ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದು, ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಾಗಿದೆ.
‘ತನ್ನನ್ನು ಬೆಂಗಳೂರಿನ ಹೋಟೆಲ್ ಒಂದಕ್ಕೆ 2023ನೇ ಜೂನ್ ತಿಂಗಳಲ್ಲಿ ಕರೆಸಿಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ತನ್ನ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.
‘ಅರುಣ್ ಅವರ ಹಿಂದುತ್ವದ ಪ್ರತಿಪಾದನೆ ಮತ್ತು ಪ್ರಖ್ಯಾತಿಯನ್ನು ಕಂಡು ಅವರ ಬಗ್ಗೆ ಅಭಿಮಾನ ಹೊಂದಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ನೈತಿಕ ಬೆಂಬಲ ನೀಡುತ್ತಿದ್ದೆ. 2023ರ ಜೂನ್ ತಿಂಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕವೂ ಇತರ ಕಡೆಗಳಲ್ಲಿ ಮುಖತಃ ಸಂಪರ್ಕಿಸುತ್ತಿದ್ದರು. ‘ಒಂದೋ ನಿನ್ನ ಪ್ರಾಣ ಹೋಗುತ್ತದೆ. ಇಲ್ಲಾ ನನ್ನ ಪ್ರಾಣ ಹೋಗುತ್ತದೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿ ಅವರು ಇರುವ ಜಾಗಕ್ಕೆ ಕರೆಸಿಕೊಳ್ಳುತ್ತಿದ್ದರು.’
‘ಅಬಲೆಯಾದ ನನ್ನನ್ನು ಮತ್ತು ನನ್ನ ಪುತ್ರಿಯನ್ನು ಜೀವನಪೂರ್ತಿ ಯಾವುದೇ ಕುಂದುಕೊರತೆಗಳಿಲ್ಲದೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ನಂಬಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು. ನಿನ್ನೊಂದಿಗಿರುವ ಕ್ಷಣಗಳ ಛಾಯಾಚಿತ್ರಗಳು, ಸೆಲ್ಫಿಗಳು, ಆಡಿಯೊ, ವಿಡಿಯೊಗಳು ತನ್ನಲ್ಲಿದೆ ಎಂದು ಹೇಳಿಕೊಂಡು ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು’ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
‘ನಾನು ಅವರ ಕುಟಿಲ ಬಲೆಯಲ್ಲಿ ಸಿಲುಕಿ ಅಸಹಾಯಕಳಾಗಿದ್ದೆ. 2024ರ ಲೋಕಸಭಾ ಚುನಾವಣೆಯ ಬಳಿಕ ನನ್ನೊಂದಿಗಿನ ಮಾತುಕತೆ ಕಡಿಮೆ ಮಾಡಿದ್ದರು. ನನ್ನನ್ನು ಸಂಪೂರ್ಣವಾಗಿ ಶೋಷಣೆಗೆ ಒಳಪಡಿಸಿ, ಅವರ ಆಸೆಗಳನ್ನು ತೀರಿಸಿಕೊಂಡು ನನ್ನನ್ನು ಅವರ ಬಾಳಿನಿಂದ ದೂರ ಮಾಡಿದರೆಂಬ ಭಯದಿಂದ ನನ್ನ ನಿವಾಸವನ್ನು ಪುತ್ತೂರಿಗೆ ಸ್ಥಳಾಂತರಿಸಿದ್ದೇನೆ. ಬಾಡಿಗೆ ಮನೆಯೊಂದರಲ್ಲಿ ಪುತ್ರಿಯೊಂದಿಗೆ ಯಾವುದೇ ಉದ್ಯೋಗ ಹಾಗೂ ವರಮಾನವಿಲ್ಲದೆ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನನಗೆ ಮತ್ತು ನನ್ನ ಪುತ್ರಿಗೆ ಅವರು ಮಾಡಿದ ದ್ರೋಹ, ಅನ್ಯಾಯ, ಅಕ್ರಮ, ವಿಶ್ವಾಸ ದ್ರೋಹಕ್ಕೆ ಕಾನೂನು ರೀತಿಯಲ್ಲಿ ಕ್ರಮಕೈಗೊಂಡು ನನಗೆ ಮತ್ತು ಪುತ್ರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಂತ್ರಸ್ತೆಯು ದೂರಿನಲ್ಲಿ ವಿನಂತಿಸಿಕೊಂಡಿದ್ದಾರೆ.
ವೈದ್ಯಕೀಯ ಪರೀಕ್ಷೆ: ದೂರು ನೀಡಿರುವ ಮಹಿಳೆಯನ್ನು ಇಲ್ಲಿನ ಮಹಿಳಾ ಠಾಣೆಯ ಪೊಲೀಸರು ಸೋಮವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ತನ್ನ ವಿರುದ್ಧ ದೂರಿನ ಕುರಿತು ಪ್ರತಿಕ್ರಿಯಿಸಿರುವ ಅರುಣ್ ಕುಮಾರ್ ಪುತ್ತಿಲ, ‘ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ನನ್ನ ವಿರುದ್ಧ ಮಾಡಲಾಗಿರುವ ಸುಳ್ಳು ಆರೋಪಗಳಿಗೆ ಸಂಬಂಧಿಸಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.