ಮಂಗಳವಾರ, ಮೇ 18, 2021
30 °C
ಹೆದ್ದಾರಿ ದರೋಡೆ ಪ್ರಕರಣ: ಮತ್ತೊಬ್ಬನ ಬಂಧನ

ಹೆದ್ದಾರಿ ದರೋಡೆ ಪ್ರಕರಣ: ಮತ್ತೊಬ್ಬನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮೂಡುಬಿದಿರೆ, ಮೂಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದ್ವಿಚಕ್ರ ವಾಹನ, ಹಣ ಮತ್ತಿತರ ವಸ್ತುಗಳನ್ನು ದಡೋಡೆ ಮಾಡುತ್ತಿದ್ದ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಕೆದಂಬಾಡಿ ಗ್ರಾಮದ ಅಬ್ದುಲ್ ಬಶೀರ್ ಬಂಧಿತ ಆರೋಪಿ. ಈಗಾಗಲೆ ಬಂಧಿತ ಆರೋಪಿಗಳಿಗೆ ಈತನು ಹಣಕಾಸಿನ ನೆರವನ್ನು ನೀಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಮನೆಯೊಂದರ ದರೋಡೆಗೆ ಸಂಚು ರೂಪಿಸಿದ ಪ್ರಕರಣವು ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ. 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಸೋತಿದ್ದ. ಸಮಾಜ ಸೇವೆಯ ಮುಖವಾಡದಲ್ಲಿ ಹಲವಾರು ಅಕ್ರಮ ಚಟುವಟಿಕೆಗಳಿಗೆ ಸಹಕರಿಸು
ತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ 7, ಜಿಲ್ಲಾ ಎಸ್ಪಿ ಕಚೇರಿ ವ್ಯಾಪ್ತಿಯ 8, ಹಾಸನ 2, ಚಿಕ್ಕಮಗಳೂರು 3, ಕೊಡಗು 5, ಉಡುಪಿ 2, ಬೆಂಗಳೂರು ನಗರದ 1 ಸೇರಿದಂತೆ 28 ದರೋಡೆ, ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 16ನೇ ಆರೋಪಿಯಾದ ಈತನನ್ನು ನ್ಯಾಯಾಲಯಕ್ಕೆ
ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಗರ ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ ಗಾಂವ್ಕರ್ ಮಾರ್ಗದರ್ಶನದಲ್ಲಿ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮೂಡುಬಿದಿರೆ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಬಿ.ಎಸ್. ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ವಿದ್ಯಾರ್ಥಿ ಸಾವು

ಮಂಗಳೂರು: ರಂಜಾನ್‌ನ ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಶನಿವಾರ ನಗರದ ಹೊರವಲಯದ ಮರಕಡದಲ್ಲಿ ನಡೆದಿದೆ. ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ -ಝಹುರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.

ರಂಜಾನ್‌ನಲ್ಲಿ ಮತ ಪ್ರವಚನದ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮಸೀದಿಗಳಿಗೆ ತೆರಳುವುದು ವಾಡಿಕೆ. ಸಿನಾನ್ ಕೂಡ ಶುಕ್ರವಾರ ಸಂಜೆ ಮರಕಡದ ಜುಮಾ ಮಸೀದಿಗೆ ತೆರಳಿದ್ದರು. ಉಪವಾಸ ವ್ರತ ತೊರೆದು, ತರಾವೀಹ್ ನಮಾಜ್ ಮುಗಿಸಿ ಮತ
ಪ್ರವಚನವನ್ನೂ ನೀಡಿದ್ದರು.

ಶನಿವಾರ ಬೆಳಿಗ್ಗೆ ಸಹರಿಗೆ ಎದ್ದು ಊಟ ಮಾಡಿದ ಬಳಿಕ ತಟ್ಟೆ ತೊಳೆಯುತ್ತಿದ್ದಾಗ ಸಿನಾನ್ ಕುಸಿದು ಬಿದ್ದಿದ್ದರು. ಮರಕಡ ಜುಮಾ ಮಸೀದಿಯ ಖತೀಬ್ ಇಸಾಕ್ ಸಖಾಫಿ ಕೂಡ ಸಿನಾನ್‌ನ ಸಂಬಂಧಿಯಾಗಿದ್ದು, ಸಿನಾನ್‌ಗೆ ಅಪಸ್ಮಾರ ರೋಗವಿರುವ ಬಗ್ಗೆ ತಿಳಿದಿದ್ದರು. ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರ ಸೂಚನೆಯ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ನನ್ನು ಅಲ್ಲೇ ಮಲಗಿಸಲಾಗಿತ್ತು.

‌ಆದರೆ 8 ಗಂಟೆಯಾದರೂ ಏಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆಯ ಮೇರೆಗೆ ಇಸಾಕ್ ಸಖಾಫಿಯವರು ಸಿನಾನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು. ಕುಂಬ್ರ ಕೆಐಸಿ ವಾಫಿ (ಸನದು) ದ್ವಿತೀಯ ತರಗತಿಯ ವಿದ್ಯಾರ್ಥಿಯಾಗಿದ್ದ ಸಿನಾನ್‌ ಬಿಕಾಂ ಕಲಿಯುತ್ತಿದ್ದರು.

ಪುತ್ರಿಯೊಂದಿಗೆ ಮಹಿಳೆ ನಾಪತ್ತೆ
ಮಂಗಳೂರು:
ಬೈಕಂಪಾಡಿಯ ಮೀನಕಳಿಯದಲ್ಲಿ ವಾಸವಿರುವ ಹನುಮಂತ ದಳವಾಯಿ ಅವರ ಪತ್ನಿ ಪವಿತ್ರಾ (23), ಒಂದೂವರೆ ವರ್ಷದ ಪುತ್ರಿ ರಶ್ಮಿಕಾಳೊಂದಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪವಿತ್ರಾ ಏ.11ರಂದು ಮಧ್ಯಾಹ್ನದಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ. ಬಿಳಿ ಮೈಬಣ್ಣ ಹೊಂದಿರುವ ಪವಿತ್ರಾ 5.2 ಅಡಿ ಎತ್ತರವಿದ್ದಾರೆ. ಕನ್ನಡ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದಾರೆ. ಮಗು ಬಿಳಿ ಮೈಬಣ್ಣ ಹೊಂದಿದೆ. ಮಾಹಿತಿ ದೊರೆತವರು ಮಹಿಳಾ ಪೊಲೀಸ್ ಠಾಣೆ (0824-2220525) ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು