ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 31 ಮನೆಗಳಿಗೆ ಹಾನಿ; ಇಬ್ಬರಿಗೆ ಗಾಯ

ದ.ಕ.ದಲ್ಲಿ ಮುಂದುವರಿದ ಮಳೆಯ ಅಬ್ಬರ: ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ ಮಳೆ
Last Updated 17 ಜುಲೈ 2021, 6:45 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣ ಅಬ್ಬರ ಶುಕ್ರವಾರ ತುಸು ಹೆಚ್ಚಾಗಿತ್ತು. ಧಾರಾಕಾರ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಸರಾಸರಿ 102.6 ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆ 36.8 ಮಿ.ಮೀ. ಇದೆ.

ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿ ಗರಿಷ್ಠ 130.5 ಮಿ.ಮೀ. ಮಳೆಯಾಗಿದೆ. ಕಡಬ ತಾಲ್ಲೂಕಿನಲ್ಲಿ ಕನಿಷ್ಠ 76.8 ಮಿ.ಮೀ. ಮಳೆಯಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ ಎರಡು, ಬೆಳ್ತಂಗಡಿ, ಮೂಲ್ಕಿ ತಾಲ್ಲೂಕಿನ ತಲಾ ಒಂದು ಸೇರಿದಂತೆ ನಾಲ್ಕು ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಮಂಗಳೂರಿನ 12, ಬಂಟ್ವಾಳ ಮತ್ತು ಕಡಬ ತಾಲ್ಲೂಕಿನ ತಲಾ 4, ಪುತ್ತೂರು, ಮೂಲ್ಕಿ, ಸುಳ್ಯ ತಾಲ್ಲೂಕಿನ ತಲಾ ಎರಡು, ಬೆಳ್ತಂಗಡಿ ತಾಲ್ಲೂಕಿನ ಒಂದು ಸೇರಿದಂತೆ 27 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಂಗಳೂರು ತಾಲ್ಲೂಕಿನಲ್ಲಿ ಮನೆ ಬಿದ್ದು ಇಬ್ಬರಿಗೆ ಗಾಯಗಳಾಗಿವೆ.

ನೀರಿನ ಹರಿವು ಇಳಿಕೆ: ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಗರಿಷ್ಠ ಮಟ್ಟ 8.5 ಮೀಟರ್‌ ಇದ್ದು, ಶುಕ್ರವಾರ 6 ಮೀಟರ್ ನೀರಿತ್ತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಗರಿಷ್ಠ ಮಟ್ಟ 31.5 ಮೀಟರ್ ಇದ್ದು, ಶುಕ್ರವಾರ 27.1 ಮೀಟರ್‌ ದಾಖಲಾಗಿತ್ತು. ಗುಂಡ್ಯ ನದಿಯಲ್ಲಿ ಗರಿಷ್ಠ 5 ಮೀಟರ್ ಇದ್ದು, 4 ಮೀಟರ್‌ ನೀರು ಹರಿಯಿತು.

ಶಂಭೂರಿನ ಎಎಂಆರ್ ಜಲಾಶಯದಿಂದ 5 ಗೇಟ್‌ ತೆರೆದು 56,148 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 5.30 ಮೀಟರ್ ನೀರು ಸಂಗ್ರಹಿಸಿದ್ದು, 56,148 ಕ್ಯುಸೆಕ್‌ ನೀರನ್ನು ಹೊರಗೆ ಬಿಡಲಾಗಿದೆ.

ಮಳೆಗೆ ತಡೆಗೋಡೆ ಕುಸಿತ

ಪುತ್ತೂರು: ಕಳೆದ ಕೆಲದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಜಡಿಮಳೆಯ ಪರಿಣಾಮವಾಗಿ ತಾಲ್ಲೂಕಿನ ಇರ್ದ ಗ್ರಾಮದ ಉಪ್ಪಳಿಗೆ ಎಂಬಲ್ಲಿ ಮನೆಯೊಂದರ ತಡೆಗೋಡೆ ಕುಸಿದು ಬಿದ್ದಿದೆ. ಧನಂಜಯ ಅವರ ಮನೆಯ ಅಂಗಳದ ಬದಿಯ ತಡೆಗೋಡೆ ಶುಕ್ರವಾರ ಕುಸಿದಿದೆ.ಅಂಗಳದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮನೆ ಮೇಲೆ ಮರಬಿದ್ದು ಹಾನಿ

ಮೂಲ್ಕಿ: ತಾಲ್ಲೂಕಿನ ಪಾವಂಜೆ ಗ್ರಾಮದ ಕದಿಕೆಯ ಬಳಿ ಶುಕ್ರವಾರ ಸುಜಾತಾ ಎಂಬುವರ ಮನೆ ಮೇಲೆ ಮಾವಿನ ಮರವೊಂದು ಬಿದ್ದು, ಮನೆಗೆ ಹಾನಿಯಾಗಿದೆ.

ಚಾವಣಿ, ಮರದ ವಸ್ತುಗಳಿಗೆ ಹಾನಿಯಾಗಿದೆ. ತಾತ್ಕಾಲಿಕವಾಗಿ ಮನೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.ಕಂದಾಯ ನಿರೀಕ್ಷಕ ದಿನೇಶ್ ಹಾಗೂ ಗ್ರಾಮ ಕರಣಿಕ ಮೋಹನ್ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು.

ಮನೆಗೆ ಹಾನಿ

ಸುಳ್ಯ: ನಿರಂತರ ಮಳೆಯಿಂದಮರ್ಕಂಜ ಗ್ರಾಮದ ಮುಂಡೋಡಿ ಜನಾರ್ದನ ನಾಯ್ಕ ಅವರ ನಿರ್ಮಾಣ ಹಂತದಲ್ಲಿದ್ದ ಮನೆಯ ಹಿಂಬಂದಿ ಬರೆ ಕುಸಿದಿದೆ. ಮನೆಯ ಮಹಡಿಗೆ ಹೋಗುವ ಮೆಟ್ಟಿಲುಗಳಿಗೆ ಹಾನಿಯಾಗಿದೆ.ಕೊಟ್ಟಿಗೆ ನಿರ್ಮಿಸಲು ಅಳವಡಿಸಿದ್ದ ಕಂಬ ಮುರಿದು ಬಿದ್ದಿದೆ.

ವಿಟ್ಲ: ಕಿಂಡಿ ಅಣೆಕಟ್ಟೆ ಮುಳುಗಡೆ

ವಿಟ್ಲ: ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿಂಡಿ ಅಣೆಕಟ್ಟೆ ಮುಳುಗಡೆಯಾಗಿದೆ.

ಕಳೆದ ವರ್ಷದ ಎರಡು ಬಾರಿ ಕಿಂಡಿ ಅಣೆಕಟ್ಟೆ ಮುಳುಗಡೆಯಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸಿದ್ದರು. ಆಗಿನ ಶಾಸಕಿ ಶಕುಂತಳಾ ಶೆಟ್ಟಿ ನೀಡಿದ ₹ 1 ಕೋಟಿ ಅನುದಾನದಲ್ಲಿ ಕಿಂಡಿ ಅಣೆಕಟ್ಟೆ ನಿರ್ಮಿಸಲಾಗಿದೆ.

ಕಳೆದ ವರ್ಷ ಮಳೆಯ ವೇಳೆಗೆ ಕೊಚ್ಚಿಕೊಂಡು ಬಂದ ಕಸ, ಮರದ ದಿಮ್ಮಿಗಳು ಅಣೆಕಟ್ಟೆಯಲ್ಲಿ ಸಿಲುಕಿ ಸೇತುವೆಗೆ ಹಾಕಿದ್ದ ರಾಡ್‌ ಗಳು ಮುರಿದಿದ್ದವು.

ನೇತ್ರಾವತಿ ನದಿಯಲ್ಲಿ ನೀರು ಇಳಿಕೆ

ಬಂಟ್ವಾಳ: ತಾಲ್ಲೂಕಿನಲ್ಲಿ ಶುಕ್ರವಾರ ಮಳೆ ಕಡಿಮೆಯಾಗಿದ್ದು, ನೇತ್ರಾವತಿ ನದಿಯಲ್ಲಿ ನೆರೆ ಇಳಿಕೆಯಾಗಿದೆ. ಬಿ.ಮೂಡ ಗ್ರಾಮದ ಕೈಕಂಬದಲ್ಲಿ ಶೈಲೇಶ್ ಅವರ ಮನೆ ಚಾವಣಿ ಕುಸಿದಿದೆ. ಮಾಣಿ ಗ್ರಾಮದ ಪಲ್ಲತಿಲನಲ್ಲಿಗುಡ್ಡ ಜರಿದು ವಿಶ್ವನಾಥ ಅವರ ಮನೆಗೆ ಹಾನಿಯಾಗಿದೆ‌. ಮಂಚಿ ಗ್ರಾಮದ ಪತ್ತುಮುಡಿ ನಿವಾಸಿ ಹಂಝ ಅವರ ಮನೆ ಅವರಣಗೋಡೆ ಕುಸಿದಿದೆ. ಇಡ್ಕಿದು ಗ್ರಾಮದ ಏಮಾಜೆಯ ಲಕ್ಷ್ಮಣ ಮೂಲ್ಯ ಮನೆಯ ಚಾವಣಿ ಹಾರಿ ಹೋಗಿದ್ದು, ಗೋಡೆಯು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT