ಗುರುವಾರ , ಸೆಪ್ಟೆಂಬರ್ 19, 2019
22 °C
ರಾಜೀನಾಮೆ ವಾಪಸ್‌ ಪಡೆಯುವಂತೆ ಮಾಜಿ ಸಚಿವ ರೈ ಮನವಿ

ಸೆಂಥಿಲ್‌ಗೆ ದೇಶದ್ರೋಹಿ ಪಟ್ಟ ಕಟ್ಟುವ ಸಂಚು: ರಮಾನಾಥ ರೈ

Published:
Updated:
Prajavani

ಮಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವದ ವೌಲ್ಯಗಳ ಆಧಾರಸ್ತಂಭ ಕುಸಿಯುತ್ತಿದೆ. ಸೈದ್ಧಾಂತಿಕ ನಿಲುವುಗಳು ಅಧಿಕಾರದಲ್ಲಿರಲು ಬಿಡುತ್ತಿಲ್ಲವೆಂದು  ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಜನಪರ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಇದೀಗ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರ ನಡೆಯುತ್ತಿದೆ. ಸೆಂಥಿಲ್‌ ಅವರು ರಾಜೀನಾಮೆ ವಾಪಸ್‌ ಪಡೆದು ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರದ ಆಡಳಿತದ ನಡೆಯಿಂದ ಪ್ರಜಾಪ್ರಭುತ್ವ ಪಾತಾಳಕ್ಕೆ ಕುಸಿಯುತ್ತಿದೆ. ದೇಶವು ಭವಿಷ್ಯದಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬ ಭಯ ಎಲ್ಲರನ್ನು ಕಾಡುತ್ತಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬರುತ್ತಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳುವ ದೂರವಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಧರ್ಮ, ದೇವರು, ದೇಶ ಪ್ರೇಮದ ಹೆಸರಲ್ಲಿ ದೇಶದ ಜನತೆ ಮೋಸ ಮಾಡುತ್ತಿದೆ. ಬಿಜೆಪಿ ಪ್ರಕಾರ, ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ ಕೊಟ್ಟಿದ್ದರೆ ಮಾತ್ರ ಅವರು ಮಾದರಿ ಜಿಲ್ಲಾಧಿಕಾರಿ ಆಗುತ್ತಿದ್ದರು. ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ಮೇಲೆ ಅವರು ದೇಶ ದ್ರೋಹಿಯಾಗುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲಾಧಿಕಾರಿ ಬಗ್ಗೆ ಯಾವುದೇ ವಿಷಯದ ಬಗ್ಗೆ ಮಾತನಾಡದವರು ಈಗ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರ ಅವಧಿಯಲ್ಲಿದ್ದಾಗ ಯಾವುದೇ ಅಕ್ರಮದ ಆರೋಪಗಳು ಅವರ ವಿರುದ್ಧ ಕೇಳಿ ಬರಲಿಲ್ಲ. ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿದ ಕೂಡಲೇ ಅವರ ವಿರುದ್ಧ ಅಕ್ರಮ ನಡೆಸಿದ್ದಾರೆ ಎನ್ನುವ ಆರೋಪಗಳು ಬಾಯಿ ಚಪಲಕ್ಕಷ್ಟೆ. ಜಿಲ್ಲಾಧಿಕಾರಿ ಆಗಿದ್ದ ವೇಳೆ ಸೆಂಥಿಲ್‌ ಅವರು ‘ಸ್ಯಾಂಡ್ ಬಜಾರ್‌’ ಆ್ಯಪ್‌ಗೆ ಚಾಲನೆ ನೀಡಿದ ಬಳಿಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿತ್ತು.  ಅಕ್ರಮ ನಡೆಸಲು ಅವಕಾಶ ಕಲ್ಪಿಸಲು ಸಾಧ್ಯವಾದ ಹಿನ್ನೆಲೆಯಲ್ಲಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಎಲ್ಲವೂ ನಿರಾಧಾರ ಎಂದು ರಮಾನಾಥ ರೈ ಹೇಳಿದರು.

ಇದನ್ನೂ ಓದಿ: ಮರಳು ಮಾಫಿಯಾಕ್ಕೆ ಮೂಗುದಾರ ಹಾಕಿದ್ದ ಸೆಂಥಿಲ್‌

ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ ಬಂದಾಗ ಸಸಿಕಾಂತ್ ಸೆಂಥಿಲ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ಪ್ರಾಕೃತಿಕ ಹಾನಿಗೊಳಗಾಗಿತ್ತು.ಡೆಂಗಿ ತಾಂಡವವಾಡುತ್ತಿತ್ತು, ಅದನ್ನು ನಿಯಂತ್ರಣಕ್ಕೆ ತಂದಿದ್ದು ಇದೇ ಜಿಲ್ಲಾಧಿಕಾರಿ ಸೆಂಥಿಲ್‌ ಅವರು, ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಕಳಕಳಿ ಮೆರೆದಿದ್ದು, ಅವರಿಗೆ ಮಕ್ಕಳ ಬಗ್ಗೆ ಇದ್ದ ಕಾಳಜಿ ತೋರಿಸುತ್ತದೆ ಎಂದು ಅವರು ಹೇಳಿದರು.

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಂಡರಿಯದ ಪ್ರವಾಹ ಬಂದಾಗ ದೇಶದ ಪ್ರಧಾನಿ ಎನಿಸಿಕೊಂಡವರು ವಿದೇಶ ಸುತ್ತುತ್ತಿದ್ದಾರೆ. ಹಾನಿಯಾದ ಪ್ರದೇಶಕ್ಕೆ ವೈಮಾನಿಕ ಸಮೀಕ್ಷೆ ಹಾಗೂ ಭೇಟಿ ನೀಡುವುದಕ್ಕೂ ಅವರಿಗೆ ಸಮಯವಿಲ್ಲ. ಪರಿಹಾರ ಘೋಷಿಸುವ ಹೇಳಿಕೆ ನೀಡಿಲ್ಲ. ಅವರಿಗೆ ದೇಶದ ಜನತೆಯ ಕಷ್ಟಗಳನ್ನು ವಿಚಾರಿಸುವ ಆಸಕ್ತಿಯೇ ಇಲ್ಲ, ಕೇವಲ ಚುನಾವಣೆಗಳನ್ನು ಗೆಲ್ಲುವುದೇ ಅವರ ಗುರಿ ಎಂದು ಟೀಕಿಸಿದರು.

 ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಶಶಿಧರ್ ಹೆಗ್ಡೆ, ಆರ್.ಕೆ. ಪೃಥ್ವಿರಾಜ್, ವಿಶ್ವಾಸ್‌ ಕುಮಾರ್ ದಾಸ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಕವಿತಾ ಸನಿಲ್, ಗಣೇಶ್ ಪೂಜಾರಿ, ಬಿ.ಎಂ. ಅಬ್ಬಾಸ್ ಅಲಿ, ನೀರಜ್ ಪಾಲ್, ಜಯಶೀಲಾ ಅಡ್ಯಂತಾಯ, ಸಿ.ಎಂ. ಮುಸ್ತಾಫ, ಪ್ರೇಮ್‌ನಾಥ್ ಬಳ್ಳಾಲ್‌ಭಾಗ್, ನಝೀರ್ ಬಜಾಲ್ ಇದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ - ಇಮ್ರಾನ್ ಖಾನ್ ಒಂದೇ ತಾಯಿ ಮಕ್ಕಳು: ರಮಾನಾಥ ರೈ ವಾಗ್ದಾಳಿ

Post Comments (+)