ಗುರುವಾರ , ಏಪ್ರಿಲ್ 9, 2020
19 °C
ಸತತ ಎರಡನೇ ಬಾರಿ ಕುಟ್ರುಪ್ಪಾಡಿ ಗ್ರಾ.ಪಂ ಗಾಂಧಿ ಗ್ರಾಮ ಪ್ರಶಸ್ತಿಗೆ ಆಯ್ಕೆ

ಸಾಧನೆ ಸರಣಿಗೆ ‍ಪುರಸ್ಕಾರದ ಗರಿ

ಸಿದ್ದಿಕ್ ನೀರಾಜೆ Updated:

ಅಕ್ಷರ ಗಾತ್ರ : | |

Prajavani

ಕಡಬ (ಉಪ್ಪಿನಂಗಡಿ): ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ರಾಜ್ಯ ಸರ್ಕಾರದ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಎರಡನೇ ಬಾರಿ ಭಾಜನವಾಗಿದೆ. ಗ್ರಾಮ ಪಂಚಾಯಿತಿಯ 2018-19ರಲ್ಲಿನ ಸಾಧನೆಗಳನ್ನು ಪರಿಗಣಿಸಿ ಮತ್ತೊಮ್ಮೆ ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಪುತ್ತೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿ, ಕಡಬ ತಾಲ್ಲೂಕು ವ್ಯಾಪ್ತಿಯಲ್ಲಿರುವ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿಯ ಸಾಧನೆ ಸರಣಿ ಮುಂದುವರಿದಿದೆ.

2018-19ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲಗಳ ಕ್ರೋಡೀಕರಣ, ಅನುದಾನಗಳ ಬಳಕೆ, ಜಮಾಬಂದಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಪಾವತಿ, ಮೂಲ ಸೌಕರ್ಯ ವ್ಯವಸ್ಥೆ, ಗ್ರಾಮ ಪಂಚಾಯಿತಿ ವಿವಿಧ ಸಭೆಗಳು, ವಸತಿ ಯೋಜನೆ, ನೈರ್ಮಲ್ಯೀಕರಣ, ಸ್ವಚ್ಛತೆ, ನಗದು ರಹಿತ ವ್ಯವಹಾರ ಜಾರಿಗೊಳಿಸಿರುವುದು, ಕಚೇರಿಗೆ ಸಂಪೂರ್ಣ ಸೋಲಾರ್ ವ್ಯವಸ್ಥೆ ಕಲ್ಪಿಸಿರುವುದು, ವಿದ್ಯುತ್ ಬಿಲ್ಲು ಸಂಪೂರ್ಣ ಪಾವತಿಸಿ ಉಳಿಕೆ ಅನುದಾನವನ್ನು ಗ್ರಾಮ ಪಂಚಾಯತಿಗೆ ಬಳಸಿಕೊಂಡಿರುವುದು, ಸಕಾಲ ಸೇವೆಗಳನ್ನು ಒದಗಿಸಿರುವುದು ಈ ಗ್ರಾಮ ಪಂಚಾಯಿತಿಯ ವಿಶೇಷತೆಗಳು.

ಕುಟ್ರುಪಾಡಿ ಗ್ರಾಮ ಪಂಚಾಯಿತಿಯು ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಿದ್ದು, ಪ್ರತಿ ತಿಂಗಳ ಒಂದು ಭಾನುವಾರ ‘ಸ್ವಚ್ಛ ಕುಟ್ರುಪ್ಪಾಡಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸ್ವಚ್ಛತಾ ಕಾರ್ಯ ನಡೆಸುತ್ತಾ ಬರುತ್ತಿದೆ. ಗ್ರಾಮಸ್ಥರನ್ನು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯಿಂದ ವಾಟ್ಸ್‌ಆ್ಯಪ್‌ ತಂಡವನ್ನು ರಚಿಸಲಾಗಿದ್ದು, ಗ್ರಾಮಸ್ಥರಿಂದ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರು, ಸಂಘ ಸಂಸ್ಥೆಗಳು, ಗ್ರಾಮಸ್ಥರು ಈ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ಎಲ್ಲಾ ಸಾಧನೆಗಳು ಪಂಚಾಯಿತಿಯ ಹಿರಿಮೆ, ಪ್ರಶಸ್ತಿಗೆ ಕಾರಣವಾಗಿವೆ.

ಸರ್ಕಾರದ ಮಾನದಂಡದ ಪ್ರಕಾರದ ಅನುಪಾತದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದೆ. ಹೀಗಾಗಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿಯಿಂದ ನೇಮಿಸಿದ ಅಧಿಕಾರಿಗಳ ತಂಡ ಗ್ರಾಮ ಪಂಚಾಯಿತಿಗೆ ಬಂದು ಪರಿಶೀಲನೆ ನಡೆಸಿದ ಬಳಿಕ ಈ ಪ್ರಶಸ್ತಿಗೆ ಸತತ ಎರಡನೇ ಬಾರಿಗೆ ಆಯ್ಕೆಗೊಂಡಿರುತ್ತದೆ.

ಪ್ರಶಸ್ತಿಯನ್ನು ಅಕ್ಟೋಬರ್ 2ರಂದು ಬೆಂಗಳೂರು ವಿಧಾನಸೌಧದಲ್ಲಿ ನಡೆಯುವ ಗಾಂಧಿ ಜಯಂತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಪ್ರಧಾನ ಮಾಡಲಿದ್ದಾರೆ.

’ಗ್ರಾಮಸ್ಥರ ಸಹಕಾರ ಸ್ಮರಣೀಯ’

ಸತತ ಎರಡನೇ ಬಾರಿಗೆ ಪ್ರಶಸ್ತಿ ಬಂದಿದ್ದು, ಅತೀವ ಸಂತಸವಾಗಿದೆ. ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರ ಸಹಕಾರ, ಸಿಬ್ಬಂದಿಯ ಪಾರದರ್ಶಕ ಸೇವೆಯೊಂದಿಗೆ ಕಚೇರಿಗೆ ಬರುವ ಗ್ರಾಮಸ್ಥರಿಗೆ ಸ್ಪಂದನೆ ದೊರಕುತ್ತಿತ್ತು. ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಗ್ರಾಮಸ್ಥರಿಂದ ಸಲಹೆ–ಸೂಚನೆಗಳನ್ನು ಪಡೆಯಲಾಗುತ್ತಿತ್ತು. ಅದೇ ರೀತಿ ಗ್ರಾಮಸ್ಥರೂ
ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದರು. ಹೀಗಾಗಿ ನಮ್ಮ ಕೆಲಸಗಳು ಗುರುತಿಸುವಂತಾಗಿ ಪ್ರಶಸ್ತಿ ಲಭಿಸಲು ಸಾಧ್ಯವಾಗಿದೆ.
-ವಿದ್ಯಾ ಗೋಗಟೆ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಕುಟ್ರುಪ್ಪಾಡಿ

‘ಇನ್ನಷ್ಟು ಕೆಲಸ ಮಾಡಲು ಪ್ರೇರಣೆ’

ಆಡಳಿತ ಮಂಡಳಿ, ಗ್ರಾಮಸ್ಥರ ಸಹಕಾರದಿಂದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದೇವೆ. ಪಂಚಾಯಿತಿ ಕಚೇರಿಗೆ ಸೋಲಾರ್ ವ್ಯವಸ್ಥೆ ಸಹಿತ ಬಹಳಷ್ಟು ವಿಶೇಷ ಕೆಲಸಗಳನ್ನು ಮಾಡಿದ್ದೇವೆ. ಈ ಪ್ರಶಸ್ತಿಯಿಂದಾಗಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ದೊರಕಿದೆ.
-ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)