ಸಹಬಾಳ್ವೆಗೆ ಕನ್ನಡ ಭಾಷೆ ಪ್ರೇರಕ: ಲಲಿತಾ ನಾಯಕ್

7
ನೀರ್ಚಾಲಿನಲ್ಲಿ ಕಾಸರಗೋಡು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸಹಬಾಳ್ವೆಗೆ ಕನ್ನಡ ಭಾಷೆ ಪ್ರೇರಕ: ಲಲಿತಾ ನಾಯಕ್

Published:
Updated:
Prajavani

ಬದಿಯಡ್ಕ: 'ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಗಡಿನಾಡ ಕನ್ನಡಿಗರ ರಕ್ಷಣೆಯ ಜವಾಬ್ದಾರಿ ಕರ್ನಾಟಕದ ಕನ್ನಡಿಗರ ದ್ದು. ಕರ್ನಾಟಕ ಸರ್ಕಾರವು ಗಡಿನಾಡ ಕನ್ನಡಿಗರಿಗೆ ಉದ್ಯೋಗ ವಿಭಾಗದಲ್ಲಿ ಶೇಕಡ 5ರಷ್ಟು ವಿಶೇಷ ಮೀಸಲಾತಿ ನೀಡಿದೆ’ ಎಂದು  ಲೇಖಕಿ ಬಿ ಟಿ ಲಲಿತಾ ನಾಯಕ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೀರ್ಚಾಲಿನ ಮಹಾಜನ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಯದೇವ ಖಂಡಿಗೆ ರಾಷ್ಟ್ರ ಧ್ವಜಾರೋಹಣ ಮಾಡಿದರು. ಎಸ್. ವಿ. ಭಟ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಿದರು, ಎಸ್. ನಾರಾಯಣ ಭಟ್ ಕನ್ನಡ ಧ್ವಜಾರೋಹಣ ಮಾಡಿದರು. ಸಮ್ಮೇಳನ ಸರ್ವಾಧ್ಯಕ್ಷ ಡಾ. ಪಿ. ಶ್ರೀಕೃಷ್ಣ ಭಟ್‌ ಅವರನ್ನು ವೈಭವದ ಮೆರವಣಿಗೆಯಲ್ಲಿ ಸಮ್ಮೇಳನ ಸಮುಚ್ಛಯಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ವಿಟ್ಲದ ಕಲಾರಸಿಕ ಬೊಂಬೆಗಳು, ಯಕ್ಷಗಾನ ವೇಷ, ಸ್ಕೌಟ್, ಗೈಡ್‌ ವಿದ್ಯಾರ್ಥಿಗಳು, ಬೆಳ್ಗೊಡೆ, ಕೇರಳದ ಚೆಂಡೆ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕ ಕನ್ನಡಿಗರು ಭಾಗವಹಿಸಿದ್ದರು. ಮೆರವಣಿಗೆಯನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಎನ್. ಕೃಷ್ಣ ಭಟ್ ಉದ್ಘಾಟಿಸಿದರು. ಶಾಸಕ ಎನ್ ಎ ನೆಲ್ಲಿಕುನ್ನು ಅವರು ಪುಸ್ತಕ ಮಳಿಗೆ ಹಾಗೂ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು.

ಸಭೆಯಲ್ಲಿ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ. ಕೈಲಾಸಮೂರ್ತಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್, ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ, ವೆಂಕಟರಾಜ ಸಿ. ಎಚ್, ಶಿವಪ್ರಕಾಶ್ ಎಂ. ಕೆ., ವಿಶಾಲಾಕ್ಷಿ ಬಿ.ಕೆ ಮೊದಲಾದವರು ಉಪಸ್ಥಿತರಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಮ್ಮೇಳನದ ಅಧ್ಯಕ್ಷ ಡಾ. ಪಿ. ಶ್ರೀಕೃಷ್ಣ ಭಟ್ ಅವರ ಅವಲೋಕನ-ಸಾಹಿತ್ಯ ಶಾಸ್ತ್ರ ಸಮೀಕ್ಷೆ, ಡಾ. ಹರಿಕೃಷ್ಣ ಭರಣ್ಯ ಸಂಗ್ರಹಿತ ಹವಿಗನ್ನಡದ ಸವಿ ನಾಟಕಗಳು, ಡಾ. ಶ್ರೀಕೃಷ್ಣ ಭಟ್‌ ಅರ್ತಿಕಜೆ ಹಾಗೂ ಡಾ. ಹರಿಕೃಷ್ಣ ಭರಣ್ಯ ಸಂಪಾದಿತ ಹವ್ಯಕ ಹಾಡುಗಳ ಸಂಗ್ರಹವಾದ ತುಪ್ಪಶನ ಉಂಬಲೆ ಮತ್ತು ಎಂ. ತಿಮ್ಮಣ್ಣ ಭಟ್ ಧರ್ಮತ್ತಡ್ಕ ಬರೆದಿರುವ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ಪ್ರಸಂಗ ಕೃತಿ ಹಾಗೂ ಪ್ರಿಯ ಎಸ್ ರಚಿತ ಪ್ರತಿಬಿಂಬ ಕವನ ಸಂಕಲನ ಹಾಗೂ ಪೊಸಡಿಗುಂಪೆ ಮಾಸಿಕದ ಸಮ್ಮೇಳನ ವಿಶೇಷಾಂಕವನ್ನು ಬಿಡುಗಡೆ ಮಾಡಿದರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನೀರ್ಚಾಲು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಧರ್ಮತ್ತಡ್ಕ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನಾಟಕ ಪದರ್ಶನ ನಡೆಯಿತು. ರಾಮಚಂದ್ರ ಭಟ್‌ ಧರ್ಮತ್ತಡ್ಕ ಸ್ವಾಗತಿಸಿ, ನವೀನ್ ಚಂದ್ರ ಎಂ ಎಸ್‌ ವಂದಿಸಿದರು. ಕೆ ಶೇಖರ ಶೆಟ್ಟಿ ನಿರೂಪಿಸಿದರು.‌

‌’ಕಾಸರಗೋಡಿನಲ್ಲಿ ಕನ್ನಡ ಭಾಷಿಗರ ರಕ್ಷಣೆಗೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು  ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

’ಕನ್ನಡದ ನಿರಂತರ ಚಟುವಟಿಕೆ, ಕನ್ನಡ ರಕ್ಷಣೆಗೆ ಪ್ರಬಲ ಹೋರಾಟ ಸಹಿತ ಕನ್ನಡ ಸಂಸ್ಕೃತಿಯ ರಕ್ಷಣೆಗೆ ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕ ನಿರಂತರವಾಗಿ ಪ್ರಯತ್ನಿಸುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌ ವಿ ಭಟ್‌, ಹೇಳಿದರು.

‘ಸಮ್ಮೇಳನದ ನಿರ್ಣಯಗಳು ಅನುಷ್ಠಾನವಾಗಬೇಕು. ಕನ್ನಡದ ರಕ್ಷಣೆಗೆ ಕನ್ನಡಿಗ ಪೋಷಕರು ಹಾಗೂ ಶಿಕ್ಷಕರು ಶಕ್ತಿಮೀರಿ ಪ್ರಯತ್ನಿಸಬೇಕು’ ಎಂದು ಸಾಹಿತಿ ಡಾ. ನಾ ಮೊಗಸಾಲೆ  ಎಂದರು.

ಚಿತ್ರ ಪ್ರದರ್ಶನ : ಸಮ್ಮೆಳನದ ಅಂಗಣದಲ್ಲಿ ಖ್ಯಾತ ವ್ಯಂಗ್ಯಚಿತ್ರಗಾರರಾದ ಬಾಲಮಧುರಕಾನನ, ವೆಂಕಟ್ ಭಟ್‌ ಎಡನೀರು ಅವರು ರಚಿಸಿದ ವ್ಯಂಗ್ಯಚಿತ್ರಗಳು, ವಿರಾಜ್ ಅಡೂರು ರಚಿಸಿದ ವ್ಯಂಗ್ಯಚಿತ್ರ ಹಾಗೂ ಯಕ್ಷರೇಖಾ ಚಿತ್ರಗಳು, ಎಸ್ ಬಿ ಕೋಳಾರಿ, ಜಯಪ್ರಕಾಶ್ ಶೆಟ್ಟಿ ಬೇಳ ಹಾಗೂ ರಮೇಶ್ ನಾಯ್ಕ ಅವರು ರಚಿಸಿದ ಬಣ್ಣದ ಚಿತ್ರಗಳು, ನೀರ್ಚಾಲು ಶಾಲಾ ಮಕ್ಕಳ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಪುಸ್ತಕ ಪ್ರದರ್ಶನ : ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಕಾರದಲ್ಲಿ ಬದಿಯಡ್ಕದ ಸಿರಿಗನ್ನಡ ಮಳಿಗೆಯಲ್ಲಿ ಶೇಖಡಾ 50ರಷ್ಟು ರಿಯಾಯತಿಯಲ್ಲಿ ವಿವಿಧ ವಿಚಾರಯುತ ಪುಸ್ತಕಗಳು ಭರದಿಂದ ಮಾರಾಟವಾಗುತ್ತಿದೆ. ಉಳಿದಂತೆ ಪುತ್ತೂರಿನ ಜ್ಞಾನಗಂಗಾದ ಪುಸ್ತಕ ಭಂಡಾರವೂ ಕೂಡಾ ಮಳಿಗೆಯನ್ನು ತೆರೆದಿದೆ. ಅನೇಕ ಪುಸ್ತಕ ಮಳಿಗೆಗಳು ಸಮ್ಮೇಳನ  ಸಭಾಂಗಣದ ಆವರಣದಲ್ಲಿ ಸ್ಥಾಪಿಸಿದ್ದು ಸಾಹಿತ್ಯಾಸಕ್ತರು ಪುಸ್ತಕ ಖರೀದಿಯಲ್ಲಿ ಆಸಕ್ತಿ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !