ಶುಕ್ರವಾರ, ಮೇ 20, 2022
23 °C
ಸುರತ್ಕಲ್‌ ಟೋಲ್‌ ಗೇಟ್‌ನಲ್ಲಿ ಫಾಸ್ಟ್ಯಾಗ್‌ ಕಡ್ಡಾಯಕ್ಕೆ ವಿರೋಧ

ಅಕ್ರಮ ಟೋಲ್‌ ತೆರವುಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುರತ್ಕಲ್ ಟೋಲ್‌ಗೇಟ್ ತಾತ್ಕಾಲಿಕವಾಗಿ ಮುಂದುವರಿದಿದ್ದು, ಫೆ.15ರಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದರೆ ತಡೆಯೊಡ್ಡಲಾಗುವುದು ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ನೇತೃತ್ವದ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ‘ಹೆಜಮಾಡಿ ಟೋಲ್ ಕೇಂದ್ರ ಆರಂಭದ ಬಳಿಕ, ತೆರವುಗೊಳಿಸುವ ಷರತ್ತಿನೊಂದಿಗೆ ಆರು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಆರಂಭವಾಗಿತ್ತು. ಆರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಅನುಮತಿ ಪಡೆದು ಆರಂಭಗೊಂಡ ಈ ಟೋಲ್ ಈಗಲೂ ಮುಂದುವರಿಯುತ್ತಿರುವುದು ಅಕ್ರಮ’ ಎಂದು ದೂರಿದರು.

2018ರಲ್ಲಿ ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್ ಟೋಲ್ ಮುಚ್ಚಿ ಹೆಜಮಾಡಿ ಟೋಲ್ ಕೇಂದ್ರ ಜೊತೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರದ ಅನುಮೋದನೆ ಪಡೆದಿದೆ. ಆದರೆ ವಿಲೀನ ನಿರ್ಧಾರ ಅನುಷ್ಠಾನವಾಗದೇ, ಬಲವಂತದ ಟೋಲ್ ಸಂಗ್ರಹ ಮುಂದುವರಿದಿದೆ ಎಂದು ಆರೋಪಿಸಿದರು.

ಇದೀಗ ಫಾಸ್ಟ್ಯಾಗ್‌ ಕಡ್ಡಾಯದ ನೆಪವೊಡ್ಡಿ ಫೆ.15ರಿಂದ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ಸೇರಿದಂತೆ ಎಲ್ಲ ರಿಯಾಯಿತಿಗಳನ್ನು ಹಿಂಪಡೆಯಲು ಮುಂದಾಗಿದೆ. ಈಗಾಗಲೇ ಸ್ಥಳೀಯ ಖಾಸಗಿ ಸಿಟಿ, ಸರ್ವಿಸ್ ಬಸ್‌ಗಳು, ಗೂಡ್ಸ್, ಟೂರಿಸ್ಟ್ ವಾಹನಗಳ ರಿಯಾಯಿತಿ ಪಾಸ್‌ಗಳನ್ನು ಹಿಂಪಡೆದು ಫಾಸ್ಟ್ಯಾಗ್‌ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಆಗಿರುವ ತೀರ್ಮಾನದಂತೆ ಸುರತ್ಕಲ್ ಅಕ್ರಮ ಟೋಲ್ ಕೇಂದ್ರವನ್ನು ತೆರವುಗೊಳಿಸಿ, ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸಬೇಕು. ಅಲ್ಲಿಯವರೆಗೆ ಸ್ಥಳೀಯ ಸಾರ್ವಜನಿಕ ಬಸ್‌, ಗೂಡ್ಸ್ ವಾಹನಗಳ ರಿಯಾಯಿತಿ, ಖಾಸಗಿ ವಾಹನಗಳ ಉಚಿತ ಪ್ರಯಾಣ ವ್ಯವಸ್ಥೆಯನ್ನು ಈಗಿನಂತೆ ಮುಂದುವರಿಸಬೇಕು. ಬಲವಂತದಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದರೆ ವ್ಯಾಪಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೆಜಮಾಡಿ ಟೋಲ್ ಕೇಂದ್ರದಲ್ಲಿ ಐದು ಕಿ.ಮೀ. ದೂರದವರೆಗೆ ಹರಡಿರುವ ಸ್ಥಳೀಯ ಪಡುಬಿದ್ರಿ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಈ ಶುಲ್ಕ ವಿನಾಯಿತಿಯನ್ನು ಫಾಸ್ಟ್ಯಾಗ್‌ ಕಡ್ಡಾಯದ ನಂತರವೂ ಮುಂದುವರಿಸಬೇಕು. ಅದೇ ಸಂದರ್ಭದಲ್ಲಿ ಹೆಜಮಾಡಿ ಟೋಲ್ ಕೇಂದ್ರದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಮೂಲ್ಕಿ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಮುಖಂಡರಾದ ಹರೀಶ್ ಪುತ್ರನ್, ಎಂ. ದೇವದಾಸ್, ಶೇಖರ್ ಹೆಜಮಾಡಿ, ದಿನೇಶ್ ಕುಂಪಲ, ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ರಮೇಶ್ ಟಿ.ಎನ್., ಕನಕದಾಸ್ ಕೂಳೂರು, ವಿನ್ಸೆಂಟ್ ಪಿರೇರಾ, ಅಬೂಬಕರ್ ಬಾವಾ, ರಶೀದ್ ಮುಕ್ಕ, ಧನ್‌ರಾಜ್ ಸಸಿಹಿತ್ಲು, ಶಶಿ ಅಮೀನ್, ಮಧು ಆಚಾರ್ಯ, ಸದಾಶಿವ ಹೊಸದುರ್ಗ, ಇಕ್ಬಾಲ್ ಅಹಮ್ಮದ್ ಮುಲ್ಕಿ, ಸಂತೋಷ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು