ಹೆಚ್ಚಿದ ನೆರೆ: ರೈಲು ಸಂಚಾರ ರದ್ದು

7
ಪಾಲ್ಘಾಟ್, ತಿರುವನಂತಪುರ ವಿಭಾಗಗಳ ರೈಲು ಮಾರ್ಗ ಬಂದ್‌

ಹೆಚ್ಚಿದ ನೆರೆ: ರೈಲು ಸಂಚಾರ ರದ್ದು

Published:
Updated:
Deccan Herald

ಮಂಗಳೂರು: ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯವಸ್ತಗೊಂಡಿದ್ದು, ದಕ್ಷಿಣ ರೈಲ್ವೆ ಬಹುತೇಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ.

ಪಾಲ್ಘಾಟ್‌ ಮತ್ತು ತಿರುವನಂತಪುರ ವಿಭಾಗಗಳಲ್ಲಿ ಮಣ್ಣು ಕುಸಿತ ಹಾಗೂ ನೆರೆ ಸ್ಥಿತಿಯಿಂದಾಗಿ ನಾಲ್ಕು ದಿನಗಳಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗುತ್ತಿದ್ದು, ಇತ್ತ ಬಸ್‌ ಪ್ರಯಾಣವೂ ಇಲ್ಲದೇ, ಅತ್ತ ರೈಲು ಸಂಚಾರವೂ ಇಲ್ಲದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ಮೂಲಕ ಹಾದು ಹೋಗುವ ಬಹುತೇಕ ರೈಲುಗಳು ಕೇರಳದ ಮೂಲಕ ತಮಿಳುನಾಡಿಗೆ ಸಂಚರಿಸುತ್ತಿದ್ದು, ಕೇರಳ, ತಮಿಳುನಾಡಿಗೆ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಮಂಗಳೂರು ಸೆಂಟ್ರಲ್‌–ಚೆನ್ನೈ ಸೆಂಟ್ರಲ್‌ ಮೇಲ್‌ (ರೈ.ಸಂ. 12602), ಮಂಗಳೂರು ಸೆಂಟ್ರಲ್– ತಿರುವನಂತಪುರ (ರೈ.ಸಂ. 16348) ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌–ಚೆನ್ನೈ ಸೆಂಟ್ರಲ್‌ (ರೈ.ಸಂ. 12686) ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್– ಚೆನ್ನೈ ಸೆಂಟ್ರಲ್ (ರೈ.ಸಂ. 16603) ಮಾವೇಲಿ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್– ತಿರುವನಂತಪುರ (ರೈ.ಸಂ. 16630), ಮಂಗಳೂರು ಜಂಕ್ಷನ್‌–ಕೂಚುವೇಲಿ (ರೈ.ಸಂ. 16356 ) ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನು ಶುಕ್ರವಾರ ರದ್ದುಪಡಿಸಲಾಗಿತ್ತು.

ಮಂಗಳೂರು–ಚೆನ್ನೈ (ರೈ.ಸಂ. 16860) ಎಗ್ಮೋರ್ ಎಕ್ಸ್‌ಪ್ರೆಸ್‌, ಮಂಗಳೂರು ಸೆಂಟ್ರಲ್‌– ನಾಗರಕೊಯಿಲ್‌ ಜಂಕ್ಷನ್‌ (ರೈ.ಸಂ. 16605), ಈರ್ನಾಡ ಎಕ್ಸ್‌ಪ್ರೆಸ್‌, ಮಂಗಳೂರು–ನಾಗರಕೊಯಿಲ್ (ರೈ.ಸಂ. 16649) ಎಕ್ಸ್‌ಪ್ರೆಸ್‌, ಮಂಗಳೂರು–ಕೊಯಿಮತ್ತೂರು (ರೈ.ಸಂ. 22609) ಎಕ್ಸ್‌ಪ್ರೆಸ್‌, ಕಣ್ಣೂರು–ತ್ರಿವೆಂದ್ರಂ (ರೈ.ಸಂ. 12081) ಜನ ಶತಾಬ್ದಿ ಎಕ್ಸ್‌ಪ್ರೆಸ್‌, ಕಣ್ಣೂರು–ಅಲೆಪಿ (ರೈ.ಸಂ. 16308) ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನೂ ಶುಕ್ರವಾರ ರದ್ದುಪಡಿಸಲಾಗಿತ್ತು.

ಭಾಗಶಃ ರದ್ದು: ಹಜರತ್ ನಿಜಾಮುದ್ದೀನ್– ತಿರುವನಂತಪುರ (ರೈ.ಸಂ. 12432) ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಇದೇ 14 ರಿಂದ ಹಜರತ್‌ ನಿಜಾಮುದ್ದೀನ್‌ ರೈಲು ನಿಲ್ದಾಣದಿಂದ ಹೊರಟಿದ್ದು, ಕೊಝಿಕ್ಕೋಡ್‌ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಮುಂದಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ನಿಜಾಮುದ್ದೀನ್‌– ಎರ್ನಾಕುಲಂ (ರೈ.ಸಂ. 12618) ಎಕ್ಸ್‌ಪ್ರೆಸ್‌ ರೈಲು ಶುಕ್ರವಾರ ಕೊಝಿಕ್ಕೋಡ್‌ವರೆಗೆ ಮಾತ್ರ ಸಂಚರಿಸಲು ಸಾಧ್ಯವಾಗಿದೆ. ಲೋಕಮಾನ್ಯ ತಿಲಕ್ ಟರ್ಮಿನಸ್– ತ್ರಿವೇಂದ್ರಂ (ರೈ.ಸಂ. 16345) ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಕೊಝಿಕ್ಕೋಡ್‌ವರೆಗೆ ಮಾತ್ರ ಸಂಚಾರ ಮಾಡಲಿದೆ. ಎರ್ನಾಕುಲಂ– ಪುಣೆ ಜಂಕ್ಷನ್‌ (ರೈ.ಸಂ. 22149) ಎಕ್ಸ್‌ಪ್ರೆಸ್‌ ರೈಲು ಶುಕ್ರವಾರ ಬೆಳಿಗ್ಗೆ 8.50ಕ್ಕೆ ಕೊಝಿಕ್ಕೋಡ್‌ ನಿಲ್ದಾಣದಿಂದ ತನ್ನ ಪ್ರಯಾಣ ಆರಂಭಿಸಿದೆ.

ಬೆಂಗಳೂರು ರೈಲು ರದ್ದು
ಮಂಗಳೂರಿನಿಂದ ಪಾಲಕ್ಕಾಡ್‌ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲು ಸೇವೆಯನ್ನೂ ಶುಕ್ರವಾರ ರದ್ದು ಪಡಿಸಲಾಗಿದೆ.

ಕಣ್ಣೂರು/ಕಾರವಾರ– ಬೆಂಗಳೂರು (16518/16524) ಎಕ್ಸ್‌ಪ್ರೆಸ್‌ ರೈಲು, ಬೆಂಗಳೂರು– ಕಣ್ಣೂರು/ಕಾರವಾರ (16511/16513) ರೈಲು, ಚೆನ್ನೈ ಸೆಂಟ್ರಲ್– ಮಂಗಳೂರು ಸೆಂಟ್ರಲ್ (12601) ಎಕ್ಸ್‌ಪ್ರೆಸ್‌, ಚೆನ್ನೈ ಸೆಂಟ್ರಲ್– ಮಂಗಳೂರು ಸೆಂಟ್ರಲ್‌ (22637) ವೆಸ್ಟ್ ಕೋಸ್ಟ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ ರದ್ದಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ರದ್ದು
ಬೆಂಗಳೂರು:
ಭಾರಿ ಮಳೆಯ ಕಾರಣದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಐಷಾರಾಮಿ ಬಸ್‌ (ಅವತಾರ್‌) ಸಂಚಾರವನ್ನು ಮಂಗಳೂರು ಭಾಗಕ್ಕೆ ಸ್ಥಗಿತಗೊಳಿಸಿದೆ. ಎಕ್ಸ್‌ಪ್ರೆಸ್‌ ಬಸ್‌ಗಳು ಮಾತ್ರ ಸಂಚರಿಸುತ್ತಿವೆ.

ಆ. 9ರಿಂದ 17ರವರೆಗೆ 918 ಟ್ರಿಪ್‌ಗಳನ್ನು ಕಡಿತಗೊಳಿಸಿದೆ. 8,415 ಸೀಟುಗಳು ರದ್ದಾಗಿವೆ. ₹ 52,78,126 ಮೊತ್ತವನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಶುಕ್ರವಾರ ರಾತ್ರಿ 11.50ರವರೆಗಿನ ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ.

ಮೂರು‌ ದಿನಗಳಿಂದ ಬಸ್‌ ಸೇವೆಗಳನ್ನು ರದ್ದುಗೊಳಿಸಿದ ಕಾರಣ ಕೆಎಸ್ಆರ್‌ ಟಿಸಿಗೆ ₹ 89.33 ಲಕ್ಷ ನಷ್ಟ ಉಂಟಾಗಿದೆ. 706 ಮಾರ್ಗಗಳಲ್ಲಿ ಹಾಗೂ 2,66,401 ಕಿಲೋಮೀಟರ್‌ ಓಡಾಟ ಸ್ಥಗಿತಗೊಂಡಿದೆ.

ವೋಲ್ವೋ ಮತ್ತು ಮಲ್ಟಿ ಆ್ಯಕ್ಸೆಲ್‌ ವೋಲ್ವೋ ವಾಹನಗಳ ಸಂಚಾರವನ್ನು ಹೊಸ ಮಾರ್ಗದಲ್ಲಿ ನಡೆಸಲಾಗಿದೆ. 

ಮಂಗಳೂರು– ಕಾರ್ಕಳ – ಎಸ್‌.ಕೆ.ಬಾರ್ಡರ್‌ – ಕುದುರೆಮುಖ – ಕಳಸ – ಕೊಟ್ಟಿಗೆಹಾರ – ಮೂಡಿಗೆರೆ– ಹಾಸನ ಮಾರ್ಗವಾಗಿ ಈ ಬಸ್‌ಗಳು ಬೆಂಗಳೂರಿಗೆ ಬರುತ್ತಿವೆ.

ಕೇರಳ ಭಾಗಕ್ಕೆ ಹೋಗುವ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸ ಲಾಗಿದೆ. ಪಾಲ್ಘಾಟ್‌ಗೆ ಮಾತ್ರ ಬಸ್‌ ಸಂಚಾರವಿದೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಮಾಹಿತಿ ನೀಡಿದ್ದಾರೆ.

*
ಪಾಲ್ಘಾಟ್‌, ತ್ರಿವೇಂದ್ರಂ, ತಿರುವನಂತಪುರ ವಿಭಾಗಗಳ ಬಹುತೇಕ ಮಾರ್ಗಗಳಲ್ಲಿ ನೀರು ತುಂಬಿದ್ದರಿಂದ ಈ ಮಾರ್ಗದ ರೈಲು ಸಂಚಾರ ರದ್ದುಪಡಿಸಲಾಗಿದೆ.
-ಗೋಪಿನಾಥ, ದಕ್ಷಿಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ 

*
 


ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ಭಾರತೀಯ ನೌಕಾ ಪಡೆಯ ಯೋಧರು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿದರು. -ರಾಯಿಟರ್ಸ್‌ ಚಿತ್ರ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !