ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆ ಹಿಡಿದ ಆನೆ ಸಾಗಣೆ ವೇಳೆ ಕಲ್ಲು ತೂರಾಟ: ಏಳು ಮಂದಿ ಬಂಧನ 

Last Updated 24 ಫೆಬ್ರುವರಿ 2023, 9:03 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಕಾಡಾನೆ ಸೆರೆ ಹಿಡಿದು ವಾಹನದಲ್ಲಿ ಸಾಗಣೆ ಮಾಡುವ ವೇಳೆ ಅರಣ್ಯ ಹಾಗೂ ಪೊಲೀಸ್ ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಏಳು ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಕೊಂಬಾರು ಗ್ರಾಮದ ಕಮರಕಜ್ಜಿಮನೆ ಉಮೇಶ್, ರಾಜೇಶ್ ಕನ್ನಡ, ಜನಾರ್ದನ್ ರೈ, ಕೋಕಿಲ ನಂದ, ತೀರ್ಥಕುಮಾರ್, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು.

ಗುರುವಾರ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ರಾತ್ರಿ 9 ಗಂಟೆ ವೇಳೆಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಸ್ಥಳದಲ್ಲಿದ್ದ ಕೆಲವರು ಸ್ಥಳಕ್ಕೆ ಬಂದು, ಕಾಡಾನೆಯನ್ನು ಕೊಂಡೊಯ್ಯುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಗಲಾಟೆ ಮಾಡಿದ್ದರು.

ಸೆರೆ ಹಿಡಿದ ಆನೆಯನ್ನು ಹೆಚ್ಚು ಹೊತ್ತು ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರೂ ಕೇಳದ ಆರೋಪಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ತಿಳಿವಳಿಕೆ ಹೇಳಲು ಯತ್ನಿಸಿದರೂ, ಕೇಳದೆ ಆರೋಪಿಗಳು, ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಗಾಯಗಳಾಗಿವೆ. ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ ಎಂದು ಕಡಬ ಉಪ ವಲಯ ಅರಣ್ಯ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT