ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕರಾವಳಿಗೆ ಪ್ರತ್ಯೇಕ ಚುನಾವಣೆ ಪ್ರಣಾಳಿಕೆ

ಹರಿಪ್ರಸಾದ್‌, ಖಾದರ್‌ ಅಭಿನಂದನಾ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್
Last Updated 20 ಮೇ 2022, 5:09 IST
ಅಕ್ಷರ ಗಾತ್ರ

ಮಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಘೋಷಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಗುರುವಾರ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಭಾಗದ ಮೀನುಗಾರರು, ಬಿಲ್ಲವರು, ಬಂಟರು, ಶೋಷಿತರು, ಬಡವರನ್ನು ಒಳಗೊಂಡ ಅಭಿವೃದ್ಧಿಯ ಚಿಂತನೆಯನ್ನು ಪ್ರಣಾಳಿಕೆಯ ಮೂಲಕ ನೀಡಲಾಗುವುದು ಎಂದರು.

ಬಿಜೆಪಿ ನಾಯಕರು ಕೇವಲ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳ ಬಗ್ಗೆ ಮಾತನಾಡುತ್ತಾರೆ. ಈ ಭಾಗದ ಜನರು ಉದ್ಯೋಗಕ್ಕಾಗಿ ಬೆಂಗಳೂರು, ವಿದೇಶಗಳನ್ನು ಅವಲಂಬಿಸುವಂತಾಗಿದೆ. ಈ ಭಾಗದಲ್ಲಿಯೇ ಅವರಿಗೆ ಉದ್ಯೋಗ ನೀಡುವ ಕೆಲಸವನ್ನು ಬಿಜೆಪಿ ನಾಯಕರು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳಿಂದ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ರೈತರ ಆದಾಯ ದ್ವಿಗುಣವಾಗಿಲ್ಲ. ಉದ್ಯೋಗಿಗಳ ಸಂಬಳ ಹೆಚ್ಚಾಗಿಲ್ಲ ಎಂದ ಅವರು, ‘ರಾಜ್ಯ ಸರ್ಕಾರದಲ್ಲಿ ಒಬ್ಬ ಲಂಚಕ್ಕೆ ಹೋದ, ಇನ್ನೊಬ್ಬ ಮಂಚಕ್ಕೆ ಹೋದ’ ಎಂದು ಟೀಕಿಸಿದರು.

ಶೇ 40 ಕಮಿಷನ್‌ ಸರ್ಕಾರ ನಡೆಯುತ್ತಿದೆ. ವಿಧಾನಸೌಧದ ಗೋಡೆಗಳೂ ಹಣ ಹಣ ಎಂದು ಕೇಳುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಕಾಸಿಲ್ಲದೇ ಕೆಲಸ ಆಗುತ್ತಿಲ್ಲ. ಸಚಿವ ಸ್ಥಾನ, ಮುಖ್ಯಮಂತ್ರಿ ಹುದ್ದೆಗೂ ಲಂಚ ಕೊಡಬೇಕಾಗುತ್ತದೆ ಎಂದು ಬಿಜೆಪಿ ಶಾಸಕರೇ ಹೇಳಿದ್ದಾರೆ. ಇದು ಬಿಜೆಪಿ ಸರ್ಕಾರದ ಕಾರ್ಯವೈಖರಿ ಎಂದು ಲೇವಡಿ ಮಾಡಿದರು.

ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ಮೂಲಕ ತಳಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಬೇಕು. ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ ಅನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ‘ಪ್ರಧಾನಿ ಮೋದಿ ಅವರು ವಿದ್ಯಾವಂತರಿಗೆ ಪಕೋಡ ಮಾರಿ ಎಂದು ಹೇಳುತ್ತಿದ್ದಾರೆ. ಕರಾವಳಿಯ ಜನರು ಬಹಳ ಹಿಂದೆಯೇ ಮುಂಬೈಗೆ ಹೋಗಿ ಇಡ್ಲಿ, ದೋಸೆ, ಪಕೋಡ ಮಾಡಿ, ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಜನರು ಸರ್ಕಾರಿ ಕೆಲಸದಲ್ಲಿ ಇಲ್ಲ. ಸ್ವಂತ ಶಕ್ತಿಯ ಮೇಲೆ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂತಹ ನಾಡಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲಾಗುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚರವಾಗಿ ಇರಬೇಕು’ ಎಂದರು.

ಬಿಜೆಪಿ, ಆರ್‌ಎಸ್‌ಎಸ್‌ಗೆ ಹಿಜಾಬ್‌ ಮುಖ್ಯವಲ್ಲ. ಅವರಿಗೆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬಾರದು. ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ, ಸಮಾಜ ಸುಶಿಕ್ಷಿತವಾಗುತ್ತದೆ ಎನ್ನುವ ಭಯ ಬಿಜೆಪಿಯವರದ್ದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಉದ್ಘಾಟಿಸಿದರು. ರಾಜ್ಯಸಭೆ ಸದಸ್ಯ ಡಾ.ಎಲ್‌. ಹನುಮಂತಯ್ಯ ಅಭಿನಂದನಾ ಭಾಷಣ ಮಾಡಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಐವನ್‌ ಡಿಸೋಜ, ವಿಜಯಕುಮಾರ್ ಶೆಟ್ಟಿ, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮೊಹಿಯುದ್ದೀನ್‌ ಬಾವ, ಪಿ.ವಿ. ಮೋಹನ್‌, ಮಿಥುನ್‌ ರೈ, ಹರೀಶ್‌ಕುಮಾರ್, ಕೆ.ಎಸ್‌. ಮಸೂದ್, ಇಬ್ರಾಹಿಂ ಕೋಡಿಜಾಲ್‌, ಮಾಜಿ ಮೇಯರ್‌ ಕವಿತಾ ಸನಿಲ್‌ ವೇದಿಕೆಯಲ್ಲಿದ್ದರು. ಎಂ. ಶಶಿಧರ್‌ ಹೆಗ್ಡೆ ಸ್ವಾಗತಿಸಿದರು. ಶಾಹುಲ್‌ ಹಮೀದ್ ನಿರೂಪಿಸಿದರು.

‘ಆರ್‌ಎಸ್‌ಎಸ್‌ ವಿರುದ್ಧ ಹೋರಾಟಕ್ಕೆ ಕಾರಣ’
ಬಹಳ ವರ್ಷಗಳ ಹಿಂದೆ ಮುಂಬೈನಲ್ಲಿದ್ದ ಹೋಟೆಲ್‌ ಉದ್ಯಮಿಗಳನ್ನು ಅಲ್ಲಿನ ಶಿವಸೇನೆ ಹಾಗೂ ಅದಕ್ಕೆ ಬೆಂಬಲ ನೀಡುತ್ತಿದ್ದ ಜನಸಂಘದವರು ಹೆದರಿಸಿ ಓಡಿಸಿದರು. ಅವರು ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡರು. ವಿದ್ಯಾರ್ಥಿ ನಾಯಕನಾಗಿದ್ದಾಗ, ಹೋಟೆಲ್‌ ಉದ್ಯಮಿಗಳು ಹೇಳಿದ ಆ ಮಾತುಗಳೇ ಜನಸಂಘ, ಆರ್‌ಎಸ್‌ಎಸ್‌ ವಿರುದ್ಧದ ಹೋರಾಟಕ್ಕೆ ಕಾರಣ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.

ಈಗ ಕೂಗಾಡುತ್ತಿರುವ ಪ್ರಮೋದ್ ಮುತಾಲಿಕ್‌, ಆಗ ಶಿವಸೇನೆ, ಜನಸಂಘದ ವಿರುದ್ಧ ಹೋರಾಡಬೇಕಿತ್ತು. ಪ್ರಮೋದ್‌ ಮುತಾಲಿಕ್‌ರಂತಹ ನರಹೇಡಿಗಳಿಗೆ ಹೆದರುವುದಿಲ್ಲ. ಖಾಕಿ ಚಡ್ಡಿ, ಕರಿ ಟೋಪಿ ಹಾಕಿರುವವರಿಗೆ ಭಯ ಬೀಳುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಹೋರಾಟ ನಿರಂತರ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT