ಗುರುವಾರ , ಮೇ 28, 2020
27 °C

ವಿಟ್ಲ | ಬಾಳೆಕೋಡಿ ಶ್ರೀ ನಿಧನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಟ್ಲ: ಕನ್ಯಾನ ಗ್ರಾಮದ ಬಾಳೆಕೋಡಿ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ (44) ಸೋಮವಾರ ತಡರಾತ್ರಿ ಅನಾರೋಗ್ಯದಿಂದ ದೈವೈಕ್ಯರಾದರು. 

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಕೊಳ್ಳೆಗಾಲದ ಮಣಿಯನ್ ಕುಟ್ಟಿ ಸ್ವಾಮಿನಾಥನ್ ಅವರಿಂದ 49 ಬಗೆಯ ಭೈರವ ತಂತ್ರ ವಿದ್ಯೆಗಳಲ್ಲಿ ಪರಿಣತರಾಗಿದ್ದ ಶಶಿಕಾಂತಮಣಿ ಸ್ವಾಮೀಜಿ ಸದಾಕಾಲ ಶಿವನ ಧ್ಯಾನದಿಂದ ಶ್ರೀಕ್ಷೇತ್ರವನ್ನು ಸಾಂತ್ವನ ಕೇಂದ್ರವಾಗಿ ರೂಪಿಸಿ, 18 ವರ್ಷಗಳಿಂದ ಸೇವೆ ಸಲ್ಲಿಸಿದ ಅತ್ಯಂತ ಕಿರಿಯ ದಲಿತ ಸ್ವಾಮೀಜಿ ಎನಿಸಿಕೊಂಡಿದ್ದರು.

ದೇವಸ್ಥಾನ ನಿರ್ಮಾಣ ಮಾಡಲು ಪ್ರಯತ್ನಿಸಿದ್ದ ಅವರಿಗೆ ಅದನ್ನು ಪೂರ್ತಿಗೊಳಿಸಬೇಕು ಎಂಬ ಅವರ ಸಂಕಲ್ಪ ಈಡೇರಲಿಲ್ಲ. ಶ್ರೀ ಕಾಳಭೈರವೇಶ್ವರ ಟ್ರಸ್ಟ್ ರಚಿಸಿ ಧನಸಹಾಯ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ್ದರು. ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ, ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು. ಧಾರ್ಮಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರು. ತುಳು, ಕನ್ನಡ ಭಾಷೆಯಲ್ಲಿ ಕವಿತೆ ರಚಿಸಿದ್ದ ಅವರು ಅನೇಕ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

2014ರ ಪ್ರತಿಷ್ಠಿತ ‘ನೆಲ್ಸನ್ ಮಂಡೇಲಾ ಪ್ರಶಸ್ತಿ’, ‘ಇಂಡೋ–ನೇಪಾಲ್ ಸದ್ಭಾವನಾ ಪ್ರಶಸ್ತಿ’ಯನ್ನು ನೇಪಾಳದ ಪ್ರಧಾನಿ ಖಿಲ್ ರಾಜ್ ರೆಗ್ಮಿ ಅವರಿಂದ ಪಡೆದುಕೊಂಡಿದ್ದಾರೆ. ಎಕನಾಮಿಕ್ ಗ್ರೋತ್‌ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು 2014-15ನೇ ಸಾಲಿನ ‘ಪ್ರೈಡ್ ಆಫ್ ಏಷ್ಯಾ ಅಂತರರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಿದೆ.

ಅಜೆಕ್ಕಾರ್ ಬೆಳದಿಂಗಳ ಸಮ್ಮೇಳನದಲ್ಲಿ ಕರ್ನಾಟಕ ಧರ್ಮರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ಪ್ರದಾನ ಮಾಡಲಾಗಿತ್ತು. 2018ರ ಆಗಸ್ಟ್ 10ರಂದು ದೆಹಲಿಯಲ್ಲಿ ಜರ್ಮನಿಯ ಇಂಟರ್ ನ್ಯಾಷನಲ್ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅವರು ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಆಯೋಜಿಸುತ್ತಿದ್ದರು, ಹವ್ಯಾಸಿ ಭಾಗವತರಾಗಿದ್ದರು.

ಒಡಿಯೂರು ಶ್ರೀಗಳಿಂದ ಸಂತಾಪ: ‘ಕನ್ಯಾನ ಗ್ರಾಮದ ಬಾಳೆಕೋಡಿಯಲ್ಲಿ ಈಗಾಗಲೇ ಸೇವಾ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದ ಶಶಿಕಾಂತಮಣಿ ಸ್ವಾಮೀಜಿ ಅನಾರೋಗ್ಯದಿಂದ ಶಿವೈಕ್ಯರಾದುದು ದುಃಖಕರ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲೆಂದು ಆರಾಧ್ಯ ದೇವರನ್ನು ಪ್ರಾರ್ಥಿಸುತ್ತೇವೆ’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು