ಶನಿವಾರ, ಆಗಸ್ಟ್ 17, 2019
24 °C
ನಗರದೆಲ್ಲೆಡೆ ಬಿಟ್ಟು ಬಿಟ್ಟು ಅಬ್ಬರಿಸಿದ ಮಳೆ

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Published:
Updated:
Prajavani

ಮಂಗಳೂರು: ಸೋಮವಾರ ಬೆಳಿಗ್ಗೆಯಿಂದ ನಗರದಲ್ಲಿ ಮಳೆ ಆಗಾಗ ಬಿಡುವು ನೀಡಿ ಅಬ್ಬರಿಸುತ್ತಿದೆ. ಮಧ್ಯಾಹ್ನದ ಬಳಿಕ ಜೋರಾದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಬಿಜೈ, ಆಂ್ಬಲಮೊಗರು ಸೇರಿದಂತೆ ಕೆಲವೆಡೆ ಗುಡ್ಡ ಕುಸಿತದಿಂದ ಹಾನಿಯಾಗಿದೆ.

ಬೆಳಿಗ್ಗೆ ಕೆಲಕಾಲ ಸುರಿದಿದ್ದ ಮಳೆ ಮಧ್ಯಾಹ್ನ ಸ್ವಲ್ಪ ಹೊತ್ತು ಬಿಡುವು ನೀಡಿತ್ತು. ಮಧ್ಯಾಹ್ನ 2 ಗಂಟೆಯ ಬಳಿಕ ಮತ್ತೆ ಮಳೆ ಜೋರಾಯಿತು. ಗಾಳಿಯೂ ಜೋರಾಗಿ ಬೀಸಲಾರಂಬಿಸಿತು. ಚರಂಡಿಗಳು ಉಕ್ಕಿ ಹರಿದಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿತು. ಕೆಲವೆಡೆ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿತು.

ಪಾಂಡೇಶ್ವರ, ಫಳ್ನೀರ್‌, ಕೊಟ್ಟಾರ, ಕೂಳೂರು, ಸುಲ್ತಾನ್‌ ಬತ್ತೇರಿ, ಬಂದರು, ರಥಬೀದಿ, ಪಂಪ್‌ವೆಲ್‌ ಸೇರಿದಂತೆ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳು ಮಳೆಯ ನೀರಿನಿಂದ ಜಲಾವೃತವಾದವು. ಪಡೀಲ್‌ ಅಂಡರ್‌ ಪಾಸ್‌ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜೆಪ್ಪು ಸೇರಿದಂತೆ ಹಲವೆಡೆ ಇದೇ ರೀತಿಯ ಸ್ಥಿತಿ ಇತ್ತು.

ದೇವಾಲಯ ಜಲಾವೃತ: ರಥಬೀದಿಯ ವೀರಾಂಜನೇಯ ದೇವಾಲಯದೊಳಕ್ಕೆ ನೀರು ನುಗ್ಗಿದೆ. ದೇವಾಲಯದ ಪ್ರಾಂಗಣವೂ ಸೇರಿದಂತೆ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದೆ. ಇದರಿಂದಾಗಿ ಪೂಜೆಗೂ ಅಡ್ಡಿಯಾಗಿದೆ. ದೇವಾಲಯದಿಂದ ನೀರು ಹೊರಹಾಕುವ ಕೆಲಸ ಪ್ರಗತಿಯಲ್ಲಿದೆ.

ಸುಲ್ತಾನ್‌ ಬತ್ತೇರಿ ಬಳಿ ಮನೆಯೊಂದಕ್ಕೆ ನೀರು ನುಗ್ಗಿದೆ. ಫಳ್ನೀರ್‌ನಲ್ಲಿ ರಾಜ ಕಾಲುವೆ ಉಕ್ಕಿ ಹರಿದಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯೊಳಕ್ಕೆ ಹರಿದುಬಂದಿರುವ ಕೊಳಚೆ ನೀರನ್ನು ಹೊರಹಾಕಲು ಅಲ್ಲಿನ ನಿವಾಸಿಗಳು ಹರಸಾಹಸಪಡುತ್ತಿದ್ದಾರೆ.

ಗುಡ್ಡ ಕುಸಿತ:

ಬಿಜೈನ ಬಟಗುಡ್ಡದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿತ್ತು. ಬೃಹದಾಕಾರದ ಬಂಡಯೊಂದು ರಸ್ತೆಯ ಮಧ್ಯದಲ್ಲಿ ಬಿದ್ದ ಕಾರಣದಿಂದ ಕೆಲಹೊತ್ತು ವಾಹನಗಳ ಸಂಚಾರ ಸ್ಥಗಿತವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಮಣ್ಣು ಮತ್ತು ಬಂಡೆ ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಬಂತು.

ಕುಂಜತ್ತಬೈಲ್‌ನಲ್ಲಿ ಭಾರಿ ಮಳೆಯಿಂದ ಗುಡ್ಡ ಕುಸಿದು ಮನೆಯೊಂದು ಸಂಪೂರ್ಣ ಜಖಂಗೊಂಡಿದೆ. ಅವಘಡ ಸಂಭವಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಆಂಬ್ಲಮೊಗರು ಸಮೀಪದ ಮದಕ ಎಂಬಲ್ಲಿ ಗುಡ್ಡ ಕುಸಿದು ರಝಾಕ್‌ ಮತ್ತು ಅಬ್ಬಾಸ್‌ ಎಂಬುವವರ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್‌ ಕಂಬವೊಂದು ಉರುಳಿಬಿದ್ದಿತ್ತು. ತಕ್ಷಣವೇ ಮೆಸ್ಕಾಂ ಸಿಬ್ಬಂದಿ ಕಂಬವನ್ನು ಸ್ಥಳಾಂತರಿಸಿದರು.

ಮರ ಉರುಳಿ ಇಬ್ಬರಿಗೆ ಗಾಯ:

ಸಂಜೆಯ ವೇಳೆಗೆ ಕಂಕನಾಡಿಯ ಸೇಂಟ್‌ ಜೋಸೆಫ್‌ ಶಾಲೆಯ ಸಮೀಪ ಬೃಹದಾಕಾರದ ಆಲದ ಮರವೊಂದು ಉರುಳಿಬಿದ್ದಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ರಿಯಾ (13) ಎಂಬ ವಿದ್ಯಾರ್ಥಿನಿಗೆ ಮರದ ಕೊಂಬೆ ತಾಗಿ ಗಾಯವಾಗಿದೆ. ದ್ವಿಚಕ್ರ ವಾಹನ ಸವಾರನೊಬ್ಬ ಮರದ ಅಡಿ ಸಿಲುಕಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ.

ಉರುಳಿದ ಮರದ ಸಮೀಪದಲ್ಲಿ ನಿಂತಿದ್ದ ಕಾರು, ಆಟೊ ಸೇರಿದಂತೆ ಕೆಲವು ವಾಹನಗಳಿಗೆ ಹಾನಿಯಾಗಿದೆ. ಎರಡು ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದೆ. ಮರ ರಸ್ತೆಯ ಮೇಲೆ ಬಿದ್ದಿದ್ದರಿಂದ ಕೆಲಕಾಲ ಈ ಮಾರ್ಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಸಂಚಾರ ದಟ್ಟಣೆ: ಮಳೆ ಜೋರಾಗಿ ಸುರಿಯುತ್ತಿದ್ದ ಅವಧಿಯಲ್ಲಿ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಕೊಟ್ಟಾರ ಚೌಕಿ, ನಂತೂರು, ಕುಲಶೇಖರ, ಪಂಪ್‌ವೆಲ್‌, ಜ್ಯೋತಿ ವೃತ್ತ, ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌, ಎ.ಬಿ.ಶೆಟ್ಟಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದವು.

Post Comments (+)