ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರತ್ನಕರಂಡಕ-ಶ್ರಾವಕಾಚಾರ’ ಕೃತಿ ಲೋಕಾರ್ಪಣೆ

Last Updated 8 ಆಗಸ್ಟ್ 2022, 5:14 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ದೇಹಕ್ಕೆ ಮಾತ್ರ ಸಾವು ಹೊರತು ಆತ್ಮಕ್ಕೆ ಸಾವಿಲ್ಲ. ನಾವು ಸಕಲ ಪಾಪ ಕರ್ಮಗಳ ಕೊಳೆಯನ್ನು ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು

ಭಾನುವಾರ ಪೆರಿಂಜೆ ಬಸದಿಯಲ್ಲಿ ಭಗವಾನ್ ಪುಷ್ಪದಂತ ಸ್ವಾಮಿ ಸನ್ನಿಧಿಯಲ್ಲಿ ‘ರತ್ನಕರಂಡಕ-ಶ್ರಾವಕಾಚಾರ’ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ದೇವರು, ಗುರುಗಳು ಮತ್ತು ಶಾಸ್ತ್ರದ ಆರಾಧನೆಯೊಂದಿಗೆ ನಿತ್ಯವೂ ಜಪ, ತಪ, ಧ್ಯಾನ, ಸ್ವಾಧ್ಯಾಯ ಮಾಡುವುದರಿಂದ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ‘ರತ್ನಕರಂಡಕ ಶ್ರಾವಕಾಚಾರ’ ಅಮೂಲ್ಯ ಕೃತಿಯಾಗಿದ್ದು ಸಾರ್ಥಕ ಬದುಕಿಗೆ ದಾರಿದೀಪವಾಗಿದೆ. ಆತ್ಮಕಲ್ಯಾಣದೊಂದಿಗೆ ದೈನಂದಿನ ಜೀವನದಲ್ಲಿ ಆಚಾರ-ವಿಚಾರ, ನೀತಿ, ನಿಯಮ, ಶಾಂತಿ, ಕ್ಷಮೆ, ವಿವೇಕ, ಆಚಾರ ಸಂಹಿತೆ ಇತ್ಯಾದಿಗಳ ಬಗ್ಯೆ ಉಪಯುಕ್ತ ಮಾಹಿತಿ-ಮಾರ್ಗದರ್ಶನವಿದೆ ಎಂದರು.

ಆದರ್ಶ ಶ್ರಾವಕಿಯಾಗಿ, ಧರ್ಮಾನುರಾಗಿಯಾಗಿದ್ದ ದಿವಂಗತ ಪೆರಿಂಜೆ ಕರಿಮಣೇಲು ಅಜಿತ ಕುಮಾರಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂಬತ್ತು ಬಾರಿ ಪಂಚನಮಸ್ಕಾರ ಮಂತ್ರ ಪಠಣ ಮಾಡಲಾಯಿತು.

ಭಗವಾನ್ ಪುಷ್ಪದಂತ ಸ್ವಾಮಿ ಸನ್ನಿಧಿಯಲ್ಲಿ 216 ಕಲಶ ಅಭಿಷೇಕ, ಆದಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಬ್ರಹ್ಮಯಕ್ಷ ದೇವರು ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ, ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ಪಾದಾಭಿಷೇಕ ನಡೆಯಿತು.

ರತ್ನಕರಂಡಕ ಶ್ರಾವಕಾಚಾರ ಕೃತಿಯನ್ನು ಶಾಸ್ತ್ರದಾನವಾಗಿ ಸ್ವಾಧ್ಯಾಯಕ್ಕಾಗಿ ಎಲ್ಲರಿಗೂ ವಿತರಿಸಲಾಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪೆರಿಂಜೆಗುತ್ತು ಜಯರಾಜ ಕಂಬ್ಳಿ, ವಿಕಾಸ್ ಜೈನ್, ವಿಶ್ವಾಸ್ ಜೈನ್, ಮೂಡಬಿದ್ರೆ ರೋಟರಿ ಕ್ಲಬ್ ಇನ್ನರ್‌ವೀಲ್ ಅಧ್ಯಕ್ಷೆ ರಮ್ಯಾ ಜೈನ್ ಇದ್ದರು.

ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT