ಬುಧವಾರ, ನವೆಂಬರ್ 13, 2019
23 °C
18 ರಂದು ರಾಜ್ಯಮಟ್ಟದ ರಬ್ಬರ್ ಬೆಳೆಗಾರರ ಸಮಾವೇಶ

‘ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನೀಡಿ’

Published:
Updated:
Prajavani

ಮಂಗಳೂರು: ರಬ್ಬರ್ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಇದೇ 18 ರಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ರಾಜ್ಯಮಟ್ಟದ ರಬ್ಬರ್‌ ಬೆಳೆಗಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಬ್ಬರ್‌ ಮಂಡಳಿಯ ಅಧ್ಯಕ್ಷ ಡಾ.ಕೆ.ಬಿ. ರಾಘವನ್‌ ಭಾಗವಹಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ರಬ್ಬರ್‌ ಬೆಳೆಗಾರರ ಸಂಘದ ಅಧ್ಯಕ್ಷ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಬ್ಬರ್‌ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2012 ರಲ್ಲಿ ಪ್ರತಿ ಕೆ.ಜಿಗೆ ₹245 ಇದ್ದ ಬೆಲೆ, ಇದೀಗ ₹118ಕ್ಕೆ ಕುಸಿದಿದೆ ಎಂದರು.

ಬೆಲೆ ಕುಸಿತದಿಂದಾಗಿ ರಬ್ಬರ್ ತೋಟಗಳ ವಿಸ್ತರಣೆಗೆ ಹಿಂದೇಟು ಹಾಕುವಂತಾಗಿದೆ. ರಬ್ಬರ್‌ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೂಡಲೇ ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಕೇರಳದಲ್ಲಿ ರಬ್ಬರ್‌ ಬೆಲೆ ಕುಸಿತವಾದಾಗ ಪ್ರತಿ ಕೆ.ಜಿ.ಗೆ ₹150 ಬೆಂಬಲ ಬೆಲೆ ನೀಡಲಾಗುತ್ತಿದೆ. ರಬ್ಬರ್‌ ಬೆಲೆ ₹150ಕ್ಕಿಂತ ಕಡಿಮೆಯಾದ ಸಂದರ್ಭದಲ್ಲಿ ಈ ಯೋಜನೆಯಡಿ ವ್ಯತ್ಯಾಸದ ಮೊತ್ತವನ್ನು ರೈತರಿಗೆ ಪಾವತಿಸಲಾಗುತ್ತದೆ ಎಂದ ಅವರು, ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಿದ ರಬ್ಬರ್‌ಗೆ ₹160 ಬೆಂಬಲ ಬೆಲೆ ನೀಡುವುದಾಗಿ ಹಲವು ಸರ್ಕಾರಗಳು ಘೋಷಿಸಿದ್ದರೂ, ಇದುವರೆಗೆ ಅನುಷ್ಠಾನಕ್ಕೆ ಬಂದಿಲ್ಲ ಎಂದರು.

ದೇಶದಲ್ಲಿ ಒಟ್ಟು 6.48 ಲಕ್ಷ ಟನ್ ರಬ್ಬರ್ ಉತ್ಪಾದನೆ ಆಗುತ್ತಿದ್ದು, 12.11 ಲಕ್ಷ ಟನ್ ರಬ್ಬರ್ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ರಾಜ್ಯದಲ್ಲಿ 60 ಸಾವಿರ ರಬ್ಬರ್‌ ಬೆಳೆಗಾರರಿದ್ದು, 40 ಸಾವಿರ ಟನ್‌ ರಬ್ಬರ್‌ ಬೆಳೆಯುತ್ತಿದ್ದಾರೆ. ಇದು ದೇಶದ ಒಟ್ಟು ಉತ್ಪಾದನೆಯ ಶೇ 6 ರಷ್ಟಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ರಬ್ಬರ್‌ ಅನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಉಂಟಾಗುತ್ತಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಕೃಷಿ ಬೆಲೆ ಆಯೋಗವನ್ನು ರಚಿಸಿದ್ದು, ರಬ್ಬರ್‌ ಬೆಳೆಗಾರರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯ ಪ್ರವೇಶಿಸುವ ಯೋಜನೆ ಘೋಷಿಸಬೇಕು. ಜತೆಗೆ ಅನುದಾನವನ್ನು ಮೀಸಲಿಡುವಂತೆ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಪಿ. ಗೋಪಾಲಕೃಷ್ಣ ಭಟ್‌ ಮಾತನಾಡಿ, ರಬ್ಬರ್‌ ಬೆಲೆ ಕುಸಿತ ಉಂಟಾಗುತ್ತಿರುವುದರಿಂದ ಬೆಳೆಗಾರರು, ಬೇರೆ ಬೆಳೆಗಳತ್ತ ವಾಲುತ್ತಿದ್ದಾರೆ. ರಬ್ಬರ್ ತೋಟದ ವಿಸ್ತರಣೆಯ ಬದಲು, ಕಡಿಮೆ ಆಗುತ್ತಿದ್ದು, ಗೇರು ಕ್ಷೇತ್ರ ಹೆಚ್ಚಾಗುತ್ತಿದೆ ಎಂದರು.

ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡುವ ಮೂಲಕ ರಬ್ಬರ್ ಮಂಡಳಿಯು ರಬ್ಬರ್ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದ ಶೇ 93 ರಷ್ಟು ರಬ್ಬರ್ ಬೆಳೆಗಾರರು 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ ಎಂದು ಹೇಳಿದರು.

ರಬ್ಬರ್ ತೋಟದ ಮಣ್ಣಿನ ಫಲವತ್ತತೆ ತಿಳಿಸುವ ರಬ್ಬರ್‌ ಮಣ್ಣು ಮಾಹಿತಿ ವ್ಯವಸ್ಥೆ ಮೊಬೈಲ್‌ ಆ್ಯಪ್‌ ಅನ್ನು ಆರಂಭಿಸಲು ರಾಜ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಈ ಆ್ಯಪ್‌ ಮೂಲಕ ರಬ್ಬರ್‌ ತೋಟಕ್ಕೆ ಹಾಕಬೇಕಾದ ಗೊಬ್ಬರ ಪ್ರಮಾಣವನ್ನು ಅರಿಯಲು ಅನುಕೂಲ ಆಗಲಿದ್ದು, ಜತೆಗೆ ರಾಸಾಯನಿಕ ಗೊಬ್ಬರ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
 

ಪ್ರತಿಕ್ರಿಯಿಸಿ (+)