ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಲಧಾರೆಗೆ ನದಿಯಂತಾದ ರಸ್ತೆಗಳು

ಜಿಲ್ಲೆಯಾದ್ಯಂತ ಭಾರಿ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು; ಅಲ್ಲಲ್ಲಿ ಬಿರುಕು, ‘ಮಾಯ’ವಾದ ಬಾವಿ
Last Updated 1 ಜುಲೈ 2022, 13:12 IST
ಅಕ್ಷರ ಗಾತ್ರ

ಮಂಗಳೂರು: ಎಲ್ಲಿ ನೋಡಿದರಲ್ಲಿ ನೀರು. ಕುಂಭವನೆತ್ತಿ ಸುರಿದಂತೆ ನಿರಂತರವಾಗಿ ಬಿದ್ದ ಮಳೆಯಿಂದಾಗಿ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳು ನೀರಿನಿಂದ ಆವೃತವಾದವು. ರಸ್ತೆಗಳೆಲ್ಲವೂ ‘ನೀರುಮಾರ್ಗ’ವಾಗಿ ಪರಿಣಮಿಸಿದ್ದರಿಂದಲೂ ಮೋಡದಿಂದಾಗಿ ಮಬ್ಬು ಆವರಿಸಿದ್ದರಿಂದಲೂ ವಾಹನ ಸವಾರರು ಪ್ರಯಾಸಪಟ್ಟರು. ಗುಡ್ಡಗಳು ಜರಿದುಬಿದ್ದವು, ರಸ್ತೆಗಳಲ್ಲಿ ಬಿರುಕುಂಟಾಯಿತು. ಮನೆಸಮೀಪದ ಬಾವಿಗಳು ನೋಡುತ್ತಿದ್ದಂತೆಯೇ ಮಣ್ಣಿನಡಿಯಲ್ಲಿ ‘ಮಾಯ’ವಾದವು...

ಬುಧವಾರ ರಾತ್ರಿಯಿಂದ ಆದ ಮುಸಲಧಾರೆಯಿಂದಾಗಿ ಗುರುವಾರ ಬೆಳಿಗ್ಗೆ ರಸ್ತೆಗಳಲ್ಲೂ ತಗ್ಗು ಪ್ರದೇಶಗಳಲ್ಲೂ ನೀರು ನಿಂತಿತ್ತು. ನೆರೆರಾಜ್ಯ ಮತ್ತು ನೆರೆ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆಗಳ ಪ್ರಮುಖ ವೃತ್ತಗಳಾದ ಪಂಪ್‌ವೆಲ್‌, ಕೊಟ್ಟಾರ ಚೌಕಿಯಲ್ಲಿ ನೀರು ತುಂಬಿತ್ತು. ಪಡೀಲ್‌ನ ರೈಲ್ವೆ ಸೇತುವೆ ಬಳಿ ನೀರು ತುಂಬಿದ್ದರಿಂದ ಕಣ್ಣೂರು ಮಸೀದಿ ವರೆಗೂ ಹೆದ್ದಾರಿ ನದಿಯಂತಾಯಿತು. ಕುಂಟಿಕಾನದಲ್ಲಿ ಎಜೆ ಆಸ್ಪತ್ರೆಗೆ ಸಾಗುವ ವೃತ್ತದಲ್ಲೂ ನೀರು ನಿಂತಿತ್ತು. ಇಲ್ಲೆಲ್ಲ ವಾಹನಗಳು ಮುಂದೆ ಸಾಗಬೇಕಾದರೆ ತಾಸುಗಳ ಕಾಲ ಕಾಯಬೇಕಾಯಿತು. ಶಾಲೆ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಕಚೇರಿಗಳಿಗೆ ತೆರಳುವ ಉದ್ಯೋಗಿಗಳು ಬಸ್‌ ಮತ್ತು ಸ್ವಂತ ವಾಹನಗಳಲ್ಲೇ ಕುಳಿತುಕೊಳ್ಳಬೇಕಾಯಿತು.

ಕೊಟ್ಟಾರದಲ್ಲಿ ಸೊಂಟದೆತ್ತರದಷ್ಟಿದ್ದ ನೀರಿನಲ್ಲೇ ನಡೆದುಹೋಗಲು ಪ್ರಯತ್ನಿಸಿದ ಸಮೀಪದ ಕಾಲೇಜಿನ ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಇದರ ವಿಡಿಯೊ ಟ್ವಿಟರ್‌ನಲ್ಲಿ ಹರಿದಾಡಿತು. ಮಾಲೆಮಾರಿನಲ್ಲಿ ರಸ್ತೆಗಳು ತುಂಬಿ ಮನೆಯ ಅಂಗಳದ ವರೆಗೂ ನೀರು ಬಂದಿತ್ತು. ದ್ವಿಚಕ್ರ ವಾಹನದಲ್ಲಿ ಬಂದ ಯುವಕನೊಬ್ಬ ರಸ್ತೆ ಬದಿಯ ಚರಂಡಿಗೆ ಬಿದ್ದಾಗ ಸ್ಥಳೀಯರು ಆತನನ್ನು ರಕ್ಷಿಸಿದರು.

ಮನೆಗಳಿಗೆ ಹಾನಿ; ಕೃಷಿ ನಾಶ

ಮುಡಿಪು‌ ವ್ಯಾಪ್ತಿಯ ಕೊಣಾಜೆ, ಮಂಜನಾಡಿ, ಹರೇಕಳ, ಬಾಳೆಪುಣಿ, ಕುರ್ನಾಡು, ಪಾವೂರು, ಬೋಳಿಯಾರ್ ಪ್ರದೇಶಗಳಲ್ಲಿ ಆವರಣ ಗೋಡೆ ಕುಸಿದು ಮನೆಗಳಿಗೆ ಹಾನಿಯಾಗಿದೆ. ಇಬ್ರಾಹಿಂ ಎಂಬವರ ಮನೆಯ ಸಮೀಪ ಗುಡ್ಡ ಜರಿದಿದ್ದು ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮನೆಮಂದಿ ಸಂಬಂಧಿಕರಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಗುಡ್ಡ ಕುಸಿದು ಆರೀಫ್ ಅವರ ಮನೆಗೂ ಹಾನಿಯಾಗಿದೆ. ಕೊಣಾಜೆ ಗ್ರಾಮದ ಮುಚ್ಚಿಲಕೋಡಿಯಲ್ಲಿ ಗುಡ್ಡ ಕುಸಿದು ಉಮೇಶ್ ಅವರ ಮನೆಯ ಬಾವಿ ಸಂಪೂರ್ಣಮುಚ್ಚಿಹೋಗಿದೆ.

ಗ್ರಾಮದ ತಾಂಡ್ಲಾ ಎಂಬಲ್ಲಿ ರಾಜೇಶ್ ಶೆಟ್ಟಿ ಎಂಬವರ ಕೃಷಿ ಭೂಮಿಗೆ ನೀರು ನುಗ್ಗಿದೆ. ಕಲ್ಕಾರ್ ಎಂಬಲ್ಲಿ ವನಜ ಎಂಬವರ ಮನೆಗೆ, ನಡುಪದವು ಎಂಬಲ್ಲಿ ಮೊಹಮ್ಮದ್ ಷರೀಫ್ ಅವರ ಮನೆಗೆ ಮಣ್ಣು ಕುಸಿದು ಬಿದ್ದಿದೆ. ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಗೋಡೆ ಕುಸಿದಿದೆ.

ಮೊಂಟೆಪದವಿನಿಂದ ನಡುಪದವಿಗೆ ತೆರಳುವ ರಸ್ತೆಯ ಪಟ್ಡೋರಿ ಕ್ರಾಸ್ ಬಳಿ ರಸ್ತೆ ಕುಸಿದಿದೆ. ಗೌಸಿಯಾ ಮಸೀದಿ ಬಳಿಯ ಆವರಣ ಗೋಡೆ ಕುಸಿದಿದ್ದು ಮೊಂಟೆಪದವು–ನಡುಪದವು ರಸ್ತೆಯು ಬಂದ್ ಆಗಿತ್ತು. ನಡುಪದವು ತಾರಿಗುಡ್ಡೆ ಮಾಯಿಲ ಅವರ ಮನೆಗೆ ಗುಡ್ಡ ಕುಸಿದು ಹಾ‌ನಿಯಾಗಿದೆ. ಕುರ್ನಾಡು ಪ‌ಂಚಾಯಿತಿ ವ್ಯಾಪ್ತಿಯ ಮುಡಿಪಿನ್ನಾರ್ ದೈವಸ್ಥಾನದ ಬಳಿ ನೆರೆ ಬಂದಿದ್ದು ಕೆಲವು ಪ್ರದೇಶಗಳಿಗೆ ನೀರು ನುಗ್ಗಿದೆ. ಹರೇಕಳ ಮಿಲಾವ್ ನಗರದ ಆಸಿಫ್, ಇನೋಳಿ ಬೀಡು ಶ್ರೀನಿವಾಸ ಟೈಲರ್, ಬೋಳಿಯಾರ್ ಜಾರದಗುಡ್ಡೆ ರಫೀಕ್ ಮನೆಗೆ ಹಾನಿಯಾಗಿದೆ.

ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದೆ. ವಿಟ್ಲದ ಅಡ್ಡದ ಬೀದಿ, ಬೊಬ್ಬೆಕೇರಿಯ ವಿದ್ಯಾನಗರದಲ್ಲಿ ಮನೆಗಳು ಜಲಾವೃತಗೊಂಡಿವೆ. ಬಾಕಿಮಾರ್‌ನಲ್ಲಿ ಮನೆ ಮತ್ತು ಅಂಗಡಿಗಳ ಆವರಣಕ್ಕೆ ನೀರು ನುಗ್ಗಿದೆ. ಬೊಬ್ಬೆಕೇರಿ ವಿದ್ಯಾನಗರದಲ್ಲಿರುವ ಮೋನಪ್ಪ ಶೆಟ್ಟಿ, ದಿನೇಶ್ ಪೂಜಾರಿ, ನಾರಾಯಣ ಗೌಡ, ನಾರಾಯಣ ಪೂಜಾರಿ ಅವರ ಮನೆಗಳ ಒಳಗೆ ನೀರು ನುಗ್ಗಿದೆ. ಕುದ್ದುಪದವು ಪೆರುವಾಯಿ ರಸ್ತೆಯ ಮುಳಿಯ ದಂಬೆಯಲ್ಲಿ ಭಜನಾ ಮಂದಿರದ ತಡೆಗೋಡೆ ಕುಸಿದು ಬಸ್ ನಿಲ್ದಾಣಕ್ಕೆ ಹಾನಿಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿನ್ನಪ್ಪ ಗೌಡ, ಸದಸ್ಯರು ಬೇಟಿ ನೀಡಿ ತೆರವು ಕಾರ್ಯಕ್ಕೆ ನೇತೃತ್ವ ನೀಡಿದರು. ಕಸಬಾ ಗ್ರಾಮದ ಸುರಂಬಡ್ಕದಲ್ಲಿ ಒಕ್ಕೆತ್ತೂರು ಹೊಳೆಯ ಕಿರುಸೇತುವೆ ಮುಳುಗಡೆಯಾಗಿದೆ. ಕೊಳ್ನಾಡು ಗ್ರಾಮದ ಸುರಿಬೈಲು, ಖಂಡಿಗ, ತಿರುವಾಜೆ, ಕೋಕಲ, ಸಾಲೆತ್ತೂರು ಕಟ್ಟೆ ಸೆರ್ಕಳ, ತಾಳಿತ್ತನೂಜಿ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ಕುಸಿದ ಚಾವಣಿ; ದಂಪತಿ ಅಪಾಯದಿಂದ ಪಾರು

ಉಳ್ಳಾಲದ ಚೆಂಬುಗುಡ್ಡೆ ಅಂಬೇಡ್ಕರ್ ನಗರದ ಭಾಸ್ಕರ್ ಅವರ ಮನೆಯ ಹಂಚಿನ ಚಾವಣಿ ಕುಸಿದಿದೆ. ದಂಪತಿ ಮತ್ತು ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಯು.ಟಿ ಖಾದರ್,ಪೌರಾಯುಕ್ತೆ ವಿದ್ಯಾ ಕಾಳೆ ಭೇಟಿ ನೀಡಿದರು. ಭಾಸ್ಕರ್ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ ಮಾಡಿ, ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಪುತ್ತೂರು-ಪರ್ಲಡ್ಕ-ಕುಂಜೂರುಪಂಜ-ಪಾಣಾಜೆ ರಸ್ತೆಯ ಚೆಲ್ಯಡ್ಕದ ಸೇತುವೆ ಮುಳುಗಡೆಯಾಗಿತ್ತು. ಚೆಲ್ಯಡ್ಕ ಮುಳುಗು ಸೇತುವೆ ಕೆಳಭಾಗ ಬಿರುಕು ಬಿಟ್ಟಿದೆ. ಅಡಿಪಾಯದ ಹಲವು ಕಲ್ಲುಗಳು ಕೊಚ್ಚಿಕೊಂಡು ಹೋಗಿದ್ದು ಕಬ್ಬಿಣದ ಸರಳುಗಳು ಕಳಚಿಕೊಳ್ಳಲಾರಂಭಿಸಿದೆ.

ಪುತ್ತೂರು ನಗರದ ನೆಲ್ಲಿಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲೆ ಮರದ ಕೊಂಬೆ ಬಿದ್ದು ಚಾವಣಿ ಮತ್ತು ಹಂಚುಗಳಿಗೆ ಹಾನಿಯಾಗಿದೆ. ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕದಲ್ಲಿ ತಡೆಗೋಡೆ ಕುಸಿದುಬಿದ್ದು ಮನೆ, ನೀರಿನ ಟ್ಯಾಂಕಿಗೆ ಹಾನಿಯಾಗಿದೆ. ಹಾರಾಡಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಿಂಬದಿಯ ಪ್ರಯಾಣಿಕರ ತಂಗುದಾಣದ ಬಳಿಯ ಆವರಣ ಗೋಡೆ ಕುಸಿದಿದೆ. ಕೊಡಿಪ್ಪಾಡಿ ಗ್ರಾಮದ ಅರ್ಕ ಸಮೀಪ ಕೊಡೆಪಡ್ಪುವಿನಲ್ಲಿ ಗೋಡೆ ಕುಸಿದಿದೆ.

ಕಾಸರೋಡಿನ ಬದಿಯಡ್ಕದ ಹಲವೆಡೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕಿನ್ನಿಂಗಾರು ಸಮೀಪದ ಶಾಂತಿಯಡಿಯಲ್ಲಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಪಳ್ಳತ್ತಡ್ಕ ಸೇತುವೆಯ ಬಳಿ ನೀರು ನಿಂತಿತ್ತು.

ಬಂಟ್ವಾಳ ತಾಲ್ಲೂಕಿನ ಹಲವೆಡೆ ಭೂಕುಸಿತ ಆಗಿದ್ದು ಮರಗಳು ಉರುಳಿ ಬಿದ್ದಿವೆ. ಮನೆಗಳಿಗೆ ಹಾನಿಯಾಗಿದ್ದು ಕೃಷಿ ನಾಶವಾಗಿದೆ. ಪುರಸಭೆ ವ್ಯಾಪ್ತಿಯ ಕಾಮಾಜೆಯಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ಇಲ್ಲಿನ ನಿವಾಸಿ ಸರೋಜಿನಿ ಕುಲಾಲ್ ಇವರ ಮನೆಗೆ ಹಾನಿಯಾಗಿದ್ದು, ದ್ವಿಚಕ್ರ ವಾಹನ ಜಖಂಗೊಂಡಿದೆ. ಮಿತ್ತಕಟ್ಟೆ ನಿವಾಸಿ ಚೋಮ ಮೂಲ್ಯ ಅವರ ಮನೆ ಹಿಂದೆ ಗುಡ್ಡ ಕುಸಿದಿದೆ. ಸಜಿಪಮೂಡ ಕಂಚಿಲ ನಿವಾಸಿ ಶಮೀಮ ಅವರ ಮನೆಗೆ ಹಾನಿಯಾಗಿದೆ. ಗೋಳ್ತಮಜಲು ಗ್ರಾಮದ ವಸಂತ ಅವರ ಮನೆ ಬಳಿ ತಡೆಗೋಡೆ ಕುಸಿದು ಹಾನಿಯಾಗಿದ್ದು ನರಿಕೊಂಬು ಗ್ರಾಮದ ಊಜೊಟ್ಟು ಮತ್ತು ಸಾಲೆತ್ತೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಮಂಚಿ ಗ್ರಾಮದ ಪತ್ತುಮುಡಿ ರಹೀನಾ, ಮಹಮ್ಮದ್, ಅವ್ವಮ್ಮ, ವಿಠಲ ಪ್ರಭು ಅವರ ಮನೆ ಹಿಂದೆ ಗೋಡೆ ಕುಸಿದಿದೆ. ಅಯಿಶಮ್ಮ ಅವರ ಮನೆ ಬಳಿ ತಡೆಗೋಡೆ ಕುಸಿದಿದೆ.

ನೀರಬೈಲು ನಿವಾಸಿ ಹಮೀದ್ ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಮಂಚಿ ಗ್ರಾಮದ ಪುರುಷೋತ್ತಮ ಅವರ ಮನೆಯ ಅವರಣ ಗೋಡೆ ಕುಸಿದಿದೆ. ಮಾಣಿ ಗ್ರಾಮದ ಉಷಾ ಶೆಟ್ಟಿ ಅವರ ಮನೆಗೆ ನೀರು ನುಗ್ಗಿದೆ. ಬಂಟ್ವಾಳ -ಮೂಡುಬಿದಿರೆ ರಸ್ತೆ ನಡುವಿನ ಮಂಡಾಡಿ ತಿರುವು ರಸ್ತೆಯಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಮುರಿದಿದೆ.

ಜಿಲ್ಲೆಯಲ್ಲಿ ಇಂದು ಶಾಲೆ-ಕಾಲೇಜಿಗೆ ರಜೆ

ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರಕೆ.ವಿ. ಆದೇಶ ಹೊರಡಿಸಿದ್ದಾರೆ. ‘ಹವಾಮಾನ ಇಲಾಖೆ ಶುಕ್ರವಾರ ಬೆಳಿಗ್ಗೆ 8.30ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಆದರೆ ದಿನವಿಡೀ ಭಾರಿ ಮಳೆ ಸುರಿಯುವ ಸಾಧ್ಯತೆಯನ್ನು ಇರುವ ಕಾರಣ ಸುರಕ್ಷತೆಯ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT