ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಮಳೆಯ ಮಾಹಿತಿದಾರರು

39 ವರ್ಷಗಳ ದಾಖಲೆ ಅಳಿಸಿ ಹಾಕಿದ ‘ಉತ್ತರಾ’ ಮಳೆ
Last Updated 27 ಸೆಪ್ಟೆಂಬರ್ 2020, 3:00 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ‘ಉತ್ತರೆ’ಯ ಅಬ್ಬರ ಜೋರಾಗಿಯೇ ಆಗಿದೆ. ಇದೇ 13ರಿಂದ 25 ರವರೆಗೆ ಸುರಿದ ಉತ್ತರಾ ಮಳೆಯು 1981 ರ ದಾಖಲೆಯನ್ನೂ ಅಳಿಸಿ ಹಾಕಿದೆ.

ಪ್ರಗತಿಪರ ಕೃಷಿಕ, ಮಳೆಯ ಬಗೆಗಿನ ಅಧ್ಯಯನದ ಹವ್ಯಾಸ ರೂಢಿಸಿಕೊಂಡಿರುವ ಸುಳ್ಯ ತಾಲ್ಲೂಕಿನ ಬಾಳಿಲದ ಪಿ.ಜಿ.ಎಸ್‌.ಎನ್‌. ಪ್ರಸಾದ್‌ ಅವರು ಹೇಳುವ ಮಾತಿದು. ಉತ್ತರ ಮಳೆಯು ಈ ಬಾರಿ 43.1 ಸೆಂ. ಮೀ. ಸುರಿದಿದ್ದು, 1981 ರಲ್ಲಿ ಸುರಿದ 41.5 ಸೆಂ.ಮೀ. ಮಳೆಯನ್ನೂ ಹಿಂದಿಕ್ಕಿದೆ. 39 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.

ಪ್ರಸಾದ್‌ ಅವರು ಹವಾಮಾನ ಇಲಾಖೆಯ ತಜ್ಞರಲ್ಲ. ಆದರೆ, 45 ವರ್ಷಗಳಿಂದ ಮಳೆಯ ಅಂಕಿ–ಅಂಶಗಳನ್ನು ದಾಖಲಿಸುವ ಮೂಲಕ ಜಿಲ್ಲೆಯಲ್ಲಿ ಮಳೆಯ ಬದಲಾವಣೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ನಿಸರ್ಗದ ಒಡನಾಟದಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡುತ್ತಿದ್ದಾರೆ.

ಮಂಗಳೂರಿನಿಂದ 80 ಕಿ.ಮೀ. ದೂರದಲ್ಲಿರುವ ಬಾಳಿಲದ ಪ್ರಸಾದ್‌ ಅವರ ಮನೆಯು ಮಳೆಗೆ ಸಂಬಂಧಿಸಿದ ಹಲವು ವಿಷಯಗಳ ವಸ್ತು ಸಂಗ್ರಹಾಲಯವೂ ಹೌದು ಎನ್ನುವಂತಿದೆ. ದೈನಂದಿನ, ತಿಂಗಳ ಹಾಗೂ ವರ್ಷದ ಮಳೆಯ ಅಂಕಿ–ಅಂಶಗಳು ಇವರಲ್ಲಿ ಲಭ್ಯವಾಗಿವೆ.

ನಿತ್ಯದ ಮಳೆಯ ಪ್ರಮಾಣವನ್ನು ದಾಖಲಿಸುವ ಹವ್ಯಾಸ ರೂಢಿಸಿಕೊಂಡಿದ್ದ ತಂದೆ ಪಿ.ಎಸ್. ಗೋವಿಂದಯ್ಯ ಅವರಿಂದ ಪ್ರೇರಿತರಾದ ಪ್ರಸಾದ್‌ ಅವರು ಮಳೆಯ ಅಂಕಿ–ಅಂಶಗಳನ್ನು ದಾಖಲಿಸುತ್ತ ಬಂದಿದ್ದಾರೆ. ನಿತ್ಯ ಬೆಳಿಗ್ಗೆ 8 ಗಂಟೆಗೆ ತಮ್ಮ ಮನೆಯಲ್ಲಿರುವ ಮಳೆ ಮಾಪಕದಲ್ಲಿ ಸಂಗ್ರಹವಾದ ನೀರಿನ ಅಂಕಿ–ಅಂಶಗಳನ್ನು ದಾಖಲಿಸುತ್ತಿದ್ದಾರೆ. ಅವರು ಊರಲ್ಲಿ ಇರದೇ ಇದ್ದಾಗ ಪ್ರಸಾದ್ ಅವರ ಪತ್ನಿ ಈ ಕೆಲಸ ಮಾಡುತ್ತಾರೆ.

ಹಲವು ವರ್ಷಗಳಿಂದ ಪ್ರಸಾದ್ ಅವರು ದಾಖಲಿಸುವ ಮಾಹಿತಿಯು, ವೈದ್ಯರು, ಎಂಜಿನಿಯರ್‌ಗಳು, ರೈತರು ಸೇರಿದಂತೆ 150 ಜನರು ಇರುವ ‘ಮಳೆ ಮಾಹಿತಿ’ ವಾಟ್ಸ್‌ಆ್ಯಪ್‌ ಗ್ರೂಪ್‌ ಹಾಗೂ ‘ಮಳೆಯೊಂದಿಗೆ ಮಾತುಕತೆ’ ಫೇಸ್‌ಬುಕ್‌ ಖಾತೆಯಲ್ಲಿ ನಿತ್ಯ ಬೆಳಿಗ್ಗೆ 9 ಗಂಟೆಗೆ ಲಭ್ಯವಾಗುತ್ತಿವೆ.

ರೈತರಾದ ಕಲ್ಮಡ್ಕದ ಟಿ.ಆರ್. ಸುರೇಶಚಂದ್ರ, ಗುತ್ತಿಗಾರಿನ ಮಹೇಶ್, ಕಾಸರಗೋಡಿನ ಕಲ್ಲಟ್ಟದ ಬಾಲಸುಬ್ರಹ್ಮಣ್ಯ ಅವರ ಪ್ರಕಾರ, ‘ಮಳೆಯ ಮಾಹಿತಿ ಸಂಗ್ರಹದಿಂದ ರೈತರು ಯಾವ ಬೆಳೆಗಳನ್ನು ಬೆಳೆಯಬಹುದು ಎನ್ನುವ ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ’

ಸುರೇಶಚಂದ್ರ ಅವರೂ ನಿತ್ಯ ಮಳೆಯ ಪ್ರಮಾಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ.

‘ಜಿಲ್ಲೆಯಲ್ಲಿ ವಾರ್ಷಿಕ 4,000 ದಿಂದ 450.0 ಸೆಂ.ಮೀ. ವಾಡಿಕೆ ಮಳೆಯಿದೆ. ಆದರೆ, ಇದುವರೆಗೆ 380.0 ಸೆಂ.ಮೀ. ಮಳೆ ಸುರಿದಿದೆ. ಬರುವ ದಿನಗಳಲ್ಲಿ ಇನ್ನೂ 50.0 ರಿಂದ 70.0 ಸೆಂ.ಮೀ. ಮಳೆ ಆಗುವ ನಿರೀಕ್ಷೆ ಇದೆ. ಹೀಗಾಗಿ ರೈತರು ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ ಈಗಿನಿಂದಲೇ ಕ್ರಮ ಕೈಗೊಳ್ಳಬಹುದು’ ಎಂದು ಅವರು ಹೇಳುತ್ತಾರೆ.

‘ಸರಾಸರಿ 1.5 ರಿಂದ 2.0 ಸೆಂ.ಮೀ. ಮಳೆ ಹಾಗೂ ಶೇ 80 ರಷ್ಟು ಆರ್ದ್ರತೆ ಇದ್ದಲ್ಲಿ, ಅಡಿಕೆ ಬೆಳೆಗೆ ಕಾಪರ್ ಸಲ್ಫೇಟ್‌ ಹಾಗೂ ಸುಣ್ಣವನ್ನು ಸಿಂಪರಣೆ ಮಾಡಬೇಕಾಗುತ್ತದೆ’ ಎಂದು ರೈತ ಮಹೇಶ್‌ ಮಾಹಿತಿ ನೀಡಿದ್ದಾರೆ.

ದಿನಕರ್ ಭಟ್‌ರಿಂದಲೂ ಮಳೆ ಮಾಹಿತಿ

ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ ಅಡಿಂಜೆಯ ದಿನಕರ್‌ ಭಟ್‌ ಕೆ. ಅವರು 1989 ರಿಂದ ಮಳೆಯ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಭಟ್‌ ಅವರ ಪುತ್ರ ಡಾ. ಕಿಶನ್‌ ದಿನಕರ್‌, ಅಳಿಯ ಬಂಟ್ವಾಳದ ವೆಂಕಟಗಿರಿ ಸಿ.ಜಿ. ಹಾಗೂ ಸಂಬಂಧಿಕರಾದ ಪ್ರಶಾಂತ್‌ ನರಸಿಂಹ ಅವರು ಈ ರೀತಿಯ ಹವ್ಯಾಸ ರೂಢಿಸಿಕೊಂಡಿದ್ದಾರೆ.

ಈ ರೀತಿಯ ಮಳೆಯ ಮಾಹಿತಿ ಸಂಗ್ರಹದಿಂದ ಬರಗಾಲವನ್ನು ಅಂದಾಜು ಮಾಡಬಹುದಾಗಿದೆ ಎಂದು ಉಪ್ಪಿನಂಗಡಿಯಲ್ಲಿ ಕ್ಲಿನಿಕ್‌ ನಡೆಸುತ್ತಿರುವ ಡಾ.ಕಿಶನ್‌ ಹೇಳುತ್ತಾರೆ. ‘2018 ರ ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಆದರೆ, ಸೆಪ್ಟೆಂಬರ್‌ನಲ್ಲಿ ಮಳೆಯೇ ಇರಲಿಲ್ಲ. ಇದರಿಂದ 2019 ರ ಏಪ್ರಿಲ್‌ ಮತ್ತು ಮೇನಲ್ಲಿ ನೀರಿನ ಅಭಾವ ಎದುರಿಸುವಂತಾಯಿತು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT