ಮಂಗಳೂರು: ಈ ಹಿಂದೆ ಪರಿಷ್ಕರಿಸಿದ್ದ 2023-24ರ ಆಸ್ತಿ ತೆರಿಗೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಮತ್ತು ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು (ಎಸ್‌ಎಎಸ್) ಮತ್ತೊಮ್ಮೆ ಪರಿಷ್ಕರಿಸಲಾಗಿದೆ.
ತೆರಿಗೆದಾರರಿಗೆ ಹೊರೆಯಾಗದಂತೆ ಪರಿಷ್ಕೃತ ದರದಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡಲಾಗಿದೆ ಎಂದು ಮೇಯರ್ ಜಯಾನಂದ ಅಂಚನ್ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ 2022–23ನೇ ಸಾಲಿಗೆ ಆಸ್ತಿ ತೆರಿಗೆ ಪರಿಷ್ಕರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಹಿಂದಿನ ಆಯುಕ್ತರಿಗೆ ಸರ್ಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ 1976ಕ್ಕೆ ತಂದಿರುವ ಕಾನೂನು ತಿದ್ದುಪಡಿಯಂತೆ ಪರಿಷ್ಕೃತ ಆಸ್ತಿ ತೆರಿಗೆಯನ್ನು ಜಾರಿಗೊಳಿಸಿಲಾಗಿತ್ತು. ಆದರೆ ಜಾರಿಗೊಳಿಸಿದ ಆಸ್ತಿ ತೆರಿಗೆಯಲ್ಲಿ ಏಕರೂಪತೆ ಇಲ್ಲದೆ ಜನರಿಗೆ ಹೊರೆಯಾಗುವ ರೀತಿಯಲ್ಲಿ ನಿಗದಿಪಡಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಕಾರಣ ಮರುಪರಿಶೀಲಿಸಿ, ಸಾರ್ವಜನಿಕರಿಗೆ ಹೊರೆಯಾಗದಂತೆ ತೆರಿಗೆ ದರ ನಿರ್ಧರಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿತ್ತು ಎಂದರು.
ಮಾ.20ರಂದು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತ ಕಾರ್ಯಸೂಚಿಗೆ ಅನುಮೋದನೆ ನೀಡಿದ್ದು, ಈಗಾಗಲೇ ಮಾ.21ರಂದು ಎಂಸಿಸಿಯ ಆಸ್ತಿ ತೆರಿಗೆ ಸಾಫ್ಟ್‌ವೇರ್‌ನಲ್ಲಿ ಪರಿಷ್ಕೃತ ಆಸ್ತಿ ತೆರಿಗೆಯನ್ನು ಅಳವಡಿಸಲಾಗಿದೆ. ಆಸ್ತಿ ಮಾಲೀಕರು 2023–24ನೇ ಸಾಲಿಗೆ ಮುಂಗಡ ಆಸ್ತಿ ತೆರಿಗೆಯನ್ನು ಪಾವತಿಸಿದ್ದರೆ, ಅವರು ಮುಂದಿನ ಸಾಲಿಗೆ ತೆರಿಗೆ ಪಾವತಿಸಿದಾಗ ಇನ್ನು ಸರಿಹೊಂದಿಸಲಾಗುತ್ತದೆ. ಈ ಸಂಬಂಧ ಆಸ್ತಿಯ ಮಾಲೀಕರಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಈಗಾಗಲೇ 32,407 ಆಸ್ತಿಗಳ ಮಾಲೀಕರು 2023-24ನೇ ಸಾಲಿಗೆ ₹17.25 ಕೋಟಿ ತೆರಿಗೆ ಪಾವತಿಸಿದ್ದಾರೆ ಎಂದು ಹೇಳಿದರು.
ಪರಿಷತ್ತಿನ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಆಯಾ ಭಾಗದ ಆಸ್ತಿ ಮೌಲ್ಯವನ್ನು ಪರಿಗಣಿಸಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಕಟ್ಟಡದ ತೆರಿಗೆ ಪಾವತಿಸಬಹುದಾದ ಭಾಗದ ಶೇ0.2 ರಿಂದ ಶೇ1.5ರಷ್ಟು ಇದೆ. ಕಟ್ಟಡದ ಸುತ್ತಲಿನ ಜಾಗದ 1,000 ಚದರ ಅಡಿ ವಿಸ್ತೀರ್ಣದವರೆಗೆ ವಿನಾಯಿತಿ ನೀಡಲಾಗಿದೆ. ಖಾಲಿ ಭೂಮಿಗೆ ತೆರಿಗೆಯನ್ನು ಭೂಮಿಯ ಮೌಲ್ಯದ ಶೇ0.2ರಿಂದ ಶೇ0.5ರಷ್ಟು ಪರಿಗಣಿಸಿ ಲೆಕ್ಕಹಾಕಲಾಗುತ್ತದೆ. 2022-23ರ ಆರ್ಥಿಕ ವರ್ಷದಲ್ಲಿ ₹93 ಕೋಟಿ ಆಸ್ತಿ ತೆರಿಗೆಯನ್ನು ಪಾಲಿಕೆ ಸಂಗ್ರಹಿಸಿದೆ’ ಎಂದರು.
ಉಪ ಮೇಯರ್ ಪೂರ್ಣಿಮಾ, ಸದಸ್ಯೆ ಶಕೀಲ ಕಾವ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.