ರೈತರ ಸಾಲ ಮನ್ನಾಕ್ಕೆ ಷರತ್ತು ಬೇಡ: ಶಾಸಕ ಉಮಾನಾಥ ಕೋಟ್ಯಾನ್

7

ರೈತರ ಸಾಲ ಮನ್ನಾಕ್ಕೆ ಷರತ್ತು ಬೇಡ: ಶಾಸಕ ಉಮಾನಾಥ ಕೋಟ್ಯಾನ್

Published:
Updated:
Deccan Herald

ಮೂಡುಬಿದಿರೆ: ‘ ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ವಿವಿಧ ಷರತ್ತುಗಳನ್ನು ವಿಧಿಸಿ ಗೊಂದಲಕ್ಕೀಡು ಮಾಡಿದೆ. ಸಹಕಾರಿ ಬ್ಯಾಂಕ್‌, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಫೈನಾನ್ಸ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡುವುದಾಗಿ ಹುಸಿ ಆಶ್ವಾಸನೆ ನೀಡಿದೆ.  ಸಾಲ ಮನ್ನಾ ಇನ್ನೂ ಆಗಿಲ್ಲ. ರೈತರಿಗೆ ಕೊಟ್ಟ ಭರವಸೆ ಈಡೇರಿಸಲಾಗದ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ’ ಎಂದು ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

‘ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಹಾಗೂ ರೈತರ ಸಾಲಮನ್ನಾ ವಿಚಾರದಲ್ಲಿ ಸರ್ಕಾರದ ತಾರತಮ್ಯ ಧೋರಣೆ ವಿರೋಧಿಸಿ’ ಸಹಕಾರ ಭಾರತಿ ಮಂಗಳೂರು ತಾಲ್ಲೂಕು ವತಿಯಿಂದ ಶುಕ್ರವಾರ ಇಲ್ಲಿನ ತಹಶಿಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರ ಭಾರತಿ ಮಂಗಳೂರು ಮಹಾನಗರ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ‘ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆ ಖರ್ಚಿಗೆ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ ಹಣವನ್ನು ಅವರ ಸಾಲಕ್ಕೆ ಸರಿದೂಗಿಸುವ ನಿರ್ಧಾರವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಹಿರಿಯ ಸಹಕಾರಿ ಧುರೀಣ ಕೃಷ್ಣರಾಜ ಹೆಗ್ಡೆ ಮಾತನಾಡಿ, ‘ಕುಮಾರಸ್ವಾಮಿ ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಆಶ್ವಾಸನೆಯಂತೆ ರೈತರ ಎಲ್ಲಾ ಸಾಲ ಮನ್ನಾ ಮಾಡಲಿ. ರೈತರ ಸಾಲವನ್ನು ಅವರ ಠೇವಣಿ ಹಣಕ್ಕೆ ಸರಿದೂಗಿಸುವುದೆಂದರೆ ಒಂದು ಕಡೆ ಸಾಲ ಕೊಟ್ಟು ಇನ್ನೊಂದು ಕಡೆ ಸಾಲ ವಾಪಾಸು ಪಡಕೊಳ್ಳುವ ತಂತ್ರಗಾರಿಕೆಯಾಗಿದೆ’ ಎಂದು ಆರೋಪಿಸಿದರು.

ಸಹಕಾರಿ ಭಾರತಿ ಮಂಗಳೂರು ತಾಲ್ಲೂಕು ಅಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆಎಂಎಫ್‌ ಉಪಾಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯೆ ಸುಜಾತ, ಮಾಜಿ ಸದಸ್ಯ ಈಶ್ವರ್ ಕಟೀಲು, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ತಾಲ್ಲೂಕು ಪಂಚಾಯತಿ ಸದಸ್ಯ ಪ್ರಕಾಶ್ ಗೌಡ, ಸಹಕಾರಿ ಧುರೀಣರಾದ ಸತೀಶ್ ಭಟ್, ಜಯವರ್ಮ ಮಾಪಾಲ್ ಜೈನ್, ವರದರಾಯ ಕಾಮತ್  ಉಪಸ್ಥಿತರಿದ್ದರು.

ಉಪತಹಶಿಲ್ದಾರ್ ನಿತ್ಯಾನಂದದಾಸ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಸಭೆಗೆ ಮೊದಲು ರೈತರು, ರೈತ ಮುಖಂಡರು ಪೇಟೆಯ ಮುಖ್ಯ ರಸ್ತೆಯಲ್ಲಿ ತಹಶಿಲ್ದಾರ್ ಕಚೇರಿ ವರೆಗೆ ಮೆರವಣಿಗೆಯಲ್ಲಿ ಬಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !