ಮಂಗಳವಾರ, ಅಕ್ಟೋಬರ್ 15, 2019
29 °C

ಅತ್ಯಾಚಾರ, ವಂಚನೆ: 7 ವರ್ಷ ಜೈಲು

Published:
Updated:

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆಗೆ ವಂಚಿಸಿದ್ದ ಪ್ರಕರಣದಲ್ಲಿ ಶಕ್ತಿನಗರ ಕುಂಟಲ್ಪಾಡಿ ನಿವಾಸಿ ಜಿ.ಗಣೇಶ್‌ ಕುಮಾರ್‌ (34) ಎಂಬಾತ ಅಪರಾಧಿ ಎಂದು ಸಾರಿರುವ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಗುತ್ತಿಗೆದಾರನಾಗಿದ್ದ ಗಣೇಶ್‌ಗೆ ಮನೆಗೆಲಸ ಮಾಡುತ್ತಿದ್ದ ಹಾಸನದ ಯುವತಿಯ ಪರಿಚಯವಾಗಿತ್ತು. ನಂತರ ಇಬ್ಬರೂ ಪ್ರೀತಿಸುತ್ತಿದ್ದರು. 2010ರಿಂದ 2013ರವರೆಗೆ ಇಬ್ಬರೂ ಅನ್ಯೋನ್ಯವಾಗಿದ್ದರು. ನಗರದ ಲಾಡ್ಜ್‌ಗಳಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಮದುವೆ ಆಗುವ ಭರವಸೆ ನೀಡಿ, ಮಾಂಗಲ್ಯ ಸರ, ಕಾಲುಂಗುರ ಹಾಕಿಸುತ್ತಿದ್ದ. 2013ರ ಅಕ್ಟೋಬರ್‌ 12ರಂದು ಕದ್ರಿಹಿಲ್‌ ಸಮೀಪ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿದ್ದ.

2013ರ ಅಕ್ಟೋಬರ್‌ ತಿಂಗಳ ಒಂದು ದಿನ ಇಬ್ಬರೂ ಕದ್ರಿ ಹಿಲ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸಂತ್ರಸ್ತೆಯು ಅಪರಾಧಿಯ ಮೊಬೈಲ್‌ ನೋಡಿದ್ದಳು. ಆತ ಬೇರೆ ಯುವತಿ ಜೊತೆ ಮದುವೆಗೆ ಪ್ರಯತ್ನಿಸುತ್ತಿರುವ ವಿಷಯ ಮೊಬೈಲ್‌ನಲ್ಲಿದ್ದ ಮೆಸೇಜ್‌ಗಳಿಂದ ತಿಳಿಯುತ್ತದೆ. ಪ್ರಶ್ನಿಸಿದಾಗ ಆಕೆಗೆ ಜಾತಿ ನಿಂದನೆಯನ್ನೂ ಮಾಡಿದ್ದ.

ಬಳಿಕ ಯುವತಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಳು. ತಕ್ಷಣವೇ ರಾಜಿ ಸಂಧಾನಕ್ಕೆ ಬಂದಿದ್ದ ಅಪರಾಧಿ, ಮದುವೆಯ ಭರವಸೆ ನೀಡಿದ್ದ. ಮದುವೆಯ ದಿನ ನಾಪತ್ತೆಯಾಗಿದ್ದ. 2019ರ ಮಾರ್ಚ್‌ 19ರಂದು ಸಂತ್ರಸ್ತೆಯು ಅತ್ಯಾಚಾರ, ವಂಚನೆ, ದೌರ್ಜನ್ಯ ಆರೋಪದಡಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಕೇಂದ್ರ ಉಪ ವಿಭಾಗದ ಆಗಿನ ಎಸಿಪಿ ತಿಲಕ್‌ಚಂದ್ರ ತನಿಖೆ ಆರಂಭಿಸಿದ್ದರು. ಸದಾನಂದ ವರ್ಣೇಕರ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ತಾನು ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿಲ್ಲ ಎಂದು ಆರೋಪಿ ವಾದಿಸಿದ್ದ. ಆದರೆ, ಅದಕ್ಕೆ ಪೂರಕವಾದ ದಾಖಲೆ ಒದಗಿಸಲು ವಿಫಲನಾಗಿದ್ದ. ಸಂತ್ರಸ್ತೆಯನ್ನು ‘ನಾನು ಮದುವೆಯಾಗುವವಳು’ ಎಂದು ಸ್ನೇಹಿತರ ಬಳಿ ಪರಿಚಯಿಸಿದ್ದ ವಿಷಯವೂ ವಿಚಾರಣೆ ವೇಳೆ ಹೊರಬಿದ್ದಿತ್ತು. ಲಾಡ್ಜ್‌ನ ವ್ಯವಸ್ಥಾಪಕರೂ ಸಾಕ್ಷ್ಯ ಹೇಳಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಶೇಖರ್‌ ಶೆಟ್ಟಿ ಅವರು ಪ್ರಾಸಿಕ್ಯೂಷನ್‌ ಪರವಾಗಿ ಪ್ರಬಲ ವಾದ ಮಂಡನೆ ಮಾಡಿದ್ದರು.

28 ಸಾಕ್ಷಿಗಳ ಪೈಕಿ 18 ಮಂದಿ ಸಾಕ್ಷ್ಯ ನುಡಿದಿದ್ದರು. ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶೆ ಬಿ.ಆರ್‌.ಪಲ್ಲವಿ ಅವರು, ‘ಗಣೇಶ್‌ ಕುಮಾರ್‌ ಅಪರಾಧಿ’ ಎಂದು ಸಾರಿದರು. ಅತ್ಯಾಚಾರ ನಡೆಸಿರುವುದಕ್ಕೆ ಏಳು ವರ್ಷ ಜೈಲು ಮತ್ತು ₹ 5,000 ದಂಡ, ವಂಚನೆ ಮತ್ತು ಬೆದರಿಕೆ ಹಾಕಿರುವುದಕ್ಕೆ ತಲಾ 6 ತಿಂಗಳ ಜೈಲು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ 6 ತಿಂಗಳ ಜೈಲು ಮತ್ತು ₹ 2,500 ದಂಡ ವಿಧಿಸಿದರು.

ದಂಡ ಪಾವತಿಗೆ ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಿದೆ. ಸಂತ್ರಸ್ತರ ಪರಿಹಾರ ನಿಧಿಯಿಂದ ಸಂತ್ರಸ್ತೆಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ.

Post Comments (+)