ಮಂಗಳವಾರ, ಸೆಪ್ಟೆಂಬರ್ 17, 2019
22 °C
ಬೆಳ್ತಂಗಡಿಯಲ್ಲಿ ಐವರಿಗೆ ಇಲಿಜ್ವರ ಪತ್ತೆ l ಆತಂಕ ಬೇಡ: ಅಧಿಕಾರಿಗಳ ಭರವಸೆ

ನೆರೆಪೀಡಿತ ಪ್ರದೇಶಗಳಲ್ಲಿ ಈಗ ರೋಗ ಭೀತಿ

Published:
Updated:
Prajavani

ಮಂಗಳೂರು: ನೆರೆಯಿಂದ ತತ್ತರಿಸಿ ಹೋಗಿರುವ ಬೆಳ್ತಂಗಡಿ ತಾಲ್ಲೂಕಿನಲ್ಲಿ ಈಗ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಐವರಲ್ಲಿ ಇಲಿಜ್ವರ ದೃಢಪಟ್ಟಿದೆ.

ನೆರೆಯ ಸಂದರ್ಭದಲ್ಲಿ ಪಶ್ಚಿಮಘಟ್ಟದಿಂದ ನದಿ, ತೊರೆಗಳಲ್ಲಿ ಹರಿದು ಬಂದ ಕಲುಷಿತ ನೀರು ಈ ಭಾಗದ ಬಹುತೇಕ ಕೆರೆ, ಬಾವಿಗಳಿಗೆ ಸೇರಿದ್ದು, ಅದೇ ನೀರು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.

ತಾಲ್ಲೂಕಿನ ಮಲವಂತಿಗೆ ಗ್ರಾಮದ ಗಂಗಯ್ಯ (48), ನೆರಿಯ ಗ್ರಾಮದ ಮರಿಯಾ ಪೌಲ್‌ (67), ಗಂಡಿಬಾಗಿಲಿನ ಥಾಮಸ್‌ ಪಿ.ಟಿ. (58), ಇಳಂತಿಲ ಗ್ರಾಮದ ಅಣ್ಣು ನಲಿಕೆ (75), ಪಡಂಗಡಿಯ ವಿದ್ಯಾ (29) ಅವರಲ್ಲಿ ಇಲಿಜ್ವರ ಪತ್ತೆಯಾಗಿದೆ. ಮರಿಯಾ, ಥಾಮಸ್‌ ಮತ್ತು ಅಣ್ಣು ಅವರು ಮಂಗಳೂರಿನ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ, ಗಂಗಯ್ಯ ಯೇನೆಪೋಯ ಆಸ್ಪತ್ರೆಯಲ್ಲಿ, ವಿದ್ಯಾ ಅವರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗಾರೆ ಕೆಲಸ ಮಾಡುತ್ತಿದ್ದ ನನ್ನ ತಂದೆಗೆ ಎರಡು ವಾರಗಳ ಹಿಂದೆ ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿದ್ದು, ಉಜಿರೆಯ ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ತಂದೆಗೆ ಇಲಿಜ್ವರ ಇರುವುದು ಗೊತ್ತಾಯಿತು. 10 ದಿನ ಚಿಕಿತ್ಸೆ ನೀಡಿದ ಬಳಿಕ ಯೇನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಆಸ್ಪತ್ರೆಯ ಬಿಲ್‌ ಕಟ್ಟಲು ನಮ್ಮಲ್ಲಿ ದುಡ್ಡಿಲ್ಲ’ಎನ್ನುತ್ತಾರೆ ಗಂಗಯ್ಯ ಅವರ ಪುತ್ರ ಯೋಗೀಶ್.

‘ತಾಲ್ಲೂಕಿನ ಐದು ಮಂದಿಗೆ ಇಲಿಜ್ವರ ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ತಂಡಗಳು, ರೋಗಿಗಳ ಮನೆಗಳಿಗೆ ತೆರಳಿ, ರೋಗದ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ ನೀಡಿವೆ.
ಬಾವಿಯ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಪರೀಕ್ಷಿಸಲಾಗುತ್ತಿದ್ದು, ಕುಡಿಯಲು ಸಾಧ್ಯವಿಲ್ಲ ಎಂದಾದರೆ ಕ್ಲೋರಿನೈಸೇಷನ್‌ ಮಾಡಿ ಮತ್ತೆ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಹೇಳಿದ್ದಾರೆ.

‘20 ನಿಮಿಷ ಕುದಿಸಿದ ಬಳಿಕ ನೀರನ್ನು ಸೋಸಿ, ಆರಿಸಿ ಕುಡಿಯಬೇಕು. ‘ಲೆಪ್ಟೋಸ್ಪಿರೊಸಿಸ್’ ಎಂಬ ವೈರಾಣು ಮನುಷ್ಯನಿಗೆ ಹರಡುವ ಸಾಧ್ಯತೆ ಇರುವುದರಿಂದ ಇಲಿಗಳು ತಿಂದ ಹಣ್ಣು– ತರಕಾರಿಗಳನ್ನು ಬಳಸಬಾರದು. ಹಣ್ಣುಗಳನ್ನು ಬಿಸಿ ನೀರಿನಿಂದ ತೊಳೆದು ಸೇವಿಸಬೇಕು. ಕೊಟ್ಟಿಗೆಗಳಲ್ಲಿ ಇಲಿಗಳು ಮೂತ್ರ ಮಾಡಿರುವ ಸಾಧ್ಯತೆ ಇರುವುದರಿಂದ ಚಪ್ಪಲಿ ಹಾಕದೇ ಓಡಾಡಬಾರದು. ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ ಕುಮಾರ್‌ ತಿಳಿಸಿದ್ದಾರೆ.

*

"ನೆರೆಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ವಾಂತಿಭೇದಿ, ವಿಷಮಶೀತಜ್ವರ, ಇಲಿಜ್ವರ, ಜಾಂಡಿಸ್‌ ಭೀತಿ ಇದೆ.

-ಡಾ.ನವೀನ್‌ ಕುಮಾರ್‌ ,ಜಿಲ್ಲಾ ಸರ್ವೇಕ್ಷಣಾಧಿಕಾರಿ

Post Comments (+)