ಗುರುವಾರ , ಜೂನ್ 17, 2021
21 °C
ಜಿಲ್ಲಾಡಳಿತದಿಂದ ಹೊಸ ಸೂಚನೆ

ಕೋವಿಡ್ ತಡೆ ಲಸಿಕೆಗೆ ನೋಂದಣಿ ಕಡ್ಡಾಯ: ಮಾಹಿತಿ ಇಲ್ಲದೇ ಸರದಿಯಲ್ಲಿ ನಿಂತ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್ ತಡೆ ಲಸಿಕೆಯ ಪ್ರಥಮ ಡೋಸ್ ಪಡೆಯಲು ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಣಿ ಕಡ್ಡಾಯಗೊಳಿಸಿ ದ.ಕ. ಜಿಲ್ಲಾಧಿಕಾರಿ ಬುಧವಾರ ಆದೇಶಿಸಿದ್ದು, ಗುರುವಾರ ಕೆಲವರು ಲಸಿಕೆ ಪಡೆಯಲು ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದರಿಂದ ಕೆಲ ಹೊತ್ತು ಸರದಿಯಲ್ಲಿ ಕಾಯುವಂತಾಯಿತು. ಮನವರಿಕೆ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾ ಲಸಿಕೆ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ರಾಜೇಶ್ ತಿಳಿಸಿದ್ದಾರೆ.

ಕೋವಿಡ್ ತಡೆ ಲಸಿಕೆ ಬೇಡಿಕೆಗೆ ತಕ್ಕಂತೆ ಲಭ್ಯವಾಗಿಲ್ಲ. ಅಲ್ಲದೇ ಏಕಕಾಲದಲ್ಲಿ ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆ ನೀಡಬೇಕಾದ ಒತ್ತಡವಿದೆ. ಹೀಗಾಗಿ ಜಿಲ್ಲಾಡಳಿತ ಪ್ರಥಮ ಡೋಸ್ ಲಸಿಕೆ ಪಡೆಯುವುದನ್ನು ಆನ್‌ಲೈನ್, ಆ್ಯಪ್ ನೋಂದಣಿ ಕಡ್ಡಾಯಗೊಳಿಸಿದೆ. ಇದರ ಮಾಹಿತಿ ಇಲ್ಲದೇ ಗುರುವಾರ ಹಲವರು ಪ್ರಥಮ ಡೋಸ್‌ಗಾಗಿ ವೆನ್ಲಾಕ್‌ ಆಸ್ಪತ್ರೆಗೆ ಬಂದಿದ್ದರು.

ಪ್ರಥಮ ಹಾಗೂ ದ್ವಿತೀಯ ಡೋಸ್‌ ಪಡೆಯಲು ವೆನ್ಲಾಕ್ ಆಸ್ಪತ್ರೆಗೆ ಬರುವವರಿಗೆ ಈ ಮೊದಲು ಟೋಕನ್‌ ನೀಡಲಾಗುತ್ತಿತ್ತು. ಆದರೆ ಗುರುವಾರ ದ್ವಿತೀಯ ಡೋಸ್‌ನವರಿಗೆ ಮಾತ್ರ ಟೋಕನ್ ನೀಡಲಾಯಿತು.

ಲಸಿಕೆಗಾಗಿ ಟೋಕನ್ ಪಡೆಯಲು ಬೆಳಿಗ್ಗೆ 7 ಗಂಟೆಯಿಂದಲೇ ಜನರು ಬಂದಿದ್ದರು. ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆ 8.45ರ ವೇಳೆಗೆ ಟೋಕನ್ ನೀಡಲಾಗುತ್ತದೆ. 9 ಗಂಟೆಯಿಂದ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಮೊದಲ ಹಂತದಲ್ಲಿ 50 ಮಂದಿಗೆ ಟೋಕನ್ ಕೊಡಲಾಗುತ್ತದೆ. ಮುಂದಿನ ಸರದಿಯವರಿಗೆ ಒಂದು ಗಂಟೆಯ ಬಳಿಕ ಟೋಕನ್‌ ನೀಡುವ ವ್ಯವಸ್ಥೆ ಇದೆ. ಬುಧವಾರ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಮಾಹಿತಿ ಇಲ್ಲದೇ ಕೆಲವರು ಪ್ರಥಮ ಡೋಸ್ ಪಡೆಯಲು ಸರದಿಯಲ್ಲಿ ನಿಂತಿದ್ದರು.

ಕಾಂಗ್ರೆಸ್‌ ಸಹಾಯವಾಣಿ ನೆರವು: ಮೊದಲ ಡೋಸ್‌ಗಾಗಿ ವೆನ್ಲಾಕ್ ಆಸ್ಪತ್ರೆಗೆ ಹೋದ ಜನರಿಗೆ ಟೋಕನ್‌ಗಳನ್ನು ಹಿಂದಿರುಗಿಸಲು ಅಲ್ಲಿನ ಸಿಬ್ಬಂದಿ ಹೇಳಿದರು. ಲಸಿಕೆ ತೆಗೆದುಕೊಳ್ಳಲು ಅನುಮತಿ ನೀಡಲಿಲ್ಲ. ಈ ಬಗ್ಗೆ ಜನರು ಜಿಲ್ಲಾ ಕಾಂಗ್ರೆಸ್ ಸಹಾಯವಾಣಿಗೆ ಕರೆ ಮಾಡಿದರು.

ಸ್ಥಳಕ್ಕೆ ಬಂದ ಮಾಜಿ ಶಾಸಕ ಐವನ್ ಡಿಸೋಜ, ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ನೇತೃತ್ವದಲ್ಲಿ ಇತರ ಕಾಂಗ್ರೆಸ್ ಮುಖಂಡರು, ಅವರಿಗೆ ಲಸಿಕೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ವಿನಂತಿಸಿದರು. ಅದರಂತೆ ಜಿಲ್ಲಾಧಿಕಾರಿ ಆ ಜನರಿಗೆ ತಮ್ಮ ಮೊದಲ ಡೋಸ್ ಲಸಿಕೆ ಪಡೆಯಲು ಅವಕಾಶ ಮಾಡಿಕೊಟ್ಟರು.

‘ನೋಂದಣಿ ಮೂಲಕವೇ ಲಸಿಕೆ’

‘ಟೋಕನ್ ವ್ಯವಸ್ಥೆಯಡಿ ನಿತ್ಯ 500ಕ್ಕೂ ಅಧಿಕ ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಪ್ರಥಮ ಡೋಸ್ ಅನ್ನು ಆ್ಯಪ್ ಅಥವಾ ಆನ್‌ಲೈನ್ ನೋಂದಣಿ ಮೂಲಕವೇ ಪಡೆಯುವಂತೆ ಜಿಲ್ಲಾಧಿಕಾರಿ ಬುಧವಾರ ಪ್ರಕಟಣೆಯನ್ನೂ ನೀಡಿದ್ದರು. ಹಾಗಾಗಿ ವೆನ್ಲಾಕ್‌ನಲ್ಲಿಯೂ ಗುರುವಾರ ದ್ವಿತೀಯ ಡೋಸ್‌ನವರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರಥಮ ಡೋಸ್‌ಗೆ ಬರುವವರಿಗೆ ಆನ್‌ಲೈನ್ ನೋಂದಣಿ ಮಾಡಿಕೊಂಡು ಬರುವಂತೆ ತಿಳಿಸಿ ಕಳುಹಿಸಲಾಗಿದೆ’ ಎಂದು ಡಾ.ರಾಜೇಶ್‌ ತಿಳಿಸಿದರು.

‘ಪ್ರಥಮ ಡೋಸ್ ಪಡೆದವರು ನಿಗದಿತ ಅವಧಿಯ ಬಳಿಕ ದ್ವಿತೀಯ ಡೋಸ್ ಪಡೆಯುವುದು ಅಗತ್ಯ. ಇಲ್ಲವಾದಲ್ಲಿ ಪ್ರಥಮ ಡೋಸ್ ಪ್ರಯೋಜನವಾಗದು. ಬಹುತೇಕ ಜನರು ಪ್ರಥಮ ಡೋಸ್ ಪಡೆದು ಐದಾರು ವಾರಗಳಾಗಿವೆ. ಅವರಿಗೆ ದ್ವಿತೀಯ ಡೋಸ್ ಅಗತ್ಯವಾಗಿದೆ. ಹೀಗಾಗಿ ಆದ್ಯತೆ ಮೇರೆಗೆ ಅವರಿಗೆ ಲಸಿಕೆ ನೀಡಲು ಈ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು