ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಸಿದ ನೀರಿನ ತೆರಿಗೆ ಕಡಿಮೆ ಮಾಡಿ: ಮಂಗಳೂರು ಪಾಲಿಕೆ ಪ್ರತಿಪಕ್ಷ ಸದಸ್ಯರ ಆಗ್ರಹ

ಮಹಾನಗರ ಪಾಲಿಕೆ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರ ಆಗ್ರಹ
Last Updated 27 ಆಗಸ್ಟ್ 2021, 14:27 IST
ಅಕ್ಷರ ಗಾತ್ರ

ಮಂಗಳೂರು: ಹೆಚ್ಚಿಸಿರುವ ನೀರಿನ ತೆರಿಗೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.

ಇಲ್ಲಿನ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಸದಸ್ಯ ಅಬ್ದುಲ್‌ ರವೂಫ್‌, 24 ಸಾವಿರ ಲೀಟರ್‌ವರೆಗೆ ಮಾಸಿಕ ಕನಿಷ್ಠ ಶುಲ್ಕ ₹65 ಇತ್ತು. ಪರಿಷ್ಕರಣೆಯ ನಂತರ 8 ಸಾವಿರ ಲೀಟರ್‌ಗೆ ₹56 ವಿಧಿಸಲಾಗಿದೆ. ಇದರಿಂದ 24 ಸಾವಿರ ಲೀಟರ್‌ಗೆ ಸಾರ್ವಜನಿಕರು ₹168 ಶುಲ್ಕ ಪಾವತಿಸಬೇಕಾಗಿದೆ. ನೀರಿನ ತೆರಿಗೆ ಕಡಿಮೆ ಮಾಡುವ ಕುರಿತು ಪಾಲಿಕೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅದಾಗ್ಯೂ ತೆರಿಗೆ ಕಡಿತ ಮಾಡಿಲ್ಲ ಎಂದು ದೂರಿದರು.

ನೀರಿನ ತೆರಿಗೆ ಕಡಿಮೆ ಮಾಡಲು ನಿರ್ಣಯ ಅಂಗೀಕರಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮೂರು ಎಂಜಿನ್‌ಗಳ ಬಿಜೆಪಿ ಆಡಳಿತದಿಂದ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿನಯ್‌ರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌ ಮಾತನಾಡಿ, ನೀರಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಿ 2020 ರ ಅಕ್ಟೋಬರ್‌ನಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ನೀರಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ಪಾಲಿಕೆ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಸರ್ಕಾರ ಉತ್ತರಿಸಿದೆ ಎಂದು ತಿಳಿಸಿದರು.

ಕನಿಷ್ಠ ದರ ವಿಧಿಸಲು ನಿರ್ಣಯ

ನಳದ ಸಂಪರ್ಕದ ಮೀಟರ್‌ಗಳು ಕೆಟ್ಟಿರುವ ಅವಧಿಯಲ್ಲಿ ಕನಿಷ್ಠ ಶುಲ್ಕ ವಿಧಿಸಲು ಶುಕ್ರವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ವಿಷಯ ಪ್ರಸ್ತಾಪಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ನಳದ ಸಂಪರ್ಕದ ಮೀಟರ್ ದುರಸ್ತಿ ಮಾಡುವಂತೆ ನೋಟಿಸ್‌ ನೀಡಿದ ನಂತರವೂ ಗ್ರಾಹಕರು ದುರಸ್ತಿ ಮಾಡದೇ ಇದ್ದಲ್ಲಿ, ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ₹6 ಸಾವಿರದವರೆಗೆ ಬಿಲ್‌ ಬರುತ್ತಿದೆ ಎಂದರು.

ವಿಸ್ತೃತ ಚರ್ಚೆಯ ನಂತರ, ಮೀಟರ್ ಕೆಟ್ಟಿರುವ ಅವಧಿಯಲ್ಲಿ ಕನಿಷ್ಠ ಶುಲ್ಕ ವಿಧಿಸಬೇಕು. ದುರಸ್ತಿಯ ನಂತರವೂ ಮೀಟರ್ ಸರಿಯಾಗಿ ಕೆಲಸ ಮಾಡದೇ ಇದ್ದರೆ, ಪಾಲಿಕೆಯ ಅಧಿಕಾರಿಗಳು ಕನಿಷ್ಠ ದರ ವಿಧಿಸಬೇಕು ಎಂದು ನಿರ್ಣಯಿಸಲಾಯಿತು.

ವಿದ್ಯುತ್ ಕಂಬಗಳಲ್ಲಿ ಕೇಬಲ್‌ ಅಳವಡಿಕೆ

ವಿದ್ಯುತ್ ಕಂಬಗಳಲ್ಲಿ ಕೇಬಲ್‌ಗಳನ್ನು ಅಳವಡಿಸುತ್ತಿರುವ ಖಾಸಗಿ ಸಂಸ್ಥೆಗಳು ಪಾಲಿಕೆಯ ಪರವಾನಗಿ ಪಡೆಯಲು ಸೂಚಿಸುವಂತೆ ಮೆಸ್ಕಾಂಗೆ ನಿರ್ದೇಶನ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್ ತಿಳಿಸಿದರು.

ಪಾರ್ಕಿಂಗ್ ಕುರಿತು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ನಗರದಲ್ಲಿ ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆ ಕುರಿತು ಚರ್ಚಿಸಲು ಬರುವ ವಾರ ಸಂಚಾರ ಪೊಲೀಸರ ಜೊತೆಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ನಗರದಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸುತ್ತಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಕೈಗೊಳ್ಳುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಅಕ್ಷಯ್‌ ಶ್ರೀಧರ್‌, ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ಅಗತ್ಯ ಯಂತ್ರೋಪಕರಣ, ಸಿಬ್ಬಂದಿಯನ್ನು ಒದಗಿಸುವ ಮೂಲಕ ಸೋಮವಾರದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಉಪ ಮೇಯರ್ ಸುಮಂಗಳಾ ರಾವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಮೀನುಗಾರಿಕೆ ವಿವಿ: ಪಾಲಿಕೆ ನಿರ್ಣಯ

ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕೆ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವಂತೆ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಪಾಲಿಕೆ ಸಭೆಯಲ್ಲಿ ಕೈಗೊಳ್ಳಲಾಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಭರತ್‌ಕುಮಾರ್‌, ಎಕ್ಕೂರಿನಲ್ಲಿ 1969 ರಲ್ಲಿ ಮೀನುಗಾರಿಕೆ ಕಾಲೇಜು ಆರಂಭವಾಗಿದ್ದು, ಈ ಮೊದಲು ಈ ಕಾಲೇಜು ಕೃಷಿ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿತ್ತು. ಇದೀಗ ಬೀದರನಲ್ಲಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತ್ಯೇಕ ಮೀನುಗಾರಿಕೆ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಬೇಕು ಎಂದು ಹೇಳಿದರು.

ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಮೀನುಗಾರರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಅನುಕೂಲ ಆಗಲಿದೆ. ಅಲ್ಲದೇ ಮೀನುಗಾರರಿಗೆ ತಾಂತ್ರಿಕ ಹಾಗೂ ಕೌಶಲ ಅಭಿವೃದ್ಧಿಗೂ ಅನುಕೂಲ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT