ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಮಸ್ಯೆ ಮರು ಪರಿಶೀಲಿಸಲು ಸೂಚನೆ

ರೈಲ್ವೆ ಕೆಳಸೇತುವೆ ನಿರ್ಮಾಣ: ನಳಿನ್ ಕುಮಾರ್ ಕಟೀಲ್ ಪರಿಶೀಲನೆ
Last Updated 25 ಫೆಬ್ರುವರಿ 2022, 16:33 IST
ಅಕ್ಷರ ಗಾತ್ರ

ಪುತ್ತೂರು: ಎಪಿಎಂಸಿ ಸಂಪರ್ಕದ ರೈಲ್ವೆ ಸೇತುವೆ ನಿರ್ಮಾಣ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಈಗ ಕಾಮಗಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮಾರ್ಚ್‌ ಕೊನೆಯಲ್ಲಿ ಕಾಮಗಾರಿ ಆರಂಭಗೊಂಡು ಮುಂದಿನ ಐದು ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಸ್ತಾವಿತ ಕಾಮಗಾರಿ ಸ್ಥಳದಲ್ಲಿ ಇರುವ ತಾಂತ್ರಿಕ ಸಮಸ್ಯೆಯ ಮರು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಶುಕ್ರವಾರ ಪುತ್ತೂರು ಎಪಿಎಂಸಿ ಸಂಪರ್ಕದ ಕಬಕ-ಪುತ್ತೂರು ರೈಲ್ವೆ ನಿಲ್ದಾಣ ಸಮೀಪದ ಪ್ರಸ್ತಾವಿತ ಕೆಳ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಸ್ತಾವಿತ ಕಾಮಗಾರಿ ಜಾಗದಲ್ಲಿ ಮಣ್ಣಿನ ಗುಣಮಟ್ಟದ ಕೊರತೆಯಿದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಇದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಮೂರು ಹಳಿಗಳು ಹಾದು ಹೋಗಿರುವ ಕಾರಣ ಅದರ ಕೆಳ ಭಾಗದಲ್ಲಿ ಸೇತುವೆ ನಿರ್ಮಿಸಿ ಗಾರ್ಡರ್ ಅಳವಡಿಸುವುದು ಕಷ್ಟ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ, ವಿನ್ಯಾಸ ಅಂತಿಮಗೊಳಿಸಲಾಗುವುದು.₹ 11.81 ಕೋಟಿ ರೂ. ವೆಚ್ಚದ ಯೋಜನೆ ತಯಾರಿಸಲಾಗಿದೆ’ ಎಂದು ತಿಳಿಸಿದರು.

ಈಗಾಗಲೇ ಕೊಂಕಣ ರೈಲ್ವೆಯಲ್ಲಿ ಹಲವೆಡೆ ಹಳಿ ವಿದ್ಯುದೀಕರಣ ನಡೆದಿದೆ. ಅದೇ ರೀತಿ ಮಂಗಳೂರು- ಬೆಂಗಳೂರು ಹಾದಿಯಲ್ಲಿ ಹಳಿ ವಿದ್ಯುದೀಕರಣ ಯೋಜನೆ 2024ರಲ್ಲಿ ಪೂರ್ಣಗೊಳ್ಳಲಿದ್ದು, ಈ ಹಳಿಯಲ್ಲಿ ಇಲೆಕ್ಟ್ರಿಕ್ ರೈಲುಗಳು ಓಡಲಿವೆ. ಶಿರಾಡಿ ಘಾಟಿಯಲ್ಲಿ ಮೆಗಾ ಸುರಂಗ ರಸ್ತೆ ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ₹ 10 ಸಾವಿರ ಕೋಟಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲಿನ ಮಣ್ಣು ತಪಾಸಣೆ ನಡೆದಿದ್ದು, ಡಿಪಿಆರ್ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಷ್ಕೃತ ಯೋಜನೆ ಪ್ರಕಟಿಸಲಿದೆ. ₹ 1200 ಕೋಟಿ ವೆಚ್ಚದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ ಎಂದು ಸಂಸದರು ತಿಳಿಸಿದರು.

ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಕೆ. ಜೀವಂಧರ ಜೈನ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT