ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗೋಲಿಬಾರ್: ಫೆ.4ಕ್ಕೆ ವಿಚಾರಣೆ ಮುಂದೂಡಿದ ಮಾನವ ಹಕ್ಕು ಆಯೋಗ

ಮಂಗಳೂರು ಗೋಲಿಬಾರ್‌ ಪ್ರಕರಣ
Last Updated 1 ಜನವರಿ 2020, 9:02 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಡಿಸೆಂಬರ್‌ 19ರಂದು ನಡೆದ ಗೋಲಿಬಾರ್‌ನಲ್ಲಿ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಎಂಬುವವರ ಸಾವಿಗೆ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳು ಕಾರಣ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ಸಲ್ಲಿಸಿರುವ ದೂರಿನ ವಿಚಾರಣೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ ಫೆಬ್ರುವರಿ 4ಕ್ಕೆ ಮುಂದೂಡಿದೆ.

ಬಂಟ್ವಾಳ ಪುರಸಭೆಯ ಸದಸ್ಯರಾದ ಲುಕ್ಮಾನ್‌, ಮೂನಿಶ್‌ ಅಲಿ ಅಹ್ಮದ್, ಕೆಪಿಸಿ ಕಾರ್ಯದರ್ಶಿ ರಕ್ಷಿತ್‌ ಶಿವರಾಂ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕಿ ಲಾವಣ್ಯಾ ಬಲ್ಲಾಳ್‌ ಡಿ.26ರಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ, ಸದಸ್ಯರಾದ ಕೆ.ಬಿ.ಚಂಗಪ್ಪ ಮತ್ತು ರೂಪಕ್‌ ಕುಮಾರ್‌ ದತ್ತ ಅವರನ್ನೊಳಗೊಂಡ ಪೂರ್ಣ ಪೀಠದಲ್ಲಿ ಮಂಗಳವಾರ ವಿಚಾರಣೆ ನಡೆಯಿತು.

ಅರ್ಜಿದಾರರು ತಮ್ಮ ದೂರಿಗೆ ಪೂರಕವಾಗಿ ಕೆಲವು ಹೊಸ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದರು. ಮೃತರ ಕುಟುಂಬದ ಸದಸ್ಯರು ಕೂಡ ವಿಚಾರಣೆ ವೇಳೆ ಹಾಜರಿದ್ದರು. ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿರುವ ಕುರಿತು ಪೊಲೀಸ್‌ ಕಮಿಷನರ್‌ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ವಿಸ್ತೃತ ಮಾಹಿತಿ ಒದಗಿಸಿ ಪತ್ರ ಬರೆದಿದ್ದಾರೆ. ಈ ವಿಷಯವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಮಾನವ ಹಕ್ಕುಗಳ ಆಯೋಗದ ಜೊತೆ ಹಂಚಿಕೊಂಡಿತ್ತು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಬಂದಿರುವ ಪತ್ರದ ವಿಚಾರವನ್ನು ಅರ್ಜಿದಾರರಿಗೆ ತಿಳಿಸಿದ ಪೀಠ, ಮತ್ತಷ್ಟು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿತು. ದೂರಿನ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿ ಆದೇಶ ಹೊರಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT