ಕೊರಡಿನಂತೆ ದೇಹ ಸವೆಸಿದ ಧೀಮಂತ: ವೀರೇಂದ್ರ ಹೆಗ್ಗಡೆ

7

ಕೊರಡಿನಂತೆ ದೇಹ ಸವೆಸಿದ ಧೀಮಂತ: ವೀರೇಂದ್ರ ಹೆಗ್ಗಡೆ

Published:
Updated:
Prajavani

ಉಜಿರೆ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸಂತಾಪ ವ್ಯಕ್ತಪಡಿಸಿ ಗೌರವ ನಮನ ಸಲ್ಲಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದ ಪೂಜ್ಯರು ಅನೇಕ ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿರುವುದನ್ನು ಅವರು ಸ್ಮರಿಸಿದ್ದಾರೆ. 

‘ಬಾಲ್ಯದಿಂದಲೇ ವಿರಕ್ತಿ ಮಾರ್ಗವನ್ನು ಅನುಸರಿಸಿದ ಶಿವಕುಮಾರ ಸ್ವಾಮೀಜಿ ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು- ಅಂತೆಯೇ ಸಮಾಜ ಮತ್ತು ದೇಶದ ಕಲ್ಯಾಣಕ್ಕಾಗಿ ದೇಹವನ್ನು ಕೊರಡಿನಂತೆ ಸವೆಸಿದರು. ಧಾರ್ಮಿಕರಾದರೂ ಅವರಲ್ಲಿ ದೇಶಭಕ್ತಿ ಆಳವಾಗಿ ನೆಲೆಯೂರಿತ್ತು. ದೇಶ ಉದ್ಧಾರವಾಗಬೇಕಾದರೆ ಜನತೆಯ ಬಡತನ ನಿವಾರಣೆಯಾಗಬೇಕು. ವಿದ್ಯಾರ್ಜನೆಗೆ ಅವಕಾಶಗಳಿರಬೇಕು ಎಂದು ಅವರು ಯೋಜನೆಗಳನ್ನು ಹಾಕಿಕೊಂಡವರು’ ಎಂದಿದ್ದಾರೆ.

‘ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದು ತಮ್ಮ ಬಾಳಿನಲ್ಲಿ ಬದಲಾವಣೆಯನ್ನು ಕಂಡರು. ಮೂರು ತಲೆಮಾರುಗಳ ಶಿಕ್ಷಣದಿಂದ ಸಮಾಜದಲ್ಲಿದ್ದ ಜಾತೀಯತೆಯ ಅಂತರಗಳನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದರು. ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ ನೀಡಿದರು. ಅವರ ಪ್ರೇರಣೆಯಿಂದ ನೂರಾರು ಮಠ-ಮಂದಿರಗಳು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದವು. ಹಳ್ಳಿ-ಹಳ್ಳಿಗಳಲ್ಲಿ ಶೈಕ್ಷಣಿಕ ಕ್ರಾಂತಿಯಾಯಿತು’ ಎಂದು ಹೆಗ್ಗಡೆ ಅವರು ಸ್ಮರಿಸಿದ್ದಾರೆ.

‘ಪೂಜ್ಯರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಹಿರಿಯರಾಗಿದ್ದರು. ಕಳೆದ 72 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಗಳು ರಚನೆಯಾದಾಗ ಶ್ರೀಗಳ ಆಶೀರ್ವಾದ ಪಡೆಯಲು ಮುತ್ಸದ್ಧಿಗಳು ಧಾವಿಸುತ್ತಿದ್ದರು. ಪೂಜ್ಯರು ತಮ್ಮ ಹಿರಿತನದಿಂದ ಮಾರ್ಗದರ್ಶನ ನೀಡುತ್ತಾ ಬಂದರು. ಸರ್ಕಾರದ ಅನೇಕ ಜನಪರ ಯೋಜನೆಗಳಲ್ಲಿ ಪೂಜ್ಯರ ಪ್ರೇರಣೆ, ಮಾರ್ಗದರ್ಶನವಿದೆ. ಭಾರತ ದೇಶದಲ್ಲೆ ಶ್ರೇಷ್ಠ ಸೇವೆಯನ್ನು ಮಾಡಿದ ಮಠಾಧಿಪತಿ ಮತ್ತು ಶ್ರೀ ಮಠ ಎಂದು ಸಿದ್ಧಗಂಗಾ ಮಠ ಪ್ರಸಿದ್ಧವಾಯಿತು. ಅವರು ಖಂಡಿತವಾಗಿಯೂ ಸ್ವರ್ಗಾರೋಹಣ ಮಾಡಿದ್ದಾರೆ’ ಎಂಬ ಸ್ಮರಣೆಯೊಂದಿಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಗೌರವ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !