ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪೊಲೀಸರ ಮೇಲೆ ಹಲ್ಲೆ; ಆರೋಪಿಗಳು ಪರಾರಿ

ಹೊಸಂಗಡಿ ಜುವೆಲ್ಲರಿ ಕಳ್ಳತನ: ₹14.35 ಲಕ್ಷ ಮೌಲ್ಯದ ವಸ್ತು ವಶ
Last Updated 29 ಜುಲೈ 2021, 7:03 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ದರೋಡೆ ಮಾಡಿ ಬರುತ್ತಿದ್ದ ವೇಳೆ ಆರೋಪಿಗಳ ಕಾರನ್ನು ಅಡ್ಡಗಟ್ಟಿದ ಉಳ್ಳಾಲ ಪೊಲೀಸರು, 7.75 ಕೆಜಿ ಬೆಳ್ಳಿ ಸೇರಿದಂತೆ ₹14,35,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇಲೆ ಸೋಮವಾರ ಬೆಳಿಗ್ಗೆ ಉಳ್ಳಾಲ ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್‌ ಟಿ.ಆರ್‌. ಹಾಗೂ ಸಿಬ್ಬಂದಿ ಕೆ.ಸಿ. ರೋಡ್‌ ಜಂಕ್ಷನ್‌ ಬಳಿ, ಮಂಜೇಶ್ವರದಿಂದ ಬರುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಲು ಯತ್ನಿಸಿದರು. ಆಗ ಕಾರಿನಲ್ಲಿದ್ದವರು ಆಯುಧದಿಂದ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಯತ್ನಿಸಿ ಪರಾರಿಯಾಗಿದ್ದಾರೆ.

ನಂತರ ಕಾರನ್ನು ತಪಾಸಣೆ ಮಾಡಿದಾಗ, 7.75 ಕೆಜಿ ಬೆಳ್ಳಿ, ₹1.90 ಲಕ್ಷ ನಗದು, 30 ಹರಳುಗಳು, ವಿವಿಧ ಕಂಪನಿಯ ವಾಚ್‌ಗಳು, ಡಿವಿಆರ್‌, ಕಬ್ಬಿಣದ ಕತ್ತರಿ, ಮೆಣಸಿನ ಹುಡಿ ಪ್ಯಾಕೆಟ್‌, ಸ್ಪ್ರೇ ಪೈಂಟ್‌ ಡಬ್ಬಿ, ಎಲೆಕ್ಟ್ರಾನಿಕ ಮಾಪಕ, ಸೈರನ್‌ ಮೆಶಿನ್‌, ಗ್ಯಾಸ್‌ ಸಿಲಿಂಡರ್‌, ಕಬ್ಬಿಣದ ಕಟ್ಟರ್‌, ಕಬ್ಬಿಣದ ರಾಡ್‌ಗಳು, ಮಚ್ಚು ಹಾಗೂ ಇನ್ನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫರಂಗಿಪೇಟೆಯ ಮೊಹಮ್ಮದ್ ಗೌಸ್‌, ಸುರತ್ಕಲ್‌ನ ಇಮ್ರಾನ್‌ ಹಾಗೂ ಇತರರು ಕಾರಿನಲ್ಲಿದ್ದು, ಆರೋಪಿಗಳು ಹೊಸಂಗಡಿಯ ರಾಜಧಾನಿ ಜುವೆಲ್ಲರಿಯ ವಾಚ್‌ಮೆನ್‌ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದರು.

ಹನಿಟ್ರ್ಯಾಪ್‌: ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಒಳಪಡಿಸಿದ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಉಳ್ಳಾಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತ, ಪಾರ್ಟಿಯ ನೆಪದಲ್ಲಿ ಪಕ್ಕದ ಮನೆಯ ವ್ಯಕ್ತಿಯೊಬ್ಬರಿಗೆ ಮದ್ಯದ ಜತೆ ಅಮಲು ಪದಾರ್ಥ ಬೆರೆಸಿ ಕುಡಿಸಿ ಅವರನ್ನು ವಿವಸ್ತ್ರಗೊಳಿಸಿ ವಿಡಿಯೊ ಮಾಡಿದ್ದರು. ಮನೆಯಿಂದ ₹2.15 ಲಕ್ಷ ನಗದು ಹಾಗೂ ಉಂಗುರ ಕಳವು ಮಾಡಿದ್ದು, ಹನಿಟ್ರ್ಯಾಪ್ ಒಳಪಡಿಸಿರುವ ಬಗ್ಗೆ ದೂರು ದಾಖಲಾಗಿತ್ತು ಎಂದರು.

ಮರುದಿನ ವಂಚನೆಗೊಳಗಾಗಿದ್ದ ವ್ಯಕ್ತಿಯ ಮನೆಗೆ ಹೋಗಿದ್ದ ಆರೋಪಿಗಳು, ಮೊಬೈಲ್‌ನಲ್ಲಿದ್ದ ವಿಡಿಯೊ ತೋರಿಸಿ, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದರು. ತಂಗಿಯ ಬಲಾತ್ಕಾರಕ್ಕೆ ಯತ್ನಿಸಿರುವುದಾಗಿ ಪ್ರಕರಣ ದಾಖಲಿಸುವುದಾಗಿಯೂ ಹೆದರಿಸಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಅಝ್ವೀನ್ ಸಿ. ಹಾಗೂ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಹತೀಜಮ್ಮ ಅಲಿಯಾಸ್ ಸಫ್ನಾ ಎಂಬುವರನ್ನು ಬಂಧಿಸಿದ್ದಾರೆ ಎಂದು ಎನ್‌. ಶಶಿಕುಮಾರ್ ತಿಳಿಸಿದರು.

ಅತ್ಯಾಚಾರ: ದೂರು

ಮಂಗಳೂರು: ಮಹಿಳೆಯೊಬ್ಬರಿಗೆ ನಂಬಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿ, ನಂತರ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಚ್ಛೇದಿತ ಮಹಿಳೆಯೊಬ್ಬರು ತಂದೆ-ತಾಯಿ ಜತೆ ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಪ್ರತ್ಯೇಕ ಮನೆ ಮಾಡುವ ಉದ್ದೇಶದಿಂದ ಬಾಡಿಗೆ ಮನೆ ಹುಡುಕುತ್ತಿದ್ದು, ಬಂಗ್ರಕೂಳೂರಿನ ಪ್ರಶಾಂತ್ ಅಪ್ಪು ಎಂಬುವರಿಂದ ಬಾಡಿಗೆ ಮನೆ ಪಡೆದಿದ್ದರು. ಬಳಿಕ ಬಟ್ಟೆಗಳನ್ನು ಆ ರೂಂನಲ್ಲಿ ಇಟ್ಟು ಬಂದಿದ್ದರು. ನಂತರ ಮಹಿಳೆಗೆ ಜ್ವರ ಬಂದಿದ್ದರಿಂದ ಬಾಡಿಗೆ ಮನೆಗೆ ತೆರಳಲಿಲ್ಲ. ಈ ವೇಳೆ ಮಹಿಳೆ ನಿರಂತರ ಫೋನ್ ಮಾಡಿದ ಆರೋಪಿ ಪ್ರಶಾಂತ್‌ ಅಪ್ಪು, ‘ಬಟ್ಟೆಗಳನ್ನು ವಾಪಸ್ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾನೆ.

ಕಾರಿನಲ್ಲಿ ಕುಂಟಿಕಾನ ಬಳಿ ಬಂದ ಆರೋಪಿ, ‘ಬಟ್ಟೆ ಬಿಟ್ಟು ಬಂದಿದ್ದೇನೆ, ನೀನು ಬಂದು ತೆಗೆದುಕೊಂಡು ಹೋಗು’ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಅಲ್ಲದೇ ಮಹಿಳೆಗೆ ಕರೆ ಮಾಡಿ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕೆ ನಿರಾಕರಿಸಿದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನುಚಿತ ವರ್ತನೆ: ಪೊಲೀಸ್‌ ಸಿಬ್ಬಂದಿ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆಗೆ ಮೊಬೈಲ್‌ ಸಂಭಾಷಣೆಯ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಅನ್ವಯ, ನಗರದ ಠಾಣೆಯೊಂದರ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ನಗರದ ಪೊಲೀಸ್ ಠಾಣೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೋಷಕರ ಜತೆ ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ಸಂಖ್ಯೆಯನ್ನು ಪಡೆದ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ದರ್ಜೆಯ ಸಿಬ್ಬಂದಿ, ಆಕೆಗೆ ಕರೆ ಮಾಡಿ, ಸಂದೇಶ ಕಳುಹಿಸಿ ಅನುಚಿತವಾಗಿ ವರ್ತಿಸಿದ್ದರು. ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದರು. ಸಿಬ್ಬಂದಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮಂಗಳವಾರ ಬಂಧಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT