ಸುಳ್ಯದಿಂದ ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್‌

7
ಸಂಪಾಜೆ ಘಾಟಿಯಲ್ಲಿ ವಾರದಿಂದ ಸಂಚಾರ ಸ್ಥಗಿತ; ಜನರ ಪರದಾಟ

ಸುಳ್ಯದಿಂದ ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್‌

Published:
Updated:
Deccan Herald

ಸುಳ್ಯ: ಕರಾವಳಿಯಿಂದ ಮಡಿಕೇರಿ, ಮೈಸೂರು ಮತ್ತು ತಮಿಳುನಾಡು ಭಾಗಕ್ಕೆ ಸಂಪರ್ಕ ಕಲ್ಪಿಸುವ ಅಗತ್ಯದ ಹೆದ್ದಾರಿ ಮಡಿಕೇರಿ ಘಾಟಿ ರಸ್ತೆ ವಿಪರೀತ ಮಳೆ, ಭೂಕುಸಿತದಿಂದಾಗಿ ಬಂದ್ ಆಗಿದೆ.

ಇದರಿಂದ ದಿನನಿತ್ಯ ಓಡಾಡುವ ಸಾವಿರಾರು ಮಂದಿ ಪ್ರಯಾಣಿಕರಿಗೆ, ಉದ್ಯೋಗಸ್ಥರಿಗೆ ಅಲ್ಲದೆ ಮಂಗಳೂರು ಕಡೆಗೆ ಉನ್ನತ ಚಿಕಿತ್ಸೆಗಾಗಿ ಬರುವ ನೂರಾರು ರೋಗಿಗಳಿಗೂ ತೊಂದರೆ ಆಗಿದೆ.  ಜಿಲ್ಲೆಯ ಗಡಿಭಾಗವಾದ ಸಂಪಾಜೆಯಿಂದ ಮಡಿಕೇರಿವರೆಗಿನ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಘಾಟಿ ಪ್ರದೇಶದ ರಸ್ತೆ. ದಟ್ಟ ಕಾನನದ ಮಧ್ಯೆ ಗುಡ್ಡ ಪ್ರದೇಶದಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಈ ಘಾಟಿಯ ಉದ್ದ 25 ಕಿ.ಮೀ.ನಷ್ಟಿದೆ.

ಅಲ್ಲಲ್ಲಿ ಗುಡ್ಡ ಕುಸಿತ:  ಇದೇ 11ರಿಂದ ಸುರಿದ ಭಾರಿ ಮಳೆಗೆ ರಸ್ತೆಯ ಉದ್ದಕ್ಕೂ ದೇವರಕೊಲ್ಲಿ, ಕೊಯನಾಡು, ಮದೆನಾಡು, ಜೋಡುಪಾಲ ಈ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಕುಸಿತ ಆದ ಪರಿಣಾಮ 6 ದಿನಗಳ ಬಳಿಕವೂ ಈ ರಸ್ತೆಯಲ್ಲಿ ಸಂಚಾರ ಪೂರ್ಣ ಪ್ರಮಾಣದಲ್ಲಿ ಸಾಧ್ಯ ಆಗಿಲ್ಲ. ಮೂರು ದಿನಗಳಿಂದ ಸಂಪೂರ್ಣ ಸಂಚಾರ ಸ್ಥಗಿತ ಆಗಿದೆ. ಗುಡ್ಡ ಕುಸಿತದಿಂದ ಬಿದ್ದ ಮಣ್ಣನ್ನು ರಸ್ತೆಯಿಂದ ತೆರವು ಮಾಡುವ ಕೆಲಸವನ್ನು ಮಡಿಕೇರಿ ಲೋಕೋಪಯೋಗಿ ಇಲಾಖಾ ಎಂಜಿನಿಯರ್ ಮತ್ತು ಸಿಬ್ಬಂದಿ ಜೆಸಿಬಿ ಮೂಲಕ ಹರಸಾಹಸ ಮಾಡಿ ಮಾಡುತ್ತಿದ್ದಾರೆ. ಇನ್ನೆರಡು ದಿನ ಮಳೆ ಬಾರದೇ ಇದ್ದರೆ, ಮತ್ತೆ ಗುಡ್ಡ ಕುಸಿಯದೇ ಇದ್ದರೆ ರಸ್ತೆಯಿಂದ ಮಣ್ಣು ತೆರವು ಮಾಡಬಹುದು ಎಂದು ಎಂಜಿನಿಯರ್ ಸುನಿಲ್ ಹೇಳುತ್ತಾರೆ.

ಕರಾವಳಿ ಭಾಗದಿಂದ ತಮಿಳುನಾಡು ಸಹಿತ ಮೈಸೂರು, ಬೆಂಗಳೂರು, ಮಡಿಕೇರಿ ಈ ಭಾಗಕ್ಕೆ ಸರ್ಕಾರಿ ಬಸ್ ಸಹಿತ ನೂರಾರು ಖಾಸಗಿ ಬಸ್, ಇತರ ವಾಹನ ಸಂಚಾರ ನಿತ್ಯ ಇದೆ. ಮಳೆ ಪರಿಣಾಮ ಇದೆಲ್ಲಾ ಸ್ಥಗಿತಗೊಂಡಿದೆ.

ಶಿರಾಡಿಗೆ ಬದಲಿ ಮಾರ್ಗ: ಶಿರಾಡಿ ಘಾಟಿ ಅಭಿವೃದ್ದಿ ವೇಳೆ ರಾಜ್ಯದ ರಾಜಧಾನಿಗೆ ಹತ್ತಿರದ ಸಂಪರ್ಕದ ಹೆದ್ದಾರಿ ಅಂದರೆ ಮಂಗಳೂರಿನಿಂದ ಪುತ್ತೂರು, ಸುಳ್ಯ, ಮಡಿಕೇರಿ ಮೂಲಕ ಸಾಗುದ ಹೆದ್ದಾರಿಯೇ ಮಾಣಿ-ಮೈಸೂರು ರಾಜ್ಯ ಹೆದ್ದಾರಿ. ಅದು ಮಡಿಕೇರಿ ಘಾಟಿ ಮೂಲಕ ಸಾಗುವುದು. ಈಗ ಶಿರಾಡಿ ಘಾಟಿ ರಸ್ತೆ ಬಂದ್ ಆಗಿದ್ದು, ಪರ್ಯಾಯ ರಸ್ತೆ ಅಂದರೆ ಚಾರ್ಮಾಡಿ. ಆದರೆ ಅಲ್ಲಿ ಘನ ವಾಹನಗಳಾದ  ಬಸ್, ಗೂಡ್ಸ್ ವಾಹನಗಳು ಸಾಗುವುದಕ್ಕೆ ಸಾಧ್ಯ ಆಗುವುದಿಲ್ಲ. ಮಂಗಳೂರಿನಿಂದ ಹೊರಟ ನೂರಾರು ವಾಹನಗಳು ಸಂಪಾಜೆ ಭಾಗದಲ್ಲಿ ರಸ್ತೆ ಬದಿಯಲ್ಲಿ ತಂಗಿವೆ.

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅರಂಬೂರು ಬಳಿ ಹರಿಯುತ್ತಿರುವ ಪಯಸ್ವಿನಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಇದರಿಂದ ಅರಂಬೂರು ಬಳಿ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಗುರುವಾರ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜನರನ್ನು ಅಗ್ನಿಶಾಮಕದವರು ಬೋಟ್ ಮೂಲಕ ಆಚೆ-ಈಚೆಗೆ ದಾಟಿಸಿದರು.

ಯಾಕೆ ಕುಸಿತ: ಈ ರಸ್ತೆಯನ್ನು ಅಭಿವೃದ್ದಿ ಮಾಡಿ 5 ವರ್ಷ ಆಗಿದೆ. ಸುಳ್ಯದ ಜೀವನದಿ ಪಯಸ್ವಿನಿ ಈ ಘಾಟಿಯ ತಾಳತ್ತಮನೆ ಎಂಬಲ್ಲಿ ಹುಟ್ಟಿ ಹರಿದು ಬರುತ್ತಿದೆ. ಈ ನದಿ ಬರುವ ಬದಿಯಲ್ಲೇ ಗುಡ್ಡ ಭಾಗದಿಂದ ಒಂದಷ್ಟು ಜಾಗವನ್ನು ಬಳಸಿ ರಸ್ತೆ ಮಾಡಲಾಗಿದೆ. ಇದರಿಂದ ಗುಡ್ಡದ ಬದಿಯೂ ರಸ್ತೆಯಿಂದ ಸುಮಾರು ಸರಾಸರಿ 25 ಅಡಿ ಎತ್ತರದಲ್ಲಿದೆ. ನೀರಿನ ಒರತೆ ಜಾಸ್ತಿ ಆಗುತ್ತಿದ್ದಂತೆ ಗುಡ್ಡ ಕುಸಿಯುತ್ತಿದೆ. ಒಂದು ಭಾಗದಲ್ಲಿ ಗುಡ್ಡ ಕುಸಿತ ಆದರೆ ಮತ್ತೆ ಅದು ಸಂಪೂರ್ಣ ಕುಸಿದು ಬೀಳುವವರೆಗೆ  ಮುಂದುವರಿಯುತ್ತದೆ. ರಸ್ತೆಯ ಉದಕ್ಕೂ ದೊಡ್ಡ ಪ್ರಮಾಣದಲ್ಲಿ ತಡೆಗೋಡೆ ರಚಿಸಲು ಸಾಧ್ಯ ಇಲ್ಲ. ಆದರೆ ರಸ್ತೆ ಕೆಳಭಾಗದಲ್ಲಿ ನದಿ ಬದಿ ತಡೆಗೋಡೆ ಮಾಡಲಾಗಿದೆ.

ರೋಗಿಗಳ ಪರದಾಟ

ಮೈಸೂರಿನಿಂದ ಈ ಕಡೆಯ ಪಿರಿಯಪಟ್ಟಣ, ಹುಣಸೂರು, ಕೊಡಗು ಜಿಲ್ಲೆಯ ಜನರು ಸಾಮಾನ್ಯ ಚಿಕಿತ್ಸೆಯಿಂದ ಹಿಡಿದು ಉನ್ನತ ಚಿಕಿತ್ಸೆಗಾಗಿ ಸುಳ್ಯ ಮತ್ತು ಮಂಗಳೂರಿನ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಬರಬೇಕು. ಅಂತಹ ನೂರಾರು ಮಂದಿ ರೋಗಿಗಳಿಗೆ ತೊಂದರೆ ಆಗಿದೆ. ಅನಿವಾರ್ಯ ಇರುವ ಮಂದಿ ಕೊಡಗು ಜಿಲ್ಲೆಯವರು ಮಡಿಕೇರಿಯಿಂದ ಭಾಗಮಂಡಲ ಮೂಲಕ ಕರಿಕೆ ಮಾರ್ಗವಾಗಿ ಕೇರಳದ ಪನತ್ತಡಿ, ಕಾಸರಗೋಡು ಮೂಲಕವಾಗಿ ಸುಳ್ಯ, ಮಂಗಳೂರು ಕಡೆಗೆ ಬರುತ್ತಿದ್ದಾರೆ. ನಿತ್ಯ ಮಡಿಕೇರಿ ಮತ್ತು ಸುಳ್ಯ ಕಡೆ ಹೋಗುವ ನೂರಾರು ಉದ್ಯೋಗಿಗಳು ಭಾಗಮಂಡಲದ ಮೂಲಕ ಹೋಗುತ್ತಿದ್ದಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಬ್ಯಾಂಕ್ ಉದ್ಯೋಗಿ ಶಿವರಾಮ ಭಟ್ ಹೇಳಿದರು.

‘ಆಹಾರ, ತುರ್ತು ಸೌಲಭ್ಯ’

ಮಡಿಕೇರಿ ಭಾಗದಲ್ಲಿ ಮಳೆಯಿಂದ ತೊಂದರೆ ಆಗಿ ಸಿಲುಕಿಕೊಂಡವರಿಗೆ ದಿನಸಿ, ಊಟ, ಇತರ ಅಗತ್ಯ ವಸ್ತುಗಳನ್ನು ತಲುಪಿಸುತ್ತೇವೆ ಎಂದು ಯುವಕರ ತಂಡದ ಪರವಾಗಿ ಡಾ.ಪುನೀತ್ ತಿಳಿಸಿದ್ದಾರೆ. ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನೆರೆ ಸಂತ್ರಸ್ತರಿಗೆ ಎರಡು ಪ್ರತ್ಯೇಕ ವಾರ್ಡ್‌ಗಳನ್ನು ತೆರೆದು ಉಚಿತ ಚಿಕಿತ್ಸೆ ನೀಡಲಾಗುವುದು. ಮಾಹಿತಿಗಾಗಿ ದೂರವಾಣಿ 7353756200 ಸಂಪರ್ಕಿಸಬಹುದು ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕೆ.ವಿ.ಚಿದಾನಂದ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !