ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ಮೇಲೆ ಭೂಕುಸಿತ: ರೈಲ್ವೆ ಸಂಚಾರ ಸ್ಥಗಿತ

ಮಂಗಳೂರಿನ ತೋಕೂರು– ಪಡೀಲ್‌ ನಡುವೆ ಸಂಪರ್ಕ ಕಡಿತ
Last Updated 23 ಆಗಸ್ಟ್ 2019, 18:53 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಪಡೀಲ್‌– ಕುಲಶೇಖರದ ನಡುವೆ ಶುಕ್ರವಾರ ಬೆಳಿಗ್ಗೆ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಈ ಮಾರ್ಗದ ರೈಲು ಸಂಚಾರ ಸ್ಥಗಿತವಾಗಿದೆ. ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.

ಪಾಲಕ್ಕಾಡ್‌ ರೈಲ್ವೆ ವಿಭಾಗದ ವ್ಯಾಪ್ತಿಯ ಮಂಗಳೂರು ಜಂಕ್ಷನ್‌– ತೋಕೂರು ಸೆಕ್ಷನ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಮಣ್ಣು, ಕಲ್ಲು ಬಂಡೆಗಳು ಹಳಿ ಮೇಲೆ ಬಿದ್ದಿವೆ. 100 ಮೀಟರ್‌ಗೂ ಹೆಚ್ಚು ಉದ್ದದವರೆಗೆ ರೈಲು ಹಳಿ ಮಣ್ಣಿನಲ್ಲಿ ಮುಚ್ಚಿಹೋಗಿದೆ. ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಬೆಳಿಗ್ಗೆಯಿಂದಲೇ ರೈಲು ಸಂಚಾರ ಸ್ಥಗಿತವಾಗಿದೆ.

ಮಂಗಳೂರು ಜಂಕ್ಷನ್‌– ಸುರತ್ಕಲ್‌ ನಡುವಣ ರೈಲು ಮಾರ್ಗ ಬಂದ್‌ ಆಗಿದೆ. ಮುಂಬೈನಿಂದ ಬಂದಿರುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಸುರತ್ಕಲ್‌ ನಿಲ್ದಾಣದಲ್ಲಿ ನಿಂತಿದೆ. ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ನಿಂತಿದೆ.

ಶುಕ್ರವಾರ ಲೋಕಮಾನ್ಯ ತಿಲಕ್‌– ಕೂಚುವೆಲಿ ನಡುವಣ ಗರೀಬ್‌ರಥ, ಎರ್ನಾಕುಲಂ– ಓಖಾ ನಡುವಣ ಎಕ್ಸ್‌ಪ್ರೆಸ್‌ ರೈಲು, ಹಝರತ್‌ ನಿಝಾಮುದ್ದೀನ್‌– ತಿರುವನಂತಪುರ ನಡುವಿನ ಎಕ್ಸ್‌ಪ್ರೆಸ್‌, ಜಾಮ್‌ನಗರ– ತಿರುನಲ್ವೇಲಿ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ರದ್ದು ಮಾಡಲಾಯಿತು.

ಶನಿವಾರ ತಿರುವನಂತಪುರ– ನಿಝಾಮುದ್ದೀನ್‌ ಎಕ್ಸ್‌ಪ್ರೆಸ್‌ ಮತ್ತು ಓಖಾ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪಾಲಕ್ಕಾಡ್‌ ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.

ಮಾರ್ಗ ಬದಲಾವಣೆ: ತಿರುವನಂತಪುರ– ಹಝರತ್‌ ನಿಝಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ ಮತ್ತು ಕೂಚುವೆಲಿ– ಇಂದೋರ್‌ ಎಕ್ಸ್‌ಪ್ರೆಸ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲುಗಳು ಶೋರನೂರು, ಪೋಡನೂರು, ಈರೋಡ್‌, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ ಮಾರ್ಗವಾಗಿ ಸಂಚರಿಸುತ್ತಿವೆ.

ತಿರುವನಂತಪುರ– ಲೋಕಮಾನ್ಯ ತಿಲಕ್‌ ನಡುವಿನ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಎರ್ನಾಕುಲಂ ಜಂಕ್ಷನ್‌ನಲ್ಲಿ ನಿಂತಿದೆ. ಅದು ಅಲ್ಲಿಂದ ಲೋಕಮಾನ್ಯ ತಿಲಕ್‌ವರೆಗೆ ಸಂಚರಿಸುವುದಿಲ್ಲ. ನಾಗರಕೋಯಿಲ್‌– ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್‌ ನಡುವಣ ಎಕ್ಸ್‌ಪ್ರೆಸ್ ರೈಲು ದಿಂಡಿಗಲ್‌ವರೆಗೆ ಮಾತ್ರ ಸಂಚರಿಸಲಿದೆ. ದಿಂಡಿಗಲ್‌ನಿಂದ ಛತ್ರಪತಿ ಶಿವಾಜಿ ಟರ್ಮಿನಲ್‌ವರೆಗಿನ ಸಂಚಾರ ರದ್ದುಗೊಳಿಸಲಾಗಿದೆ.

ಈ ಮಧ್ಯೆ ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲೂ ಇದೇ 25 ರವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಕರಾವಳಿ: ‘ಆರೆಂಜ್‌ ಅಲರ್ಟ್‌’

ಬೆಂಗಳೂರು: ‘ರಾಜ್ಯದ ಕರಾವಳಿ ಭಾಗದಲ್ಲಿ ಆಗಸ್ಟ್‌ 24 ಮತ್ತು 25ರಂದು ಅಧಿಕ ಮಳೆಯಾಗಲಿದ್ದು, ಈ ಭಾಗದಲ್ಲಿ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರವೂ ಅಧಿಕ ಮಳೆಯಾಗಿದೆ. ನಾಳೆಯಿಂದ ಪಶ್ಚಿಮ ಘಟ್ಟಗಳಲ್ಲೂ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಐದು ದಿನಗಳವರೆಗೆ ಮಳೆ ಸುರಿಯಲಿದೆ. ಉಳಿದಂತೆ ದಕ್ಷಿಣ ಒಳನಾಡು ಹಾಗೂ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ’ ಎಂದವರು ತಿಳಿಸಿದರು.

ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 9 ಸೆಂ.ಮೀ.ಮಳೆಯಾಗಿದೆ. ಪಣಂಬೂರು, ಉಡುಪಿಯಲ್ಲಿ ತಲಾ 8, ಶಿರಾಲಿ 7, ಸಿದ್ದಾಪುರ 6, ಮಂಗಳೂರು 5, ಧರ್ಮಸ್ಥಳದಲ್ಲಿ 4 ಸೆಂ.ಮೀ.ಮಳೆಯಾಗಿದೆ.

ಕರಾವಳಿಯಲ್ಲಿ ಮಳೆ ಮುಂದುವರಿಕೆ: (ಮಂಗಳೂರು ವರದಿ) ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರವೂ ಧಾರಾಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಬಾಳೆಹೊನ್ನೂರಿನಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೂ ಉತ್ತಮ ಮಳೆ ಸುರಿದಿದೆ.

ತುಂತುರು ಮಳೆ (ಮೈಸೂರು ವರದಿ): ಮೈಸೂರು, ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT