ಗುರುವಾರ , ನವೆಂಬರ್ 21, 2019
21 °C
ಕುಮಾರಪರ್ವತ ಚಾರಣಕ್ಕೆ ತೆರಳಿದ್ದ

ಚಾರಣಿಗ ಸಂತೋಷ್ ಸುರಕ್ಷಿತ: ನೀರಿನ ಪೈಪು ಜಾಡು ಹಿಡಿದು ನಾಡಿಗೆ ಬಂದ ಯುವಕ

Published:
Updated:
Prajavani

ಸುಬ್ರಹ್ಮಣ್ಯ:  ಕುಮಾರಪರ್ವತಕ್ಕೆ ಭಾನುವಾರ ಚಾರಣಕ್ಕೆ ತೆರಳಿದ್ದ ಬೆಂಗಳೂರಿನ 12 ಮಂದಿ ಚಾರಣಿಗರ ತಂಡದಿಂದ ಗಿರಿಗದ್ದೆ ಎಂಬಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯತ್ರಿ ನಗರದ ನಿವಾಸಿ ಸಂತೋಷ್ (25) ಮಂಗಳವಾರ ಸುರಕ್ಷಿತವಾಗಿ ಬಂದಿದ್ದಾರೆ.

‘ದೇವರ ಅನುಗ್ರಹದಿಂದ ಬದುಕಿ ಬಂದೆ. ನನ್ನ ಪ್ರಾಣ ಉಳಿವಿಗೋಸ್ಕರ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸ್ಥಳಿಯ ಜನತೆ ತುಂಬಾ ಶ್ರಮ ಪಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದು ಸಂತೋಷ್‌ ಪತ್ರರ್ಕರ ಜತೆ ಹೇಳಿದರು.

ಸುರಕ್ಷಿತ: ‘ಮಂಗಳವಾರ ಮಧ್ಯಾಹ್ನ ಸುಬ್ರಹ್ಮಣ್ಯ ಸಮೀಪದ ಕಲ್ಲುಗುಡ್ಡೆಗೆ ಸಂತೋಷ್ ತಲುಪಿದ್ದಾರೆ. ಕುಕ್ಕೆ ದೇಗುಲದ ದೈವ ನರ್ತಕ ಪುರುಷೋತ್ತಮ ಎಂಬುವರಿಗೆ ಮೊದಲಿಗೆ ಆತ ಸಿಕ್ಕಿ, ತನ್ನನ್ನು ಪೇಟೆಗೆ ಬಿಡುವಂತೆ ಅವರಲ್ಲಿ ನೆರವು ಕೇಳಿದ್ದರು.  ಸ್ಥಳೀಯ ಮನೆಯೊಂದರಲ್ಲಿ ಆತನಿಗೆ ಆಹಾರ ನೀಡಿ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಕರೆತರಲಾಗಿದೆ.  ಪ್ರಾಥಮಿಕ ಅರೋಗ್ಯ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದರು. ಕಾಲಿಗೆ ತಿಗಣೆ ಕಚ್ಚಿ ಗಾಯಗಳಾಗಿದ್ದು ಬಿಟ್ಟರೆ ಇನ್ನೇನ್ನೂ ಸಮಸ್ಯೆ ಆಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ದಾರಿ ತೋರಿದ ಪೈಪ್‌: ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸ್ಥಳೀಯರ ಸಹಕಾರ ಪಡೆದು ಮಂಗಳವಾರ ಬೆಳಿಗ್ಗೆ ಹುಡುಕಾಟಕ್ಕೆ ಕಾಡಿಗೆ ತೆರಳಿದ್ದರು. ಸಂತೋಷ್ ಎರಡು ದಿನ ಹಗಲು ರಾತ್ರಿ ಕಾಡಿನಲ್ಲೇ ಕಳೆದಿದ್ದರು.  ಭೀತಿಯಲ್ಲೆ ದಿನ ಕಳೆದಿದ್ದು, ಕತ್ತಲಾಗುತಿದ್ದಂತೆ ಬಂಡೆಕಲ್ಲುಗಳ ಮೇಲೆ ಮಲಗಿ ವಿಶ್ರಾಂತಿಸುತಿದ್ದರು. ಎರಡು ದಿನವೂ ರಾತ್ರಿ ಉಪವಾಸ ಇದ್ದರು. ನೀರಿನ ಝರಿಯ ಜಾಡು ಹಿಡಿದು ಸಾಗಿ ನಾಡಿಗೆ ಬರಲು ಪ್ರಯತ್ನಿಸಿದ್ದ. ನೀರಿನ ಝರಿಯಲ್ಲಿ ಪೈಪ್‌ಗಳಿರುವುದು ಸಂತೋಷ್‌ಗೆ ಕಂಡು,  ಜನವಸತಿ ಪ್ರದೇಶವಿದೆ ಎಂದರಿತು ಅದನ್ನು ಅನುಸರಿಸಿ ಬಂದು ಕಲ್ಲುಗುಡ್ಡೆ ತಲುಪಿದ್ದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಡಿನಿಂದ ಪೈಪ್‌ಗಳ ಮೂಲಕ ನೀರು ಸರಬರಾಜು ಅಳವಡಿಸಿದ್ದ ಪೈಪ್‌ ಅದಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮಿ ಪ್ರಸಾದ್ ಮಾರ್ಗದರ್ಶನದಲ್ಲಿ ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಸುಬ್ರಹ್ಮಣ್ಯಕ್ಕೆ ಬಂದು ಕಾರ್ಯಾಚರಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಸುಳ್ಯ ಸಿಐ ಆರ್ ಸತೀಶ್‍ಕುಮಾರ್, ಬೆಳ್ಳಾರೆ ಠಾಣೆಯ ಎಸ್‍ಐ ಈರಯ್ಯ ಡಿ.ಎನ್, ಎಎಸ್‍ಐ ಚಂದಪ್ಪ ಗೌಡ.ಆರ್‍ಎಫ್‌ಒ ತ್ಯಾಗರಾಜ್, ಮಡಿಕೇರಿ ವನ್ಯಜೀವಿ ವಿಭಾಗದ ಅಧಿಕಾರಿ ದಯಾನಂದ ದಿ.ಎಸ್, ಶ್ರೀನಿವಾಸ ನಾಯಕ್ ಇವರಿದ್ದ  6 ತಂಡಗಳು ಕಾಡಿಗೆ ತೆರಳಿದ್ದವು. ತಂಡದಲ್ಲಿ ಸಂಪ್ಯ, ಸುಳ್ಯ, ಬೆಳ್ಳಾರೆ, ಪುತ್ತೂರು ನಗರ ಸೋಮವಾರ ಪೇಟೆ ಠಾಣೆಗಳ 50ಕ್ಕೂ ಅಧಿಕ ಪೊಲೀಸರು, ಮಡಿಕೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಮಲೆಕುಡಿಯ ನಿವಾಸಿಗಳು, ಸುಬ್ರಹ್ಮಣ್ಯ ಗ್ರಾಮಪಂಚಾಯಿತಿ, ಸ್ಥಳೀಯ ಸಂಘಸಂಸ್ಥೆಗಳ ಸದಸ್ಯರು, ವಾಹನ ಚಾಲಕ ಮಾಲೀಕರು, ಯುವಬ್ರಿಗೇಡ್ ತಂಡ ಹಾಗೂ ನಾಗರಿಕರು ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)