ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಸಿ. ಮನ್ನಾ ಜಮೀನು ಒತ್ತುವರಿ: ಪರಿಶಿಷ್ಟರ ಆಕ್ರೋಶ

Last Updated 16 ಆಗಸ್ಟ್ 2022, 15:32 IST
ಅಕ್ಷರ ಗಾತ್ರ

ಮಂಗಳೂರು: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಎಕರೆಗಳಷ್ಟು ಡಿ.ಸಿ ಮನ್ನಾ ಜಮೀನು ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸಿ ಆ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡಬೇಕು' ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಅಭಿವೃದ್ಧಿ ಸಂಘ ಒತ್ತಾಯಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಂಘದ ಗೌರವಾಧ್ಯಕ್ಷ ಎ.ಚಂದ್ರಕುಮಾರ್‌ ಅಂಗಡಿಗುಡ್ಡೆ, ‘ನಗರದ ದೇರೇಬೈಲ್‌ ಗ್ರಾಮದ ಸರ್ವೆ ನಂಬರ್‌ 174 9ಎ, 175, ಮತ್ತು 176ರಲ್ಲಿ 478 ಎಕರೆಗಳಷ್ಟು ಡಿ.ಸಿ.ಮನ್ನಾ ಜಮೀನನ್ನು ಬ್ರಿಟಿಷರ ಕಾಲದಲ್ಲೇ ಪರಿಶಿಷ್ಟರಿಗಾಗಿ ಕಾಯ್ದಿರಿಸಲಾಗಿದೆ. ಪಹಣಿ ದಾಖಲೆಗಳಲ್ಲಿ ಇದನ್ನು 2001ರ ಬಳಿಕ ಸರ್ಕಾರಿ ಜಮೀನು ಎಂದು ತಿದ್ದುಪಡಿ ಮಾಡಲಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಟುಂಬಗಳು ದಶಕಗಳಿಂದ ನೆಲೆಸಿವೆ. ಅವರಿಂದ ದುಡ್ಡು ಕಟ್ಟಿಸಿಕೊಂಡು ಕೇವಲ ಒಂದೂವರೆ ಸೆಂಟ್ಸ್‌ ಜಾಗ ನೀಡಲಾಗುತ್ತಿದೆ. ಆದರೆ, ಬೇರೆಯವರು ಮಾಡಿಕೊಂಡಿರುವ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ದಶಕಗಳ ಹಿಂದೆ ಹಿರಿಯರಿಗೆ ಜಮೀನು ಮಂಜೂರಾದ ದಾಖಲೆಗಳು ಇಲ್ಲಿನ ಪರಿಶಿಷ್ಟ ಕುಟುಂಬಗಳ ಬಳಿ ಇಲ್ಲ. ಹಿರಿಯರು ತೀರಿಕೊಂಡ ಬಳಿಕ ಜಾಗದ ಮಾಲೀಕತ್ವ ವರ್ಗಯಿಸಬೇಕೆಂದೂ ಇಲ್ಲಿನ ಅಮಾಯಕ ಕುಟುಂಬಗಳಿಗೆ ತಿಳಿದಿಲ್ಲ. ಪರಿಶಿಷ್ಟ ಕುಟುಂಬಗಳು ಮನೆ ಮಂಜೂರಾತಿಗೆ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಜಾಗದ ಮಾಲೀಕತ್ವದ ಕುರಿತ ದಾಖಲೆ ಕೇಳುತ್ತಾರೆ. ಹಾಗಾಗಿ ಪರಿಶಿಷ್ಟ ಕುಟುಂಬಗಳು ವಸತಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಇತ್ಯರ್ಥಪಡಿಸಲು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂತ್ರ ಹುಡುಕಬೇಕು’ ಎಂದು ಅವರು ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟ ಶೇ 24.10ರ ನಿಧಿಯಲ್ಲಿ ಎಂಜಿನಿಯರಿಂಗ್‌ ಹಾಗೂ ಎಂಬಿಬಿಎಸ್‌ ಕಲಿಯುವ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್‌ ನಿಡಲಾಗುತ್ತಿದೆ. ಈ ಸವಲತ್ತನ್ನು ಇತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು’ ಎಂದು ಅವರು ಕೋರಿದರು.

ಸಂಘದ ಅಧ್ಯಕ್ಷ ಸುರೇಂದ್ರ ಸುಂಕದಕಟ್ಟೆ, ‘ಬಾಬೂಜಿ ನಗರದ ಶೇ 95ರಷ್ಟು ಮನೆಗಳು ಪರಿಶಿಷ್ಟರದು. ಇಲ್ಲಿ ಮೂಲಸೌಕರ್ಯ ಕೊರತೆ ಇದೆ. ಇಲ್ಲಿನ ಅಂಬೇಡ್ಕರ್‌ ಭವನ ನಿರ್ಮಿಸಿ 5 ವರ್ಷಗಳು ಕಳೆದಿದ್ದರೂ ಇನ್ನೂ ಉದ್ಘಾಟಿಸಿಲ್ಲ. ಇದನ್ನು ಸುಸ್ಥಿತಿಯಲ್ಲೂ ಇಟ್ಟುಕೊಂಡಿಲ್ಲ’ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ರಾಮಚಂದ್ರ ಬಾಬೂಜಿನಗರ, ಖಜಾಂಚಿ ಡಿ.ರಾಮಕೃಷ್ಣ ಗೋಕುಲ್‌ ಡೈರಿ ಹಾಗೂ ಚಂದ್ರಹಾಸ ಕೋಡಿಕಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT