ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹12 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ

ಕದ್ರಿ ಸ್ಮಾರ್ಟ್ ರಸ್ತೆ ಕಾಮಗಾರಿ ಇಂದಿನಿಂದ ಪ್ರಾರಂಭ: ಶಾಸಕ ಕಾಮತ್
Last Updated 8 ಮೇ 2020, 10:29 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಕದ್ರಿ ಪಾರ್ಕ್ ರಸ್ತೆಯನ್ನು ವಿನೂತನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ₹12 ಕೋಟಿ ವೆಚ್ಚದ ಕಾಮಗಾರಿ ಶುಕ್ರವಾರ (ಇದೇ 8)ದಿಂದ ಆರಂಭವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

ಕದ್ರಿ ಉದ್ಯಾನ ರಸ್ತೆ ಅಭಿವೃದ್ಧಿಯ ನೀಲನಕ್ಷೆಯನ್ನು ವೀಕ್ಷಿಸಿದ ನಂತರ ಅವರು ಮಾತನಾಡಿದರು.

ನಿರ್ಮಾಣಗೊಳ್ಳಲಿರುವ ಈ ರಸ್ತೆ ಸುಮಾರು 800 ಮೀಟರ್ ಉದ್ದದ ಇರಲಿದ್ದು, ಒಳಚರಂಡಿ ಪೈಪ್‌ಗಳು, ನೀರಿನ ಪೈಪ್‌ಗಳು, ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಗಳನ್ನು ಈ ರಸ್ತೆಯ ಒಂದೇ ಕಡೆಯಲ್ಲಿ ಭೂಗತವಾಗಿ ಅಳವಡಿಸಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ರಸ್ತೆಯನ್ನು ಈಸ್ಟ್, ವೆಸ್ಟ್ ಮತ್ತು ಮಿಡಲ್ ಝೋನ್‌ ಎಂದು ವಿಂಗಡಿಸಲಾಗಿದೆ. ಈಸ್ಟ್ ಝೋನ್‌ ಅಂದರೆ ಕದ್ರಿ ಪೋಲಿಸ್ ಠಾಣೆಯಿಂದ ಆಕಾಶವಾಣಿವರೆಗೆ ಹೋಗಿ, ವಾಹನಗಳು ಯೂ ಟರ್ನ್ ಹಾಕಿ ಬರಬೇಕು. ಅದೇ ರೀತಿ ವೆಸ್ಟ್ ಝೋನ್‌ ಪಾದುವ ಹೈಸ್ಕೂಲ್ ಪ್ರಾರಂಭದಿಂದ ಗೋರಕ್ಷನಾಥ ಹಾಲ್ ತನಕ ಯೂ ಟರ್ನ್ ಹಾಕಿ ವಾಹನಗಳು ಸಾಗಬೇಕು. ಮಿಡಲ್ ಝೋನ್‌ನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ. ಅಲ್ಲಿ ಮಕ್ಕಳಿಗೆ ಆಟ ಆಡುವ ವ್ಯವಸ್ಥೆ ಸೇರಿದಂತೆ, ವಾಕಿಂಗ್ ಟ್ರ್ಯಾಕ್, ಕಾರಂಜಿಗಳು ಹೀಗೆ ಎಲ್ಲರಿಗೂ ಸಮಯವನ್ನು ಕಳೆಯಲು ವಿಶೇಷ ರೀತಿಯ ಅವಕಾಶ ಮಾಡಿ ಕೊಡಲಾಗುವುದು ಎಂದು ವಿವರಿಸಿದರು.

ಕೆಲವರ ಸಲಹೆಯಂತೆ ಹಲವು ಸೌಲಭ್ಯದೊಂದಿಗೆ ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಪರಿಸರದಲ್ಲಿ ಅಂಗಡಿ ಇರುವವರ ಜತೆ ಮಾತನಾಡಿ, ಅವರಿಗೂ ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್‌ಕುಮಾರ್, ಕಿರಣ್ ಕುಮಾರ್, ಪೂರ್ಣಿಮಾ, ಜಗದೀಶ್ ಶೆಟ್ಟಿ, ಪಾಲಿಕೆ ಸದಸ್ಯರಾದ ಶಕೀಲಾ ಕಾವ, ಮನೋಹರ ಕದ್ರಿ, ಸುಧೀರ್ ಶೆಟ್ಟಿ ಕಣ್ಣೂರು, ಸ್ಮಾರ್ಟ್ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ನಜೀರ್‌, ಅಧಿಕಾರಿಗಳಾದ ಲಿಂಗೇಗೌಡ, ರವಿಕುಮಾರ್, ಆರ್ಕಿಟೆಕ್ಟ್ ವೆಂಕಟೇಶ ಪೈ, ಗುತ್ತಿಗೆದಾರ ರಾಮಾ ಕಾಮತ ಸಂಸ್ಥೆಯವರು ಉಪಸ್ಥಿತರಿದ್ದರು.

ಕಂಟ್ರೋಲ್‌ ರೂಂ ಆರಂಭ

ಮಹಾನಗರ ಪಾಲಿಕೆ ಕಟ್ಟಡದ ಹಿಂಭಾಗದಲ್ಲಿ ನಿರ್ಮಾಣವಾಗಲಿರುವ ಮೂರು ಮಹಡಿ ಸುಮಾರು 7,500 ಚದರ ಅಡಿ ಕಟ್ಟಡದ ನೀಲನಕ್ಷೆಯನ್ನು ಶಾಸಕ ವೇದವ್ಯಾಸ ಕಾಮತ್ ಮತ್ತು ಮೇಯರ್ ದಿವಾಕರ ಪರಿಶೀಲಿಸಿದರು.

ಮಹಾನಗರ ಪಾಲಿಕೆ ಕಟ್ಟಡದಲ್ಲಿ ಈಗಾಗಲೇ ಸ್ಮಾರ್ಟ್ ಕಂಟ್ರೋಲ್ ರೂಮ್ ಕೆಲಸ ಪ್ರಾರಂಭಿಸಿದೆ. ಸ್ಮಾರ್ಟ್ ಕಂಟ್ರೋಲ್ ರೂಮಿಗೆ ಪಾಲಿಕೆಯ ಕಟ್ಟಡದಲ್ಲಿ ಅವಕಾಶ ಕಲ್ಪಿಸಿರುವುದರಿಂದ ಈ ವಿನೂತನ ಕಟ್ಟಡ ಸ್ಮಾರ್ಟ್ ಸಿಟಿ ವತಿಯಿಂದ ಪಾಲಿಕೆಗೆ ನಿರ್ಮಿಸಿ ಕೊಡಲಾಗುತ್ತದೆ ಎಂದು ಕಾಮತ್‌ ತಿಳಿಸಿದರು.

₹4.60 ಕೋಟಿ ವೆಚ್ಚದ ಕಾಮಗಾರಿ ಟೆಂಡರ್ ಮುಗಿದಿದ್ದು, ಶುಕ್ರವಾರದಿಂದ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT