ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಾಲಯದ ಒಲುಮೆಯಿಂದ ಸುಖಾಂತ್ಯ

ಮನೆ ಅರಸುತ್ತಾ ಮನೋವಿಕಲನ ದೇಶ ಪ್ರದಕ್ಷಿಣೆ
Last Updated 12 ಜನವರಿ 2020, 14:27 IST
ಅಕ್ಷರ ಗಾತ್ರ

ಮಂಗಳೂರು: ಬದುಕಿನ ಬಂಡಿ ಸಾಗಿಸಲು ಕೂಲಿನಾಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೇ ತಮ್ಮ ಮನೆಯ ಹಾದಿಯನ್ನೇ ಮರೆತು ಬಿಟ್ಟಿದ್ದರು. ಮನೆಯನ್ನು ಹುಡುಕುತ್ತಲೇ ಸಾಗಿದ್ದ ಅವರು, ಬಿಹಾರದಿಂದ ಬಂದು ಸೇರಿದ್ದು ಮಂಗಳೂರಿಗೆ.

2019 ರ ಜುಲೈ 11ರಂದು ನಗರದಲ್ಲಿ ತೀರಾ ಬಳಲಿರುವ ಕೃಶ ಕಾಯಕ ಹುಚ್ಚನೊಬ್ಬ ತಿರುಗಾಡುತ್ತಿರುವ ಮಾಹಿತಿ ಪಡೆದ ಜೋಸೆಫ್ ಕ್ರಾಸ್ತಾ ನೇತೃತ್ವದ ಮಂಜೇಶ್ವರ ಸ್ನೇಹಾಲಯ ಕಾರ್ಯಕರ್ತರು ಸ್ಥಳಕ್ಕೆ ತೆರಳಿದರು. ನಗರದ ಕದ್ರಿಯ ಬೀದಿಯಲ್ಲಿ ಬಿದ್ದುಕೊಂಡಿದ್ದ ಆ ವ್ಯಕ್ತಿಯ ದೇಹ ಸಂಪೂರ್ಣ ಸೊರಗಿತ್ತು. ಉಟ್ಟ ಉಡುಗೆಯು ಇನ್ನಿಲ್ಲದಂತೆ ಕೊಳಕುಗಳನ್ನೆಲ್ಲ ಮೆತ್ತಿಕೊಂಡಿತ್ತು. ಯಾರಿಗೂ ಬೇಡವಾಗಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಆ ಮನುಷ್ಯನನ್ನು ಬಿಗಿದಪ್ಪಿದ ಜೋಸೆಫ್ ಕ್ರಾಸ್ತಾರು, ಹತ್ತಿರದ ಉಪಾಹಾರ ಮಂದಿರದಿಂದ ಆತನಿಗೆ ಆಹಾರ ಪೊಟ್ಟಣ ತರಿಸಿಕೊಟ್ಟರು.

ಊಟ ಮಾಡಿ, ನೀರು ಕುಡಿದಾಗ ಬಳಲಿಕೆ ಅಲ್ಪ ಕಡಿಮೆಯಾಗಿತ್ತು. ವಾಹನದಲ್ಲಿ ಕುಳ್ಳಿರಿಸಿ ಸ್ನೇಹಾಲಯಕ್ಕೆ ಕರೆದೊಯ್ದರು. ಒಂದು ದಿನದ ವಿಶ್ರಾಂತಿಯ ಬಳಿಕ ಆತನನ್ನು ನೇರ ಯೇನೆಪೋಯ ಆಸ್ಪತ್ರೆಗೆ ಕರೆದೊಯ್ದು ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಯಿತು.

ಮೂರು ವಾರಗಳ ಚಿಕಿತ್ಸೆಯ ನಂತರ ಈ ವ್ಯಕ್ತಿ ಶಾರೀರಿಕ, ಮಾನಸಿಕವಾಗಿ ಬಹಳಷ್ಟು ಸುಧಾರಿಸಿದ್ದ. ಮರಳಿ ಸ್ನೇಹಾಲಯಕ್ಕೆ ಕರೆತಂದು, ಎಲ್ಲರ ಜತೆಗೆ ಆತನನ್ನೂ ಅಕ್ಕರೆಯಿಂದ ಪೋಷಿಸಲಾಯಿತು. ಆಟೋಟ, ಯೋಗ, ಆಪ್ತ ಸಮಾಲೋಚನೆಯ ಫಲವಾಗಿ ಪ್ರೀತಿಯ ವಾತಾವರಣದಲ್ಲಿ ಆತ ಲಗುಬಗನೆ ಸಹಜತೆಗೆ ಬಂದಿದ್ದ.

ಈ ವ್ಯಕ್ತಿಯ ಹೆಸರು ಕಾಳು. 50 ವರ್ಷ ವಯಸ್ಸು. ಬಿಹಾರ ರಾಜ್ಯದ ನಾವಡ ಜಿಲ್ಲೆ ಮರವಾ ತಾಲ್ಲೂಕಿನ ನಿವಾಸಿ. ಇಷ್ಟೊಂದು ಮಾಹಿತಿ ದೊರೆತದ್ದೇ ತಡ, ಸ್ನೇಹಾಲಯವು ಮುಂಬೈನ ಶ್ರದ್ಧಾ ಪುನಶ್ಚೇತನ ಕೇಂದ್ರವನ್ನು ಸಂಪರ್ಕಿಸಿತು. ಅದರ ಫಲವಾಗಿ ಶ್ರದ್ಧಾ ಕಾರ್ಯಕರ್ತರ ಮೂಲಕ ಕಳೆದ ವಾರ ಕಾಳು ಅವರನ್ನು ಸುರಕ್ಷಿತವಾಗಿ ಮನೆಗೆ ಸೇರಿಸಲಾಯಿತು. ಒಂದು ವರ್ಷದಿಂದಲೂ ಕಾಳುವಿಗಾಗಿ ಹುಡುಕಾಟದಲ್ಲಿದ್ದ ಪತ್ನಿ, ಮಕ್ಕಳ ಆನಂದಕ್ಕೆ ಪಾರಮ್ಯವೇ ಇರಲಿಲ್ಲ.

ಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಕಾಳು ಅವರಿಗೆ ಪತ್ನಿ ಹಾಗೂ ಒಂಬತ್ತು ಮಂದಿ ಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಹೆಣ್ಣುಮಕ್ಕಳು.

ಸ್ನೇಹಾಲಯದ ಹೊಸ ಅತಿಥಿ ಹೈದರ್: ಸ್ನೇಹಾಲಯಕ್ಕೆ ಮತ್ತೋರ್ವ ಹೊಸ ಅತಿಥಿ ಬಂದಿದ್ದು, ಊರು - ಕೇರಿ ಗೊತ್ತಿಲ್ಲದೆ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ ಯುವಕನ ಬಗ್ಗೆ ನಾಗರಿಕರು ನೀಡಿದ ಮಾಹಿತಿಯ ಫಲವಾಗಿ ಈಗ ಆತ ಸ್ನೇಹಮನೆಯನ್ನು ಸೇರಿದ್ದಾನೆ.
ಮಂಜೇಶ್ವರದ ತೂಮಿನಾಡು ಪ್ರದೇಶದಿಂದ ಹೆದ್ದಾರಿ ಬದಿಯಲ್ಲಿ ಇದ್ದ ವ್ಯಕ್ತಿಯ ಬಗ್ಗೆ ತೂಮಿನಾಡು ಪ್ರದೇಶ ವಾಸಿಗಳು ಸ್ನೇಹಾಲಯಕ್ಕೆ ಮಾಹಿತಿ ನೀಡಿದ್ದರು. ಜೋಸೆಫ್ ಕ್ರಾಸ್ತಾ ನೇತೃತ್ವದ ಸ್ನೇಹಾಲಯ ತಂಡವು, ಸುಮಾರು 35 ವರ್ಷದ ಆ ಯುವಕನನ್ನು ಕರೆ ತಂದಿದ್ದಾರೆ.

ಸ್ನೇಹಮನೆಯಲ್ಲಿ ಪ್ರೀತಿಯ ಉಪಚಾರ ನೀಡಿ, ಆತ್ಮೀಯವಾಗಿ ಮಾತನಾಡಿಸಿದಾಗ ತನ್ನ ಹೆಸರು ಹೈದರ್ ಅಂದಿದ್ದ. ಅದನ್ನೇ ಪುನರುಚ್ಚರಿಸುತ್ತಿದ್ದ. ಅಸ್ಪಷ್ಟ ಹಿಂದಿ ಮಾತನಾಡುತ್ತಿದ್ದ. ಆದರೆ, ಊರು, ಸಂಬಂಧಿಕರನ್ನು ನೆನಪಿಲ್ಲ.

ಹೈದರ್‌ನನ್ನು ಇದೀಗ ನಗರದ ಯೇನೆಪೋಯ ಆಸ್ಪತ್ರೆಯ ಮಾನಸಿಕ ರೋಗ ವಿಭಾಗದಲ್ಲಿ ದಾಖಲಿಸಲಾಗಿದೆ. ತಜ್ಞರ ಶುಶ್ರೂಷೆ ಬಳಿಕ ಸ್ನೇಹಾಲಯಕ್ಕೆ ಕರೆತಂದು ಪೂರ್ಣ ಗುಣಮುಖನಾದ ಬಳಿಕ ಸಂಬಂಧಿಕರನ್ನು ಹುಡುಕಿ ಊರಿಗೆ ಬಿಡುವುದಾಗಿ ಜೋಸೆಫ್ ಕ್ರಾಸ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT