7

ಕುಂಟಾರು-ಅತ್ತನಾಡಿ ರಸ್ತೆ: ದುರಸ್ತಿಗೆ ಒತ್ತಾಯ

Published:
Updated:
ಬದಿಯಡ್ಕ ಸಮೀಪದ ಕಾರಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಾರು–ಅತ್ತನಾಡಿ ರಸ್ತೆಯು ಕಳೆದ 10 ವರ್ಷಗಳಿಂದ ಡಾಂಬರ್ ಕಾಣದೆ ಶೋಚನೀಯ ಸ್ಥಿತಿಗೆ ತಲುಪಿದೆ. ಈ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಬದಿಯಡ್ಕ : ಕುಂಟಾರಿನಿಂದ ಅತ್ತನಾಡಿಗೆ ಸಂಪರ್ಕ ಕಲ್ಪಿಸುವ ಸುಮಾರು 1.5 ಕಿಲೋ ಮೀಟರ್ ಉದ್ದದ ಈ ರಸ್ತೆಯ ಡಾಮರ್‌  ಕಿತ್ತು ಹೋಗಿ ಸಂಚಾರವೇ ಕಷ್ಟವಾಗಿದೆ. ದುರಸ್ತಿ ಮಾಡಬೇಕು ಎಂದು ಸ್ಥಳೀಯರು  ಒತ್ತಾಯಿಸಿದ್ದಾರೆ.

ಕಾರಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ರಸ್ತೆ ಡಾಂಬರೀಕರಣ ನಡೆದ ಸುಮಾರು 10 ವರ್ಷ ಕಳೆಯಿತು. ಇದೀಗ ರಸ್ತೆ ಹೊಂಡಗಳಿಂದ ತುಂಬಿದೆ. ನಡುಬಯಲು ಪ್ರದೇಶದಲ್ಲಿ ರಸ್ತೆ ಇನ್ನಷ್ಟೂ ಹಾಳಾಗಿದೆ. ಈ ರಸ್ತೆಯ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸಿದ್ದರೂ, ಪ್ರಯೋಜನವಾಗಿಲ್ಲ. ವಾಹನ ಪ್ರಯಾಣಿಕರು ಸುತ್ತುಬಳಸಿ  ಸಂಚರಿಸಬೇಕಿದೆ. ಇದೇ ರಸ್ತೆಯ ಉಯಿತ್ತಡ್ಕ ಪ್ರದೇಶದಲ್ಲಿ ಅರ್ಧ ಕಿ.ಮೀ. ಭಾಗ ಬಹುಕಾಲದಿಂದ ಡಾಮರೀಕರಣ, ದುರಸ್ತಿಯೂ ಇಲ್ಲದೆ ನನೆಗುದಿಗೆ ಬಿದ್ದಿತ್ತು.

ನಿರಂತರ ಒತ್ತಾಯದ ಪರಿಣಾಮವಾಗಿ ಸ್ಥಳೀಯರ ವಿರೋಧ ಹಾಗೂ ಒಪ್ಪಂದದ ಆಧಾರದಲ್ಲಿ 2015 ಮಾರ್ಚ್‌ ತಿಂಗಳಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ವತಿಯಿಂದ ₹ 2 ಲಕ್ಷ ವೆಚ್ಚದಲ್ಲಿ  ಅಭಿವೃದ್ಧಿ ಮಾಡಲಾಯಿತು. ಹಾಗೆಯೇ ಶಾಸಕರ ನಿಧಿಯನ್ನು ಬಳಸಿ ಡಾಮರೀಕರಿಸಲಾಯಿತು. ಇದರಿಂದಾಗಿ ಈಗ ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಂಡಿತು.

ಆದರೆ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಮಸ್ಯೆಗಳು ಮತ್ತೆ ಸೃಷ್ಟಿಯಾಗಿವೆ. ಈ ರಸ್ತೆಯ ಇಕ್ಕಡೆಯಲ್ಲೂ ಚರಂಡಿ ವ್ಯವಸ್ಥೆ ಇಲ್ಲ. ಇದು ರಸ್ತೆ ಹಾಳಾಗುವುದಕ್ಕೆ ಮೂಲ ಕಾರಣ ಎಂದು ಆತಂಕವನ್ನು ಜನರು ಹೇಳುತ್ತಾರೆ. ಇದರ ಮೂಲಕ ದಿನ ನಿತ್ಯ ನೂರಾರು ವಾಹನಗಳು, ಕಾಲ್ನಡಿಗೆಯ ಮೂಲಕ ಶಾಲಾ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು ಮೊದಲಾದವರು ಸಾಗುತ್ತಾರೆ. ಆದರೆ ಇವೆಲ್ಲಕ್ಕೂ ದುರಸ್ತಿಯಾಗದೇ ಉಳಿದ 1 ಕಿ. ಮೀ. ರಸ್ತೆ ಅಡ್ಡಿಯಾಗಿದೆ.

ಈ ರಸ್ತೆಯು ನಂದ್ಯಾರ್ ಪದವು-ಪಾರಶಾಲಾ ಮಲೆನಾಡು ಹೆದ್ದಾರಿಯನ್ನು ಅತ್ತನಾಡಿಯಲ್ಲಿ ಸಂಪರ್ಕಿಸುವ ಕಾರಣ  ಹೆಚ್ಚಿನ  ಮಹತ್ವ ಇದೆ. ಅಧಿಕಾರಿಗಳು ರಸ್ತೆಯ ದುರಸ್ತಿಗೆ  ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಪರವಾಗಿ ಕುಂಟಾರಿನ ದಿಲೀಪ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !