ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲರಿಗೂ ಆರೋಗ್ಯಕ್ಕೆ ಹೋಮಿಯೋಪಥಿ ಅನಿವಾರ್ಯ’

ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು: `ಇನ್ವೆನಿಯೋ 2ಕೆ19' ಹೋಮಿಯೋಪಥಿ ಸಮ್ಮೇಳನಕ್ಕೆ ಚಾಲನೆ
Last Updated 19 ಅಕ್ಟೋಬರ್ 2019, 10:47 IST
ಅಕ್ಷರ ಗಾತ್ರ

ಮಂಗಳೂರು: ‘2020ರೊಳಗೆ ಎಲ್ಲರಿಗೂ ಆರೋಗ್ಯವನ್ನು ಕಲ್ಪಿಸುವ ಸಂಕಲ್ಪವನ್ನು ಈಡೇರಿಸಲು ಹೋಮಿಯೋಪಥಿಯನ್ನು ಒಳಗೊಳ್ಳುವುದು ಅನಿವಾರ್ಯ’ ಎಂದು ಕರ್ನಾಟಕ ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್ ಹೇಳಿದರು.

ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಆಯೋಜಿಸಲಾದ 24ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ `ಇನ್ವೆನಿಯೋ 2ಕೆ19'ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರಿಗೂ ಆರೋಗ್ಯದ ಧ್ಯೇಯದ ನಿಟ್ಟಿನಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಿದ್ದ ಪ್ರಸ್ತಾವ ಪರಿಗಣಿಸಿದ ರಾಜ್ಯ ಸರ್ಕಾರವು 200 ಕಡೆಗಳಲ್ಲಿ ಹೋಮಿಯೋಪಥಿ ಔಷಧಾಲಯ ಆರಂಭಿಸಲು ಬಜೆಟ್‍ನಲ್ಲಿ ಅನುಮೋದನೆ ನೀಡಿದೆ. ಈಗಾಗಲೇ ₹10 ಕೋಟಿ ವೆಚ್ಚದಲ್ಲಿ 100 ಔಷಧಾಲಯಗಳನ್ನು ಸ್ಥಾಪಿಸಲು ಆದೇಶವಾಗಿದೆ’ ಎಂದರು.

‘ಆರೋಗ್ಯ ಸಮಸ್ಯೆ ಇಂದು ಶ್ರೀಮಂತರನ್ನೂ ಹೈರಾಣಾಗಿಸುತ್ತಿದೆ. ಜನರನ್ನು ಕಾಡುತ್ತಿರುವ ಸಂಕೀರ್ಣ ಹಾಗೂ ದೀರ್ಘಕಾಲಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರ್ಯಾಯ ವ್ಯವಸ್ಥೆಯಾಗಿ ಹೋಮಿಯೋಪಥಿ ಜನಪ್ರಿಯಗೊಳ್ಳುತ್ತಿದೆ’ ಎಂದರು.

‘ವೈದ್ಯರು ತಮ್ಮ ಕರ್ತವ್ಯದಲ್ಲಿ ನಿಷ್ಠೆ ಹಾಗೂ ಆಸಕ್ತಿಯಿಂದ ತೊಡಗಿಸಿಕೊಂಡಾಗ, ಆಯಾ ವೈದ್ಯಕೀಯ ಪದ್ಧತಿ ಪ್ರಚಲಿತಗೊಳ್ಳುತ್ತದೆ. ತಮ್ಮ ವೈದ್ಯಕೀಯ ತತ್ವಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿದರೆ ಆರೋಗ್ಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ’ ಎಂದರು.

ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ ಮಾತನಾಡಿ, ‘ಸಂಶೋಧನೆಗಳಿಲ್ಲದೇ ಅಭಿವೃದ್ಧಿ ಅಸಾಧ್ಯ. ಹೋಮಿಯೋಪಥಿಯು ಸಂಶೋಧನೆಗಳ ಮೂಲಕ ಸಂಕೀರ್ಣ ಕಾಯಿಲೆಯನ್ನೂ ಸಮರ್ಪಕವಾಗಿ ಗುಣಮುಖ ಮಾಡುವ ಸಾಧ್ಯತೆಯನ್ನು ಬೆಳೆಸಿಕೊಂಡಿದೆ’ ಎಂದು ಶ್ಲಾಘಿಸಿದರು.

‘ಇಂದು ಮೌಲ್ಯಮಾಪನದ ವಿಧಾನವು ಬದಲಾಗಿದೆ. ಅನುಭವಕ್ಕಿಂತ ಪ್ರಗತಿಯನ್ನು ಕೇಳುತ್ತಾರೆ’ ಎಂದರು. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಶಿವಪ್ರಸಾದ್, ಆಡಳಿತಾಧಿಕಾರಿ ರೆ.ಫಾ. ರೋಶನ್ ಕ್ರಾಸ್ತಾ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ಜೆ.ಕುರಿಯನ್, ಡಾ. ಸ್ಕಂದನ್ ಹಾಗೂ ಡಾ. ಶೆರ್ಲಿನ್ ಇದ್ದರು.

ಭವನಕ್ಕೆ ಸ್ವಂತ ವೇತನ ನೀಡಿದ ರುದ್ರೇಶ್
‘ಬೆಂಗಳೂರಿನ ಬಸವೇಶ್ವರ ನಗರದ ಮಾಗಡಿ ರಸ್ತೆ ಬಳಿಯ 20 ಗುಂಟೆ ಜಾಗದಲ್ಲಿ ಹೋಮಿಯೋಪಥಿ ಭವನ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿದೆ’ ಎಂದು ಡಾ.ಬಿ.ಟಿ.ರುದ್ರೇಶ್ ತಿಳಿಸಿದರು.

‘ಸುಮಾರು ₹ 1 ಕೋಟಿ ವೆಚ್ಚವಾಗಿದ್ದು, ಇದಕ್ಕಾಗಿ ತಾನು 7 ವರ್ಷಗಳ ವೇತನ, ವಾಹನ ಹಾಗೂ ಇತರ ಭತ್ಯೆಗಳು ಸೇರಿ ₹50 ಲಕ್ಷ ನೀಡಿದ್ದೇನೆ. ಅಲ್ಲದೇ, ಆಡಳಿತಾತ್ಮಕವಾಗಿ ಸುಮಾರು ₹20 ಲಕ್ಷ ಉಳಿಸಿದ್ದೇವೆ. ಇದನ್ನೇ ಭವನಕ್ಕೆ ಬಳಸಿಕೊಂಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT