ಗುರುವಾರ , ಫೆಬ್ರವರಿ 27, 2020
19 °C
ಶೇಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಜಿ.ಎಲ್. ಹೆಗಡೆ

ಶೇಣಿಯವರು ಅಖಂಡ ಭಾರತದ ವ್ಯಕ್ತಿತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಶೇಣಿ ಕೇವಲ ಯಕ್ಷಗಾನದ ವ್ಯಕ್ತಿ ಅಲ್ಲ. ಅಖಂಡ ಭಾರತದ ವ್ಯಕ್ತಿತ್ವ’ ಎಂದು ನಿವೃತ್ತ ಉಪನ್ಯಾಸಕ ಡಾ.ಜಿ.ಎಲ್. ಹೆಗಡೆ ಬಣ್ಣಿಸಿದರು.

ಶೇಣಿ ಗೋಪಾಲಕೃಷ್ಣ ಭಟ್‌ ಚಾರಿಟಬಲ್ ಟ್ರಸ್ಟ್,  ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ‘ಶೇಣಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಶೇಣಿಯವರು ಅಧ್ಯಾತ್ಮ ಪರಂಪರೆ ಯೋಗಿಯಂತೆ ಇದ್ದರು. ಅವರನ್ನು ಮೊದಲ ಬಾರಿಗೆ ನೋಡಿದಾಗಲೇ ಸೆಳೆತ ಉಂಟಾಗಿತ್ತು. ಯಕ್ಷಗಾನದ ಅರ್ಥ ಹಾಗೂ ಪಾತ್ರದ ಮೂಲಕ ಗೌರವ ಹೆಚ್ಚಿತು. ಅವರ ಬದುಕೇ ಮಾನವ ಧರ್ಮದ ಪ್ರಚಾರದಂತೆ ಇತ್ತು. ಹೀಗಾಗಿಯೇ ನಾನು ಶೇಣಿ ರಾಮಾಯಣ, ಶೇಣಿ ಭಾರತ ಬರೆದೆನು. ಶೇಣಿ ಭಾಗವತ ಬರೆಯುವ ಇಚ್ಛೆ ಇತ್ತು’ ಎಂದರು.

ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿ, ‘ಯಕ್ಷಗಾನದಲ್ಲಿ ಇತಿಹಾಸ ನಿರ್ಮಾಣ ಮಾಡಿದವರು ಶೇಣಿ. ಅವರು ಪಾತ್ರಗಳಿಗೆ ಚಿಂತನೆ ನೀಡಿದರು.

ಪಾತ್ರಗಳ ಆಕರ್ಷಣೆ ಹೆಚ್ಚಿಸಿದರು. ರಾಮ, ಕೃಷ್ಣ ಮಾತ್ರವಲ್ಲ, ಬಪ್ಪ ಬ್ಯಾರಿ ಸೇರಿದಂತೆ ಎಲ್ಲ ಪಾತ್ರಗಳನ್ನು ಹಾಕುವ ಮೂಲಕ ಜನರಿಗೆ ಹತ್ತಿರವಾದರು. ಯಕ್ಷಗಾನಕ್ಕೆ ಜನಪ್ರಿಯತೆ ತಂದು ಕೊಟ್ಟರು’ ಎಂದರು.

ಕಟೀಲಿನ ಆನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಮಾತನಾಡಿ, ‘ಹರಿಕಥೆಯಲ್ಲಿ ದಾಸ್ಯ ಇರುತ್ತದೆ. ಆದರೆ, ಶೇಣಿಯವರು ಯಕ್ಷಗಾನದ ಮೂಲಕ ಪ್ರಭು ಸಂಹಿತೆಯನ್ನು ಮೆರೆದವರು. ಅವರ ವಾಕ್‌ ವೈಖರಿಯು ಯಕ್ಷಗಾನಕ್ಕೂ ಯಶಸ್ಸು ನೀಡಿತು’ ಎಂದರು.

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಹುಕ್ಲಮಕ್ಕಿಯ ಗೋಪಾಲಕೃಷ್ಣ ಹೆಗಡೆ, ‘ಶೇಣಿಯವರ ಅರ್ಥಗಾರಿಕೆಯಲ್ಲಿ ಅದ್ವೈತವನ್ನು ಗುರುತಿಸಿದ ವ್ಯಕ್ತಿತ್ವ ಜಿ.ಎಲ್.ಹೆಗಡೆ’ ಎಂದರು. ಟ್ರಸ್ಟ್ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ‘ಯಕ್ಷಗಾನವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸದಲ್ಲಿ ಟ್ರಸ್ಟ್‌ ತನ್ನ ಪ್ರಯತ್ನ ಮಾಡುತ್ತಿದೆ’ ಎಂದರು.

ಲೆಕ್ಕ ಪರಿಶೋಧಕ ಎಸ್.ಎಸ್. ನಾಯಕ್, ಸಾಮೆತಡ್ಕ ಗೋಪಾಲಕೃಷ್ಣ ಭಟ್, ಪಿ.ವಿ.ರಾವ್, ಸೇರಾಜೆ ಗೋಪಾಲಕೃಷ್ಣ ಭಟ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)