ಮಂಗಳವಾರ, ಮಾರ್ಚ್ 2, 2021
31 °C

ಶ್ರಾವಣ ಅಮಾವಾಸ್ಯೆ ತೀರ್ಥಸ್ನಾನ;ಸೋಮೇಶ್ವರ ಸಮುದ್ರದಲ್ಲಿ ಮಿಂದೆದ್ದ ಸಹಸ್ರ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಳ್ಳಾಲ: ಶ್ರಾವಣ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಮುದ್ರಸ್ನಾನ ಮಾಡಿ ಕೃತಾರ್ಥರಾದರು. ಇತರ ಭಾಗದಲ್ಲಿ ಆಟಿ ಅಮಾವಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರೆ ಸೋಮೇಶ್ವರದಲ್ಲಿ ಶ್ರಾವಣ ಅಮಾವಾಸ್ಯೆ ಶ್ರೇಷ್ಠವಾಗಿ ಪರಿಗಣಿಸಲಾಗಿದೆ.

ಈ ಬಾರಿ ಶ್ರಾವಣ ಅಮಾವಾಸ್ಯೆ ಭಾನುವಾರ ದಿನವಾದುದರಿಂದ ಸಹಜವಾಗಿಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆಯೇ ಆಗಮಿಸಿದ್ದರೂ ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ ವಿಶೇಷ ಪ್ರಾರ್ಥನೆ ಬಳಿಕ ಸಮುದ್ರಸ್ನಾನ ಮಾಡಿದರು.

ವಾಡಿಕೆಯಂತೆ ಕೆಲವರು ದೇವಸ್ಥಾನದ ಸಮೀಪದಲ್ಲಿರುವ ಔಷಧೀಯ ಗುಣವುಳ್ಳ ತುಂಬಿ ತುಳುಕುತ್ತಿದ್ದ ಗದಾತೀರ್ಥದಲ್ಲಿ ಸ್ನಾನಮಾಡಿ ಬಳಿಕ ಸಮುದ್ರ ಸ್ನಾನ ಮಾಡಿದರು. ಇನ್ನು ಕೆಲವರು ಸಮುದ್ರಸ್ನಾನ ಮಾಡಿ ಬಳಿಕ ಗದಾತೀರ್ಥದಲ್ಲಿ ಪವಿತ್ರಸ್ನಾನ ಮಾಡಿದರು. ಸಮುದ್ರದಿಂದ ಕೇವಲ 50ಮೀಟರ್‌ ಅಂತರದಲ್ಲಿ ಗದಾತೀರ್ಥವಿದ್ದರೂ ಗದಾತೀರ್ಥದ ನೀರಿನಲ್ಲಿ ಸ್ವಲ್ಪವೂ ಉಪ್ಪಿನಂಶ ಇಲ್ಲದಿರುವುದು ಗದಾತೀರ್ಥದಲ್ಲಿ ಔಷಧೀಯ ಅಂಶ ಇದೆ ಎಂಬುದಕ್ಕೆ ಪುಷ್ಟಿ ನೀಡಿದ್ದು ಸಮುದ್ರಸ್ನಾನದ ಜೊತೆಗೆ ಗದಾತೀರ್ಥಕ್ಕೂ ತನ್ನದೇ ಕಾರಣಿಕತೆ ಇದೆ.

ಸೋಮೇಶ್ವರದ ಸಮುದ್ರ ಸ್ನಾನ ಹಾಗೂ ಗದಾತೀರ್ಥ ಸ್ನಾನದಿಂದ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ಹಿರಿಯರ ನಂಬಿಕೆ ಇಂದಿಗೂ ಅಚಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ನೆರೆಯ ಕಾಸರಗೋಡಿನಿಂದಲೂ ಒಂದು ವರ್ಷವೂ ತಪ್ಪದಂತೆ ಬಂದು ಸಮುದ್ರಸ್ನಾನಕ್ಕೆ ಇಲ್ಲಿಗೆ ಬರುವ ಬಹಳಷ್ಟು  ಭಕ್ತರು ಬಂದಿದ್ದರು. ಕಳೆದ ವರ್ಷ ಖಗ್ರಾಸ ಸೂರ್ಯ ಗ್ರಹಣವಿದ್ದುದರಿಂದ ತೀರ್ಥ ಸ್ನಾನ ಮಾಡುವವರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡಿತ್ತಾದರೂ ಈ ಬಾರಿ  ಭಕ್ತರ ಸಂಖ್ಯೆ ಹೆಚ್ಚಿತ್ತು.

ದುಪ್ಪಟ್ಟು ಬೆಲೆ: ಎರಡು ವೀಳ್ಯದೆಲೆ ಹಾಗೂ ಒಂದು ಅಡಿಕೆಗೆ ಕೆಲವು ಮಾರಾಟಗಾರರು ₹10 ತೆಗೆದುಕೊಂಡರೆ ದೇವಸ್ಥಾನದ ದ್ವಾರದಲ್ಲಿ ಮಾರಾಟ ಮಾಡುತ್ತಿದ್ದವರು ಕೇವಲ ₹5ಕ್ಕೆ ನೀಡುತ್ತಿದ್ದರು. ಅಷ್ಟಕ್ಕೂ 100 ಮೀಟರ್‌ ಅಂತರದಲ್ಲಿ ದುಪ್ಪಟ್ಟು ಬೆಲೆ ಕಂಡುಬಂದಿದೆ. ಹಣ್ಣುಕಾಯಿ ಮಾಡಿಸುವವರ ಸಂಖ್ಯೆ ಹೆಚ್ಚಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.