ಬುಧವಾರ, ಏಪ್ರಿಲ್ 14, 2021
23 °C
ಕಡಲು ಸೇರುವ ನೀರಿಗೆ ತಡೆ; ಅಂತರ್ಜಲ ವೃದ್ಧಿಗೆ ಜಿ.ಪಂ. ಯೋಜನೆ

ಸರ್ಕಾರಿ ಕಟ್ಟಡಗಳಲ್ಲಿ ಇಂಗು ಗುಂಡಿ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮುಂಗಾರಿನಲ್ಲಿ ಸುರಿಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳು, ಶಾಲೆ, ಅಂಗನವಾಡಿ ಕೇಂದ್ರಗಳು, ಆರೋಗ್ಯ ಕೇಂದ್ರಗಳಲ್ಲಿ ಮಳೆ ನೀರು ಇಂಗಿಸುವ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ರೂಪಿಸಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಲಶಕ್ತಿ–ಕ್ಯಾಚ್‌ ದಿ ರೇನ್’ ಅಭಿಯಾನದ ಅಡಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಮಳೆ ನೀರು ಸಂರಕ್ಷಣೆ ಮತ್ತು ಅಂತರ್ಜಲ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಿ, ಕ್ರಿಯಾಯೋಜನೆ ರೂಪಿಸಲಾಗಿದೆ.

‘ಈ ಸಂಬಂಧ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಸಮಿತಿ ರಚನೆಗೊಂಡಿವೆ. ಸಮಗ್ರ ಕೆರೆ ಅಭಿವೃದ್ಧಿ ಕಾರ್ಯಕ್ರಮದಡಿ 120 ಕೆರೆಗಳ ಪುನರುಜ್ಜೀವನಕ್ಕೆ ಯೋಚಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 1–2 ಕೆರೆಗಳನ್ನು ಕೈಗೆತ್ತಿಕೊಂಡು, ದುರಸ್ತಿ, ಹೂಳೆತ್ತುವ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್‌ ತಿಳಿಸಿದರು.

‘ಎಲ್ಲ ಇಲಾಖೆ ಕಟ್ಟಡಗಳು, ಶಾಲೆಗಳು, ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಇಂಗಿಸುವ ಘಟಕ ನಿರ್ಮಿಸಲು ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಈಗಾಗಲೇ 285ರಷ್ಟು ಕಟ್ಟಡಗಳು ಕ್ರಿಯಾಯೋಜನೆ ರೂಪಿಸಿವೆ. ಒಂದೆರಡು ದಿನಗಳಲ್ಲಿ ಎಲ್ಲ ಕಟ್ಟಡಗಳ ಯೋಜನೆ ಸಿದ್ಧವಾಗಲಿದೆ’ ಎಂದು ಹೇಳಿದರು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಎರಡರಂತೆ, ಜಿಲ್ಲೆಯಲ್ಲಿ ಸುಮಾರು 250 ಕಿಂಡಿ ಅಣೆಕಟ್ಟೆ ನಿರ್ಮಾಣ ಮಾಡಲಾಗುವುದು. ಕರಾವಳಿಯಲ್ಲಿ ಹೆಚ್ಚು ಮಳೆ ದಾಖಲಾಗುವುದರಿಂದ, ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ ಸಂಗ್ರಹಿಸುವ ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಲಾಗಿದೆ. ಆ ಮೂಲಕ ಅಂತರ್ಜಲ ವೃದ್ಧಿ, ನಿರುಪಯುಕ್ತ ಕೊಳವೆಬಾವಿಗಳಲ್ಲಿ ಜಲಮರುಪೂರಣ ಸಾಧ್ಯವಾಗುತ್ತದೆ. ಸಂಗ್ರಹಿಸುವ ಮಳೆ ನೀರನ್ನು ಕೈತೋಟಕ್ಕೆ ಬಳಕೆ ಮಾಡಬಹುದು’ ಎಂದು ಅವರು ವಿವರಿಸಿದರು.

‘ಈ ಎಲ್ಲ ಕಾಮಗಾರಿಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಸಲಾಗುತ್ತದೆ. 100 ದಿನಗಳ ಅವಧಿಯಲ್ಲಿ ಗುರಿ ತಲುಪುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

10 ಸಾವಿರ ಬಚ್ಚಲು ಗುಂಡಿ ನಿರ್ಮಾಣ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 10 ಸಾವಿರ ಬಚ್ಚಲು ಗುಂಡಿ (ಸೋಕ್ ‍ಪಿಟ್‌) ನಿರ್ಮಾಣದ ಗುರಿ ಹೊಂದಲಾಗಿದೆ. ಬಚ್ಚಲು ಗುಂಡಿ ನಿರ್ಮಾಣದಿಂದ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ವಿಲೇವಾರಿ ಸಮರ್ಪಕವಾಗಿ, ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುವುದು ನಿಲ್ಲುತ್ತದೆ. ಇದರಿಂದ ಸೊಳ್ಳೆ ಕಾಟವೂ ಕಡಿಮೆಯಾಗಿ, ಮನೆ ಸುತ್ತ ಸ್ವಚ್ಛ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ, ಬಚ್ಚಲು ಗುಂಡಿ ಗರಿಷ್ಠ ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು