ಗುರುವಾರ , ಮೇ 26, 2022
23 °C

ನಮೋ... ನಮಗೆ ಮೋಸ...ಎಂದಿದ್ದ ತುಳು ನಟ ಶೋಭರಾಜ್ ಪಾವೂರು ಅವರಿಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕನ್ನಡ– ತುಳು ಸಿನಿಮಾ ಮತ್ತು ಕಿರುತೆರೆ ನಟ ಶೋಭರಾಜ್ ಪಾವೂರು ತೈಲ ಬೆಲೆಯೇರಿಕೆ ಬಗ್ಗೆ ಫೇಸ್‌ಬುಕ್‌ನಲ್ಲಿ ‘ನಮೋ... ನಮಗೆ ಮೋಸ... ಪೆಟ್ರೋಲ್ ಧಗ ಧಗ... ಡೀಸೆಲ್ ಧಗ ಧಗ’ ಎಂದು ಹಾಕಿದ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ಪ್ರತಿಕ್ರಿಯೆ ಹಾಕಲಾಗಿದೆ.

ಈ ಬಗ್ಗೆ ಶೋಭರಾಜ್ ಪಾವೂರು ಅವರು ತುಳುವಿನಲ್ಲಿ ಸ್ಪಷ್ಟೀಕರಣ ನೀಡಿದ್ದರೂ, ಅದಕ್ಕೂ ಅವಹೇಳನಕಾರಿ, ಬೆದರಿಕೆಯ ಕಮೆಂಟ್ ಮಾಡಿದ್ದು, ಪಾವೂರು ಸ್ಪಷ್ಟೀಕರಣವನ್ನೂ ತೆಗೆದು ಹಾಕಿದ್ದಾರೆ.

‘ದರ ಏರಿಕೆಯಿಂದ ನನಗೆ ಉಂಟಾದ ಸಂಕಷ್ಟವನ್ನು ಹಾಕಿದ್ದೇನೆ. ಪ್ರತಿಕ್ರಿಯೆ ಹಾಕಿದವರು ಅವರ ಅಭಿಪ್ರಾಯಗಳನ್ನು ಹಾಕಿದ್ದಾರೆ. ಬೆಲೆಯೇರಿಕೆ ಕುರಿತು ನನ್ನ ಕಮೆಂಟ್‌ಗೆ ವಿರುದ್ಧವಾಗಿಯೇ ಮಾಹಿತಿ ಹಾಕಿದ್ದರೆ ಸಂತೋಷ ಪಡುತ್ತಿದೆ. ಆದರೆ, ಈ ರೀತಿ ಕಮೆಂಟ್‌ ಮಾಡುವ ಸಂಸ್ಕೃತಿಯನ್ನು ಕಂಡರೆ ಪ್ರಧಾನಿ ಮೋದಿ ಅವರಿಗೂ ಬೇಸರ ಆಗಬಹುದು. ಹೀಗಾಗಿ, ನಾನು ಕಮೆಂಟ್‌ಗಳನ್ನೂ ನೋಡುತ್ತಿಲ್ಲ. ನಮ್ಮ ಬರಹ ನಮ್ಮ ಪ್ರತಿಬಂಬ. ಜನ ನಿರ್ಧರಿಸುತ್ತಾರೆ’ ಎಂದು ಶೋಭರಾಜ್ ಪಾವೂರು ಪ್ರತಿಕ್ರಿಯಿಸಿದ್ದಾರೆ.

‘ನಟ ಶೋಭರಾಜ್ ಪಾವೂರು ಮೋದಿ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದರೆ, ಪೆಟ್ರೋಲ್ ದರ ಏರಿಕೆಯ ಜನರ ಸಂಕಷ್ಟವನ್ನು ವಿರೋಧಿಸಿದ್ದಕ್ಕೆ ದ್ರೋಹಿ ಆಗಿಬಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ನಟ ಅರವಿಂದ ಬೋಳಾರ್ ನಕಲಿ ಜ್ಯೋತಿಷಿಗಳನ್ನು ವಿಡಂಬನೆ ಮಾಡಿದಾಗಲೂ, ಮೋದಿ ಅನುಯಾಯಿಗಳು ದಾಳಿ ನಡೆಸಿದ್ದರು. ಅಸಹನೀಯ ಕಮೆಂಟ್ ಮಾಡುತ್ತಿರುವುದು ಅವರ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಮೌಢ್ಯ, ವಂಚನೆ ಹಾಗೂ ಜನರ ಸಮಸ್ಯೆ ಬಗ್ಗೆ ದನಿ ಎತ್ತದಂತೆ ದಮನಿಸುವುದು ಅತಿರೇಕ ಹಾಗೂ ಅಪಾಯಕಾರಿ. ರಂಗಭೂಮಿ, ಸಿನಿಮಾ, ಬರಹಗಾರರು, ಕಲಾವಿದರು ಸೇರಿದಂತೆ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಬೇಕು‌’ ಎಂದು ಮುನೀರ್ ಕಾಟಿಪಳ್ಳ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು