ಮಳೆ ಹಾನಿ, ಭೂಕುಸಿತದ ಅಧ್ಯಯನ: ದಕ್ಷಿಣ ಕನ್ನಡ ಜಿಲ್ಲೆಗೆ 12ಕ್ಕೆ ಕೇಂದ್ರತಂಡ ಭೇಟಿ

7
ಮಳೆ ಹಾನಿ, ಭೂಕುಸಿತದ ಅಧ್ಯಯನ

ಮಳೆ ಹಾನಿ, ಭೂಕುಸಿತದ ಅಧ್ಯಯನ: ದಕ್ಷಿಣ ಕನ್ನಡ ಜಿಲ್ಲೆಗೆ 12ಕ್ಕೆ ಕೇಂದ್ರತಂಡ ಭೇಟಿ

Published:
Updated:

ಮಂಗಳೂರು: ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಮೂವರು ಹಿರಿಯ ಅಧಿಕಾರಿಗಳ ತಂಡವು ಬುಧವಾರ ದಕ್ಷಿಣ ಕನ್ನಡ ಜಿಲ್ಗೆಗೆ ಬರಲಿದೆ. ಎರಡು ದಿನಗಳ ಕಾಲ ಈ ತಂಡ ಜಿಲ್ಲೆಯಲ್ಲಿ ಅಧ್ಯಯನ ನಡೆಸಲಿದೆ.

ಮೊದಲ ಹಂತದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ಎರಡು ಪ್ರತ್ಯೇಕ ತಂಡಗಳು ರಾಜ್ಯದಲ್ಲಿ ಅಧ್ಯಯನ ನಡೆಸಲಿವೆ. ಎರಡೂ ತಂಡಗಳು ಬೆಂಗಳೂರು ತಲುಪಿದ್ದು, ಬುಧವಾರ ಬೆಳಿಗ್ಗೆ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಮೊದಲ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡಲಿದೆ. ಎರಡನೇ ತಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ.

ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯದ ವೆಚ್ಚ ವಿಭಾಗದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್‌ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ತಂಡ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವರದಿ ನೀಡಲಿದೆ.

ರಾಜ್ಯದ ಕೃಷಿ, ತೋಟಗಾರಿಕೆ, ಕಂದಾಯ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕೇಂದ್ರ ತಂಡದ ಭೇಟಿ ವೇಳೆ ಹಾಜರಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಜಿಲ್ಲೆಯ ವಿವಿಧೆಡೆ ಅತಿವೃಷ್ಟಿ, ಪ್ರವಾಹ ಮತ್ತು ಭೂಕುಸಿತದಿಂದ ಉಂಟಾಗಿರುವ ಹಾನಿಯ ಕುರಿತು ಸಮಗ್ರವಾದ ವರದಿಯೊಂದನ್ನು ಈ ತಂಡಕ್ಕೆ ಸಲ್ಲಿಸಲಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಬೆಳೆಹಾನಿ ವೀಕ್ಷಣೆ

ಕೇಂದ್ರ ತಂಡ ಬುಧವಾರ ಬೆಳಿಗ್ಗೆ ಉಡುಪಿ ಜಿಲ್ಲೆಗೆ ತೆರಳಲಿದೆ. ಅಲ್ಲಿಂದ ಸಂಜೆ 4.30ಕ್ಕೆ ವಾಪಸಾಗಲಿದ್ದು, ಮೂಲ್ಕಿ, ಆದ್ಯಪಾಡಿ ಮತ್ತು ಬಜ್ಪೆ ಗ್ರಾಮಗಳಿಗೆ ಭೇಟಿ ನೀಡಲಿದೆ. ಅಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಮತ್ತು ಮೂಲಸೌಕರ್ಯಕ್ಕೆ ಹಾನಿ ಕುರಿತು ಈ ತಂಡ ಮಾಹಿತಿ ಸಂಗ್ರಹಿಸಲಿದೆ. ಈ ಪ್ರದೇಶದಲ್ಲಿ ಪ್ರವಾಹದಿಂದ ಕೃಷಿ ಜಮೀನು ಹಾನಿಗೀಡಾಗಿರುವ ಪ್ರದೇಶಕ್ಕೂ ತಂಡ ಭೇಟಿ ನೀಡಲಿದೆ.

ಸಂಜೆ 6.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಬರುವ ಕೇಂದ್ರದ ಅಧಿಕಾರಿಗಳು, ಅಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಈ ತಂಡ ಬುಧವಾರ ರಾತ್ರಿ ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದೆ.

ಗುರುವಾರ ಬೆಳಿಗ್ಗೆ 9.30ಕ್ಕೆ ಈ ತಂಡವು ಬಂಟ್ವಾಳ ತಾಲ್ಲೂಕಿನ ಮೂಲರಪಟ್ಣದಲ್ಲಿ ಸೇತುವೆ ಕುಸಿದುಬಿದ್ದ ಸ್ಥಳಕ್ಕೆ ಭೇಟಿ ನೀಡಲಿದೆ. ನಂತರ ವಿಟ್ಲಪಡ್ನೂರು ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಅತಿಯಾದ ಮಳೆಯಿಂದಾಗಿ ಕೊಳೆರೋಗದಿಂದ ಫಸಲು ನಷ್ಟ ಸಂಭವಿಸಿರುವ ಅಡಿಕೆ ತೋಟಗಳಿಗೆ ಭೇಟಿ ನೀಡಲಿದೆ. ಆ ಬಳಿಕ ಪುತ್ತೂರು ತಾಲ್ಲೂಕಿನ ಕಾಣಿಯಾರು ಗ್ರಾಮಕ್ಕೆ ಭೇಟಿ ನೀಡಲಿದ್ದು, ಅಲ್ಲಿಯೂ ಕೊಳೆರೋಗದಿಂದ ಉಂಟಾಗಿರುವ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಲಿದೆ.

ಶಿರಾಡಿ ಘಾಟಿಗೆ ಭೇಟಿ

ಗುರುವಾರ ಮಧ್ಯಾಹ್ನ ಸುಳ್ಯ ತಾಲ್ಲೂಕಿನ ಕಲ್ಲಾಜೆ ಮತ್ತು ಸುಬ್ರಹ್ಮಣ್ಯ ಸುತ್ತಮುತ್ತ ಭೂಕುಸಿತ ಸಂಭವಿಸಿರುವ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ ನೀಡಲಿದೆ. ಭೂಕುಸಿತದಿಂದ ಆಗಿರುವ ಹಾನಿಯನ್ನು ಅಂದಾಜು ಮಾಡಲಿದ್ದು, ಮಾನವ ಪ್ರಾಣಹಾನಿ, ಜಾನುವಾರು ಸಾವು, ಮನೆ ಕುಸಿತಕ್ಕೆ ಸಂಬಂಧಿಸಿದಂತೆಯೂ ಮಾಹಿತಿ ಪಡೆಯಲಿದೆ.

‘ಈ ತಂಡವು ಜಿಲ್ಲೆಯಿಂದ ವಾಪಸಾಗುವ ಮುನ್ನ ಶಿರಾಡಿ ಘಾಟಿಗೆ ಭೇಟಿ ನೀಡಲಿದೆ. ಅಲ್ಲಿ ಪದೇ ಪದೇ ಭೂಕುಸಿತದಿಂದ ರಸ್ತೆಗೆ ಆಗಿರುವ ಹಾನಿ ಕುರಿತು ಕೇಂದ್ರ ತಂಡವು ಖುದ್ದಾಗಿ ವೀಕ್ಷಿಸಲಿದೆ. ರಸ್ತೆಗೆ ಆಗಿರುವ ಹಾನಿಯ ಅಂದಾಜು ಮತ್ತು ಕೈಗೊಳ್ಳಬೇಕಿರುವ ಪರಿಹಾರ ಕಾಮಗಾರಿಗಳ ಕುರಿತು ರಾಜ್ಯದ ಅಧಿಕಾರಿಗಳಿಂದ ವಿವರ ಸಂಗ್ರಹಿಸಲಿದೆ. ಬಳಿಕ ಶಿರಾಡಿ ಮಾರ್ಗವಾಗಿ ಹಾಸನಕ್ಕೆ ತೆರಳಲಿದೆ’ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !