ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಐಪಿ ಭೋಜನಕ್ಕೆ ₹1,737 ಬಿಲ್ ಪಾವತಿ!

Last Updated 4 ಮಾರ್ಚ್ 2018, 20:12 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವದ ದಿನ ಗಣ್ಯಾತಿಗಣ್ಯರೊಬ್ಬರ (ವಿವಿಐಪಿ) ಭೋಜನಕ್ಕೆ ₹1,737, ಗಣ್ಯರಿಗೆ (ವಿಐಪಿ) ₹1,310, ಸಚಿವಾಲಯದ ಸಿಬ್ಬಂದಿಗೆ ₹ 810 ಪಾವತಿ ಮಾಡಲಾಗಿದೆ!

2017ರ ಅಕ್ಟೋಬರ್‌ 25ರಂದು ನಡೆದ ಮಹೋತ್ಸವದ ಖರ್ಚು ವೆಚ್ಚಗಳಿಗೆ ಸರ್ಕಾರದ ಬೊಕ್ಕಸದಿಂದ ಈಗಾಗಲೇ ₹ 9,12 ಕೋಟಿ ಪಾವತಿಸಲಾಗಿದೆ. ಇನ್ನೂ ಕೆಲವು ಬಿಲ್‌ಗಳ ಪಾವತಿ ಬಾಕಿ ಇದೆ. ಈವರೆಗೆ ಪಾವತಿಸಿದ ಬಿಲ್‌ಗಳ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವಜ್ರ ಮಹೋತ್ಸವವನ್ನು ಎರಡು ದಿನ ಆಯೋಜಿಸಲು ವಿಧಾನಸಭಾ ಸಚಿವಾಲಯ ನಿರ್ಧರಿಸಿ, ₹26.87 ಕೋಟಿ ಅಂದಾಜು ವೆಚ್ಚದ ಪ್ರಸ್ತಾವವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು. ಆದರೆ, ದುಬಾರಿ ವೆಚ್ಚಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ದಿನಕ್ಕೆ ಕಾರ್ಯ
ಕ್ರಮ ಸೀಮಿತಗೊಳಿಸಿ ವೆಚ್ಚವನ್ನು ₹10 ಕೋಟಿಗೆ ಮಿತಿಗೊಳಿಸಿದ್ದರು.

ಮುಖ್ಯಮಂತ್ರಿ ಸೂಚನೆಯಂತೆ ₹10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿತ್ತು. ವಿಧಾನಸೌಧದ ಹೂವಿನ ಅಲಂಕಾರಕ್ಕೆ ₹ 30 ಲಕ್ಷ, ಬ್ರ್ಯಾಂಡಿಂಗ್‌, ಪ್ರಚಾರ ಮತ್ತು ಮುದ್ರಣಕ್ಕೆ ₹1 ಕೋಟಿ, ಸಿನಿಮಾ ಪ್ರದರ್ಶನಕ್ಕೆ ₹2 ಕೋಟಿ, ಸ್ವಚ್ಛತೆಗೆ ₹15 ಲಕ್ಷ, ವಿಡಿಯೊ ಪ್ರಚಾರ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ₹7.5 ಲಕ್ಷ, ಜನಸಾಮಾನ್ಯರ ಊಟೋಪಚಾರಕ್ಕೆ ₹50 ಲಕ್ಷ ವೆಚ್ಚವಾಗಿದೆ.

ಈ ಎಲ್ಲವನ್ನೂ ಡಿಎನ್‌ಎ ಎಂಟರ್‌ ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಎಂಬ ಸಂಸ್ಥೆ ನಿರ್ವಹಿಸಿದೆ. 750 ವಿವಿಐಪಿ ಮತ್ತು ಅಷ್ಟೇ ಸಂಖ್ಯೆಯ ವಿಐಪಿಗಳಿಗೆ ಮತ್ತು ಸಚಿವಾಲಯದ 1,500 ಸಿಬ್ಬಂದಿಗೆ ಗೋಲ್ಡ್ ಫಿಂಚ್‌ ಹೋಟೆಲ್‌ನಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಇಷ್ಟು ಊಟಕ್ಕೆ ₹ 41.30 ಲಕ್ಷ ಖರ್ಚಾಗಿದೆ.

‘ವಿಧಾನಸೌಧ ಕಟ್ಟಡ ನಿರ್ಮಾಣ’ ಕುರಿತ ಸಾಕ್ಷ್ಯ ಚಿತ್ರವನ್ನು ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲು  ನಿರ್ದೇಶಕ  ಗಿರೀಶ್ ಕಾಸರವಳ್ಳಿಗೆ ಹಾಗೂ ‘ಕರ್ನಾಟಕದ ಶಾಸನಸಭೆ ನಡೆದು ಬಂದ ಹಾದಿ’ ಸಾಕ್ಷ್ಯ ಚಿತ್ರವನ್ನು ₹ 1.58 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ದೇಶಕ ಟಿ.ಎನ್‌. ಸೀತಾರಾಂ ಅವರಿಗೆ ವಹಿಸಲಾಗಿತ್ತು. ಇಬ್ಬರಿಗೂ ಕ್ರಮವಾಗಿ ₹ 25 ಲಕ್ಷ ಮತ್ತು ₹ 35 ಲಕ್ಷ ಮುಂಗಡ ನೀಡಲಾಗಿತ್ತು.

‘ವೆಚ್ಚ ಕಡಿಮೆ ಮಾಡಿ ಸಾಕ್ಷ್ಯ ಚಿತ್ರ ನಿರ್ಮಿಸುವಂತೆ ಈ ಇಬ್ಬರಿಗೂ ಸೂಚಿಸಲಾಗಿತ್ತು. ಸೀತಾರಾಂ ₹ 50 ಲಕ್ಷಕ್ಕೆ ಒಪ್ಪಿಕೊಂಡಿದ್ದು, ಅವರಿಗೆ ಮುಂಗಡ ನೀಡಿರುವ ಹಣ ಬಿಟ್ಟು, ಬಾಕಿ ₹ 15 ಲಕ್ಷ ನೀಡಬೇಕಿದೆ. ಆದರೆ, ಗಿರೀಶ್‌ ಕಾಸರವಳ್ಳಿ ₹ 75 ಲಕ್ಷ ನೀಡುವಂತೆ ಕೇಳಿದ್ದಾರೆ. ಅಷ್ಟು ಹಣ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಲಾಗಿದ್ದು, ₹ 40 ಲಕ್ಷ ನೀಡುವುದಾಗಿ ತಿಳಿಸಲಾಗಿದೆ. ಈಗಾಗಲೇ ನೀಡಿರುವ ಮುಂಗಡ ಬಿಟ್ಟು ಉಳಿದ ₹ 15 ಲಕ್ಷ ಕೊಡಬೇಕಿದೆ. ಅದಕ್ಕೆ ಅವರು ಒಪ್ಪುತ್ತಿಲ್ಲ’ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

ವಿಧಾನಸೌಧದ ‘3 ಡಿ ವರ್ಚುಯಲ್ ರಿಯಾಲಿಟಿ’ ವಿಡಿಯೊ ಪ್ರದರ್ಶನಕ್ಕೆ ₹ 25 ಲಕ್ಷ, ರಸಮಂಜರಿ ಕಾರ್ಯಕ್ರಮ ನೀಡಿದ ಸಂಗೀತ ನಿರ್ದೇಶಕ ಹಂಸಲೇಖಗೆ ₹ 15 ಲಕ್ಷ ನೀಡಲಾಗಿದೆ. ರಾಜ್ಯ ಸರ್ಕಾರದ ಸಾಧನೆಗಳ ಕುರಿತು 3ಡಿ ಮ್ಯಾಪಿಂಗ್‌ ಪ್ರದರ್ಶನದ ಹೊಣೆ ವಹಿಸಿದ್ದ ‘ಅಡಿ 3ಡಿ ಸ್ಟುಡಿಯೊ’ ಸಂಸ್ಥೆಗೆ 3ಡಿ ಮಾಹಿತಿ ಮತ್ತು ಅನಿಮೇಷನ್‌ ನಿರ್ಮಿಸಿ, ಒಂದು ನಿಮಿಷದ ಪ್ರದರ್ಶನಕ್ಕೆ ₹ 4 ಲಕ್ಷದಂತೆ 10 ನಿಮಿಷಕ್ಕೆ ₹ 40 ಲಕ್ಷ, ಫ್ಯಾಬ್ರಿಕೇಷನ್‌, ಧ್ವನಿ, ಜನರೇಟರ್‌, ಸಾಗಣೆ, ನಿರ್ವಹಣಾ ವೆಚ್ಚ ₹ 46.65 ಲಕ್ಷ ನೀಡಲಾಗಿದೆ. ಎರಡು ಬಿಲ್‌ಗಳಲ್ಲಾಗಿ ಈ ಸಂಸ್ಥೆಗೆ ಒಟ್ಟು ₹2 ಕೋಟಿ ಪಾವತಿಸಲಾಗಿದೆ.

‘ಪಾವತಿಯಲ್ಲಿ ಸಂದೇಹ’

‘ವಜ್ರ ಮಹೋತ್ಸವದ ವಿವಿಧ ಕಾರ್ಯಕ್ರಮಗಳನ್ನು ವಹಿಸುವ ಸಂದರ್ಭದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಿಂದ (ಕೆಟಿಟಿಪಿ) ವಿನಾಯಿತಿ ನೀಡಲಾಗಿದೆ. ಹೀಗಾಗಿ, ಯಾವುದೇ ಟೆಂಡರ್‌ ಕರೆಯದೆ ವಿವಿಧ ಸಂಸ್ಥೆಗಳಿಗೆ ನೇರವಾಗಿ ಗುತ್ತಿಗೆ ನೀಡಲಾಗಿದೆ. ಅನೇಕರಿಗೆ ಪಾವತಿಸಿರುವ ಭಾರಿ ಮೊತ್ತವು ಸಂದೇಹಗಳಿಗೆ ಕಾರಣವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎಸ್‌. ಗೌಡ ಆರೋಪಿಸಿದರು.

ಮುಖ್ಯಾಂಶಗಳು

₹ 10 ಕೋಟಿಗೆ ಸೀಮಿತಗೊಂಡ ಖರ್ಚು ವೆಚ್ಚ!

ಒಂದೇ ಸಂಸ್ಥೆಗೆ ₹ 5.54 ಕೋಟಿ ಪಾವತಿ

ಇನ್ನೂ ಬಾಕಿ ಉಳಿದಿರುವ ಕೆಲವು ಬಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT