ಮಾದಕ ವ್ಯಸನದ ವಿರುದ್ಧ ಎಸ್‌ಜೆಎಂನಿಂದ ಮಕ್ಕಳ ರ‍್ಯಾಲಿ

ಮಂಗಳೂರು: ಸಮಾಜವನ್ನು ತೀವ್ರವಾಗಿ ಕಾಡುತ್ತಿರುವ ಮಾದಕ ಪದಾರ್ಥಗಳ ಸೇವನೆ ವಿರುದ್ಧ ಜನಜಾಗೃತಿ ಮೂಡಿಸಲು ಸುನ್ನೀ ಜಂ ಇಯ್ಯತ್ ಉಲ್ ಮುಅಲ್ಲಿಮೀನ್ (ಎಸ್‌ಜೆಎಂ) ಆಯೋಜಿಸಿರುವ ವಿದ್ಯಾರ್ಥಿಗಳ ರ‍್ಯಾಲಿ ‘ಬಾಲ ಮಸೀರ’ ಇದೇ 21ರಂದು ರಾಜ್ಯದಾದ್ಯಂತ ನಡೆಯಲಿದೆ.
10 ಜಿಲ್ಲೆಗಳ 80 ಕೇಂದ್ರಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದ್ದು ದಕ್ಷಿಣ ಕನ್ನಡದ ಸುರತ್ಕಲ್, ಜೆಪ್ಪು ಮತ್ತು ದೇರಳಕಟ್ಟೆಯಲ್ಲಿ ಜಾಥಾ ನಡೆಯಲಿದೆ ಎಂದು ಎಸ್‌ಜೆಎಂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುಹಿಯುದ್ದೀನ್ ಕಾಮಿಲ್ ಸಖಾಫಿ ಕೃಷ್ಣಾಪುರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾದರೆ ಮಾದಕ ಪದಾರ್ಥ ಜಾಲವನ್ನು ಮಟ್ಟ ಹಾಕಬಹುದು. ಈ ಬಗ್ಗೆ ಒತ್ತಡ ಹೇರುವುದು ಮತ್ತು ವ್ಯಸನಮುಕ್ತ ಸಮಾಜ ನಿರ್ಮಿಸುವುದು ಎಸ್‌ಜೆಎಂ ಉದ್ದೇಶ. ಇಸ್ಲಾಮಿಕ್ ಶೈಕ್ಷಣಿಕ ಮಂಡಳಿ ಅಧೀನದಲ್ಲಿರುವ ಸಾವಿರಕ್ಕೂ ಅಧಿಕ ಮದ್ರಸಾಗಳ ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, 2 ಸಾವಿರಕ್ಕೂ ಹೆಚ್ಚಿನ ಶಿಕ್ಷಕರು, ಮದ್ರಸಾ ಆಡಳಿತ ಸಮಿತಿಯವರು ಎಸ್‌ಜೆಂ ರೇಂಜ್ ಕೇಂದ್ರಗಳಲ್ಲಿ ಜಾಥಾ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
‘ವ್ಯಸನದ ಆವೇಶ; ಸಮಾಜದ ವಿನಾಶ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸುವುದಾಗಿ ಅವರು ವಿವರಿಸಿದರು.
ರಾಜ್ಯ ಘಟಕದ ಅಧ್ಯಕ್ಷ ಮುಫತ್ತಿಶ್ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಉಪಾಧ್ಯಕ್ಷ ಒ.ಕೆ. ಸಯೀದ್ ಮುಸ್ಲಿಯಾರ್ ಜೋಗಿಬೆಟ್ಟು, ಮಿಷನರಿ ವಿಭಾಗದ ಉಪಾಧ್ಯಕ್ಷ ಮುತ್ತಲಿಬ್ ಸಖಾಫಿ ಬೆಳ್ಮ ಮತ್ತು ಕಾರ್ಯದರ್ಶಿ ಎನ್.ಎಂ. ಶರೀಫ್ ಸಖಾಫಿ ನೆಕ್ಕಿಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.