ಭಾನುವಾರ, ಜುಲೈ 3, 2022
24 °C
ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಸಚಿವದ್ವಯರಿಗೆ ಸನ್ಮಾನ

ರಾಜಕಾರಣವು ಸೂಕ್ಷ್ಮವಾಗುತ್ತಿದೆ: ಸಚಿವ ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ರಾಜಕಾರಣದ ಪ್ರತಿದಿನವೂ ಸೂಕ್ಷ್ಮವಾಗುತ್ತಿದೆ. ಸೇವಾ ಮನೋಭಾವ ಇಟ್ಟುಕೊಂಡು ರಾಜಕಾರಣಕ್ಕೆ ಬರುವವರ ಸಂಖ್ಯೆ ತೀರ ವಿರಳವಾಗುತ್ತಿದೆ. ಇಚ್ಛಾಶಕ್ತಿಯೊಂದಿಗೆ ರಾಜಕಾರಣ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಶನಿವಾರ ಸಚಿವದ್ವಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಹಕಾರ ವ್ಯವಸ್ಥೆ ರಾಜ್ಯದಲ್ಲಿ ಗಟ್ಟಿಯಾಗಿದ್ದು, ಮಾಡಿರುವ ಕೆಲಸಗಳಿಂದಾಗಿ ಜಿಲ್ಲೆಯ ಹಲವು ಸಹಕಾರ ಧುರೀಣರು ಇಂದಿಗೂ ಕೂಡ ಅವಿಸ್ಮರಣೀಯವಾಗಿ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. ಡಾ.ಅಂಬೇಡ್ಕರ್‌ ಅವರು ಬರೆದ ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು’ ಎಂದು ಅವರು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಎಸ್. ಅಂಗಾರ, ‘ನಾನೊಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ಜನರ ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ. ಸಂಘಟನೆ ಹಾಗೂ ಜನರ ಆಶೀರ್ವಾದದಿಂದ ಈ ಸ್ಥಾನ ಸಿಕ್ಕಿದೆ. ಸಹಕಾರಿ ರಂಗದ ಬೆಳವಣಿಗೆಗೆ ಸದಾ ಸಹಕಾರ ನೀಡುವುದಾಗಿ‘ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ‘ಎರಡು ಜಿಲ್ಲೆಗಳ ಸಹಕಾರಿಗಳ ಪರವಾಗಿ ಸಚಿವದ್ವಯರಿಗೆ ಗೌರವಾರ್ಪಣೆ ಸಲ್ಲಿಸಿದ್ದೇವೆ. ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಸಹಕಾರ ದೊರೆಯುವಂತಾಗಲಿ’ ಎಂದು ಹೇಳಿದರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ನೀರಜ್ ಕುಮಾರ್ ವರ್ಮ, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ವೆಂಕಟ ಸ್ವಾಮಿ, ನಬಾರ್ಡ್ ಬ್ಯಾಂಕ್ ಡಿ.ಜಿ.ಎಂ ಸಂಗೀತಾ ಕರ್ತಾ, ಬ್ಯಾಂಕ್  ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್, ಭಾಸ್ಕರ ಎಸ್. ಕೋಟ್ಯಾನ್, ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ, ಎಸ್.ಬಿ.ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಹರಿಶ್ಚಂದ್ರ, ಮಹೇಶ್ ಹೆಗ್ಡೆ, ಜೈರಾಜ್, ಅಶೋಕ್ ಕುಮಾರ್, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಚಿತ್ರದುರ್ಗ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮೀನುಗಾರಿಕಾ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಇದ್ದರು.

ನಿರ್ದೇಶಕ ಶಶಿಕುಮಾರ್ ರೈ ಸ್ವಾಗತಿಸಿದರು. ಡಿಜಿಎಂ ಗೋಪಾಲಕೃಷ್ಣ ವಂದಿಸಿದರು. ಲಕ್ಷ್ಮಣ್ ಮಲ್ಲೂರು ನಿರೂಪಿಸಿದರು.

‘ಎಸ್‌ಸಿಡಿಸಿಸಿ ಬ್ಯಾಂಕ್‌ ದೇಶಕ್ಕೆ ಮಾದರಿ’

‘ಎಸ್‌ಸಿಡಿಸಿಸಿ ಬ್ಯಾಂಕ್ ದೇಶದ ಮಾದರಿ ಬ್ಯಾಂಕ್ ಆಗಿದೆ’ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಏಕರೂಪದ ತಂತ್ರಾಂಶ ಅಳವಡಿಕೆ,  ಹೊಸ ಘನ ವಾಹನದ ಸಾಲಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಹಕಾರ ಕ್ಷೇತ್ರದ ವಿಶ್ವವಿದ್ಯಾಲಯದ ರೀತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನೆ ಮಾಡಿದೆ. ಸಹಕಾರ ಸಂಘದ ಮಾದರಿಗಳನ್ನು ತಿಳಿಯಲು ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಬ್ಯಾಂಕ್‌ನ ಬೆಳವಣಿಗೆಯಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಮರ್ಥ ನಾಯಕತ್ವ ಸದ್ದಿಲ್ಲದೇ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್ .ರಾಜೇಂದ್ರ ಕುಮಾರ್ ಮಾತನಾಡಿ, ಸಾಮೂಹಿಕ ಪ್ರಯತ್ನದಿಂದಾಗಿ ಬ್ಯಾಂಕ್ 25 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಈಗ ₹9,600 ಕೋಟಿ ವ್ಯವಹಾರ ನಡೆಸುತ್ತಿದೆ. ಶೇ 100 ರಷ್ಟು ಕೃಷಿ ಸಾಲ ಮರುಪಾವತಿಯಾಗುತ್ತಿದೆ. ಸಹಕಾರ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುವುದರಿಂದ ಯಾವುದೇ ಮೋಸವಿಲ್ಲ ಎಂದು ಹೇಳಿದರು.

ನಬಾರ್ಡ್ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ನೀರಜ್ ಕುಮಾರ್ ವರ್ಮಾ ಹೊಸ ಎಟಿಎಂ ಉದ್ಘಾಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.