ಸಂಸೆ ಐಟಿಐಗೆ ರಾಜ್ಯದಲ್ಲೇ ಮೊದಲ ಸ್ಥಾನ

7
ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಯಿಂದ ಗುಣಮಟ್ಟ ಸಮೀಕ್ಷೆ

ಸಂಸೆ ಐಟಿಐಗೆ ರಾಜ್ಯದಲ್ಲೇ ಮೊದಲ ಸ್ಥಾನ

Published:
Updated:
Deccan Herald

ಕಳಸ: ಇಲ್ಲಿಗೆ ಸಮೀಪದ ಸಂಸೆಯಲ್ಲಿರುವ ಧರ್ಮಸ್ಥಳ ಕೈಗಾರಿಕಾ ತರಬೇತಿ ಸಂಸ್ಥೆಯು ರಾಜ್ಯದಲ್ಲೇ ಅತ್ಯಂತ ಶ್ರೇಷ್ಟ ಗುಣಮಟ್ಟದ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆಯು ಅಖಿಲ ಭಾರತ ಮಟ್ಟದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಿತ್ತು. ಕಠಿಣ ಮಾನದಂಡಗಳನ್ನು ಹೊಂದಿದ್ದ, ಇಲಾಖೆಯು ನೀಡುವ ಗರಿಷ್ಠ 5 ಅಂಕಗಳ ಪೈಕಿ 3.16 ಅಂಕಗಳನ್ನು ಸಂಸೆಯ ಐಟಿಐ ಸಂಸ್ಥೆ ಪಡೆದುಕೊಂಡಿದೆ. ಇದು ರಾಜ್ಯದ ಎಲ್ಲ ಐಟಿಐ ಸಂಸ್ಥೆಗಳ ಪೈಕಿ ಗರಿಷ್ಠ ಅಂಕವಾಗಿದ್ದು ಸಂಸೆ ಐಟಿಐ ರಾಜ್ಯದಲ್ಲೇ ಅಗ್ರಸ್ಥಾನಗಳಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಸತೀಶ್ ಹೆಮ್ಮೆಯಿಂದ ಹೇಳಿದರು.

1992ರಲ್ಲಿ ಸಂಸೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ (ರಿ) ವತಿಯಿಂದ ಈ ಸಂಸ್ಥೆ ಸ್ಥಾಪಿತವಾಯಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸ ನೀಡುವ ವೀರೇಂದ್ರ ಹೆಗ್ಗಡೆ ಅವರ ಹೆಬ್ಬಯಕೆಯೊಂದಿಗೆ ಸಂಸ್ಥೆ ಕಾರ್ಯಾರಂಭಿಸಿತು. 26 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಶಿಯನ್, ಮೋಟಾರು ವಾಹನ ಮೆಕ್ಯಾನಿಕ್, ಗ್ಯಾಸ್ ಮತ್ತು ವಿದ್ಯುತ್ ವೆಲ್ಡರ್ ಹಾಗೂ ಮಿಗ್ ಹಾಗೂ ಟಿಗ್ ವೆಲ್ಡರ್ ತರಬೇತಿ, ಫಿಟ್ಟರ್, ಡೀಸೆಲ್ ಮೆಕ್ಯಾನಿಕ್ ಮತ್ತು ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವಿಭಾಗಗಳಲ್ಲಿ ಈ ಸಂಸ್ಥೆ ತರಬೇತಿ ನೀಡುತ್ತಿದೆ.

‘ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯಿಂದ ಸಂಸೆಯ ಎಸ್‍ಡಿಎಂ ಐಟಿಐ ಸಂಸ್ಥೆ ಕಾರ್ಪೋರೇಟ್ ವಲಯದಲ್ಲೂ ಹೆಸರು ಪಡೆದಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಲಿಸಲಾಗುವ ಶಿಸ್ತು ಮತ್ತು ಬದ್ಧತೆಯಿಂದಾಗಿ ಅವರು ಪರಿಪೂರ್ಣ ಪ್ರಜೆಗಳಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿವರ್ಷವೂ ಎಲ್ಲ ವಿಭಾಗಗಳ ಬಹುತೇಕ ವಿದ್ಯಾರ್ಥಿಗಳಿಗೆ ಸಂಸೆಯಲ್ಲೇ ಕ್ಯಾಂಪಸ್ ಸಂದರ್ಶನ ನಡೆಯುತ್ತದೆ. ವಿಶೇಷ ಎಂದರೆ ಎಲ್ಲ ವಿಭಾಗಗಳ ಬಹುತೇಕ ವಿದ್ಯಾರ್ಥಿಗಳಿಗೆ ತರಬೇತಿ ಮುಗಿಯುವ ಒಳಗೇ ಉದ್ಯೋಗವೂ ಸಿಗುತ್ತಿದೆ. ಈಗಾಗಲೇ ಪ್ರತಿಷ್ಟಿತ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಆಕರ್ಷಕ ವೇತನ ಮತ್ತು ಉಜ್ವಲ ಭವಿಷ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ಸಿಕ್ಕಿದೆ.

ಕಾಲೇಜಿನ ಆಡಳಿತ, ಬೋಧನೆ, ತರಬೇತಿ, ಪ್ರಯೋಗಾಲಯ, ವರ್ಕ್‍ಶಾಪ್, ಕಟ್ಟಡ, ವಿದ್ಯಾರ್ಥಿನಿಲಯ, ಬೋಧಕ ಸಿಬ್ಬಂದಿಯ ಗುಣಮಟ್ಟ ಇವುಗಳನ್ನೆಲ್ಲಾ ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತಾ ಇಲಾಖೆ ರಾಜ್ಯದಲ್ಲೇ ಸಂಸೆ ಐಟಿಐ ಸಂಸ್ಥೆಗೆ ಅಗ್ರಸ್ಥಾನ ನೀಡಿದೆ. ನಮ್ಮ ಸಂಸ್ಥೆಯ ಈ ಸಾಧನೆ ಹೆಮ್ಮೆಯ ಸಂಗತಿಯಾಗಿದ್ದು  ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಎಲ್ಲ ಸಿಬ್ಬಂದಿಯೂ ಶ್ರಮಿಸುತ್ತೇವೆ’ ಎಂದು ಪ್ರಾಂಶುಪಾಲ ಸತೀಶ್ ಹೇಳುತ್ತಾರೆ.

ಸಂಸೆಯ ಐಟಿಐ ಸಂಸ್ಥೆಯು ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತಿನ ಶಾಶ್ವತ ಸಂಯೋಜನೆಗೆ ಒಳಪಟ್ಟಿದೆ. ಸಂಸೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವೃತ್ತಿ ಪರೀಕ್ಷೆಗೆ ಹಾಜರಾಗುವ ಅವಕಾಶ ಇದೆ. 2004, 2007, 2009 ಮತ್ತು 2012ರಲ್ಲಿ ಈ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾಧನೆ ತೋರಿದ್ದಾರೆ. ಜೊತೆಗೆ ಈ ಸಂಸ್ಥೆಯು ಭಾರತ ಸರ್ಕಾರದಿಂದ ರಾಷ್ಟ್ರಮಟ್ಟದ ಅತ್ಯುತ್ತಮ ಸಂಸ್ಥೆ ಎಂಬ ಪ್ರಶಸ್ತಿಯನ್ನೂ ಗಳಿಸಿಕೊಂಡಿದೆ.

ಕಳಸದಲ್ಲಿ ಆರಂಭವಾಗಬೇಕಿದ್ದ ಈ ಐಟಿಐ ಸಂಸ್ಥೆ ಆಗ ಜಾಗದ ಕೊರತೆ ಮತ್ತು ಸ್ಥಳೀಯರ ನಿರಾಸಕ್ತಿಯಿಂದಾಗಿ ಸಂಸೆಗೆ ವರ್ಗಾವಣೆ ಆಯಿತು. ಈ ಸಂಸ್ಥೆಯ ಏಳಿಗೆ ಕಂಡು ಕಳಸದ ಜನತೆ ಈಗ ಅವಕಾಶ ಕೈತಪ್ಪಿಹೋದ ಬಗ್ಗೆ ಬೇಸರದಲ್ಲಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !