ಬುಧವಾರ, ನವೆಂಬರ್ 13, 2019
28 °C

17ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ದೋಷಿ

Published:
Updated:

ಮಂಗಳೂರು: ಸರಣಿ ಹಂತಕ ಸೈನೈಡ್‌ ಮೋಹನ್‌ 17ನೇ ಕೊಲೆ ಪ್ರಕರಣದಲ್ಲೂ ಅಪರಾಧಿ ಎಂದು ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ತೀರ್ಮಾನ ಪ್ರಕಟಿಸಿದೆ.

ಈ ಹಿಂದೆ 16 ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2005ರ ಅಕ್ಟೋಬರ್‌ 22ರಂದು ಬೆಂಗಳೂರಿನ ಮೆಜೆಸ್ಟಿಕ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಂಟ್ವಾಳ ತಾಲ್ಲೂಕು ಬಾಳೆಪುಣಿ ನಿವಾಸಿಯಾಗಿದ್ದ ಯುವತಿಯನ್ನು ಸೈನೈಡ್‌ ನೀಡಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲೂ ಈತನ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ಮಂಗಳವಾರ ಹೇಳಿದೆ.

ಅಂಗನವಾಡಿ ಸಹಾಯಕಿಯಾಗಿದ್ದ ಮೃತ ಯುವತಿ 2005ರ ಅಕ್ಟೋಬರ್‌ ತಿಂಗಳ ಒಂದು ದಿನ ಸಭೆಯ ನಿಮಿತ್ತ ಬಿ.ಸಿ.ರೋಡ್‌ಗೆ ಬಂದಿದ್ದರು. ಅಲ್ಲಿ ಆಕೆಯನ್ನು ಪರಿಚಯಿಸಿಕೊಂಡಿದ್ದ ಮೋಹನ್‌, ಮದುವೆಯಾಗುವ ಭರವಸೆ ನೀಡಿದ್ದ. ಆಭರಣಗಳನ್ನು ಧರಿಸಿಕೊಂಡು ಬರುವಂತೆ ಸೂಚಿಸಿದ್ದ.

2005ರ ಅ.21ರಂದು ಆಭರಣಗಳನ್ನು ಧರಿಸಿ ಬಂದಿದ್ದ ಯುವತಿ, ಶೃಂಗೇರಿಗೆ ಪ್ರವಾಸ ಹೊರಟಿರುವುದಾಗಿ ಸಹೋದ್ಯೋಗಿಗಳ ಬಳಿ ಹೇಳಿದ್ದಳು. ಬಿ.ಸಿ.ರೋಡ್‌ ಬಸ್‌ ನಿಲ್ದಾಣಕ್ಕೆ ಬಂದ ಆಕೆಯನ್ನು ಅಪರಾಧಿಯು ಬಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದು, ಮದುವೆಯ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮರುದಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಕರೆತಂದು ಗರ್ಭ ನಿರೋಧಕ ಮಾತ್ರೆ ಎಂದು ಸೈನೈಡ್‌ ನೀಡಿದ್ದ.

ಸೈನೈಡ್‌ ಸೇವಿಸಿದ್ದ ಯುವತಿ ಬಸ್‌ ನಿಲ್ದಾಣದಲ್ಲೇ ಬಿದ್ದಿದ್ದಳು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಳು. ಲಾಡ್ಜ್‌ನ ಕೊಠಡಿಗೆ ಮರಳಿದ್ದ ಮೋಹನ್‌ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. ಗುರುತು ಪತ್ತೆಯಾಗದ ಕಾರಣ ಪೊಲೀಸರೇ ಶವಸಂಸ್ಕಾರ ನಡೆಸಿದ್ದರು. 2009ರಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾಗ ಈ ಕೊಲೆಯ ಬಗ್ಗೆಯೂ ಮಾಹಿತಿ ನೀಡಿದ್ದ. ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

41 ಸಾಕ್ಷಿಗಳ ವಿಚಾರಣೆ ನಡೆಸಿ, 67 ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶೆ ಸಯೀದುನ್ನೀಸಾ ಅವರು, ‘ಮೋಹನ್‌ ಅಪರಾಧಿ’ ಎಂದು ಸಾರಿದರು. ಅತ್ಯಾಚಾರ, ಕೊಲೆ, ವಿಷಪ್ರಾಶನ, ಸುಲಿಗೆ, ವಂಚನೆ, ಸಾಕ್ಷ್ಯನಾಶ ಆರೋಪಗಳು ಸಾಬೀತಾಗಿವೆ. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಾಧ್ಯತೆ ಇದೆ.

ಕೊಣಾಜೆ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಲಿಂಗಪ್ಪ ಪ್ರಾಥಮಿಕ ತನಿಖೆ ನಡೆಸಿದ್ದು, ಸಿಐಡಿ ಇನ್‌ಸ್ಪೆಕ್ಟರ್‌ ವಜೀರ್‌ ಸಾಬ್‌ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಓ.ಎಂ. ಕ್ರಾಸ್ತಾ ಪ್ರಾಸಿಕ್ಯೂಷನ್‌ ಪರ ವಾದಿಸಿದ್ದರು.

ಪ್ರತಿಕ್ರಿಯಿಸಿ (+)