು ಇದರಲ್ಲೂ ಸಕ್ರಿಯವಾಗಿದ್ದಾರೆ. ಸಾಮಾಜಿಕ ಕಾರ್ಯದಲ್ಲೂ ತೊಡಗಿದ್ದು, ಬೆಂಗಳೂರಿನಲ್ಲಿ ಸಂಘ ಸಂಸ್ಥೆಗಳ ನೆರವಿನೊಂದಿಗೆ ಪ್ರತಿದಿನ 2000 ಮಂದಿಗೆ ಊಟ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರು, ಅತಂತ್ರರು, ಸಣ್ಣ ವರ್ತಕರು, ಪ್ರಯಾಣಿಕರು ಒಂದು ತಿಂಗಳಿನಿಂದ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT