ಮಂಗಳೂರು: ‘ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಗಳು, ಪೊಲೀಸರು ಮತ್ತು ವೈದ್ಯಕೀಯ ವರದಿ ನೀಡಿರುವ ವೈದ್ಯರು ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಇವರ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಸೌಜನ್ಯಾ ಕುಟುಂಬದ ಪರವಾಗಿ ಹೋರಾಟ ನಡೆಸುತ್ತಿರುವ ಬೆಳ್ತಂಗಡಿಯ ‘ಪ್ರಜಾಪ್ರಭುತ್ವ ವೇದಿಕೆ’ಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಕೀಲೆ ಅಂಬಿಕಾ ಪ್ರಭು ಶುಕ್ರವಾರ ತಿಳಿಸಿದರು.
ಸಂತೋಷ್ ರಾವ್ ಅವರ ಮಾನವ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆಯೂ ಪೊಲೀಸ್ ಇಲಾಖೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಶುಕ್ರವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಆರೋಪಿ ಸಂತೋಷ್ ರಾವ್ ತಪ್ಪಿತಸ್ಥ ಅಲ್ಲ ಎಂಬುದನ್ನು ನಾವು 10 ವರ್ಷ ಹಿಂದೆಯೇ ಹೇಳಿದ್ದೇವೆ. ಆದರೆ, ಪೊಲೀಸರು ‘ದೊಡ್ಡವರ’ ಒತ್ತಡಕ್ಕೆ ಮಣಿದು, ಸಂತೋಷ್ ರಾವ್ ಅವರನ್ನು ತಪ್ಪಿತಸ್ಥನಾಗಿಸಿ, ನಿಜವಾದ ಅಪರಾಧಿಗಳನ್ನು ರಕ್ಷಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ನಿಜ ಆರೋಪಿಗಳ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ಹಂತಹಂತವಾಗಿ ನಾಶಪಡಿಸಿದ್ದರು’ ಎಂದು ಮಹೇಶ್ ಶೆಟ್ಟಿ ಆರೋಪಿಸಿದರು.
‘ಸೌಜನ್ಯಾ ಪರವಾಗಿ ಸಾಕ್ಷ್ಯ ಹೇಳಲು ಬಂದಿದ್ದವರಲ್ಲಿ ಒಬ್ಬರು ನೇಣು ಹಾಕಿಕೊಂಡು, ಇನ್ನೊಬ್ಬರು ಬಾವಿಗೆ ಬಿದ್ದು, ಮತ್ತೊಬ್ಬರು ಅಸೌಖ್ಯದಿಂದ ನಂತರದ ದಿನಗಳಲ್ಲಿ ಸಾವನ್ನಪ್ಪಿದ್ದರು. ಇವೆಲ್ಲವೂ ಶಂಕಾಸ್ಪದ ಸಾವುಗಳೇ ಆಗಿವೆ. ನನ್ನನ್ನು ಹತ್ಯೆ ಮಾಡುವ ಪ್ರಯತ್ನಗಳೂ ಆಗಿವೆ. ಪೊಲೀಸ್ ಇಲಾಖೆಯ ಒಳಗಿನವರೇ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ನಾನು ಒಂದು ತಿಂಗಳ ಕಾಲ ತಲೆ ಮರೆಸಿಕೊಂಡು ಪ್ರಾಣ ಉಳಿಸಿದ್ದೇನೆ. ಸಂತೋಷ್ ರಾವ್ ನಿರಪರಾಧಿ ಎಂದು ನ್ಯಾಯಾಲಯ ಹೇಳಿರುವುದರಿಂದ ನಮ್ಮ ವಾದಕ್ಕೆ ಪುಷ್ಟಿ ಸಿಕ್ಕಿದಂತಾಗಿದೆ. ನಿಜವಾದ ಅಪರಾಧಿಗಳ ಬಂಧನವಾಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.
ಪೊಲೀಸರು ಎಸಗಿದ್ದಾರೆ ಎನ್ನಲಾದ 28 ಪ್ರಮುಖ ಲೋಪಗಳ ಪಟ್ಟಿಯನ್ನು ಅವರು ಮಾಧ್ಯಮದವರಿಗೆ ಬಿಡುಗಡೆ ಮಾಡಿದರು.
‘ಸೌಜನ್ಯಾ ಶವ ಪರೀಕ್ಷೆ ನಡೆಸಿದ ವೈದ್ಯರು ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಸಂತೋಷ್ ರಾವ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಕ್ಕೂ ಮುನ್ನ, ಅವರ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯದ ಪರೀಕ್ಷೆ ನಡೆಸಿದ್ದೂ ದಾಖಲಾಗಿದೆ. ಇವೆಲ್ಲವೂ ಸಾಕ್ಷ್ಯಗಳನ್ನು ನಾಶಪಡಿಸುವ ಹುನ್ನಾರಗಳೇ ಆಗಿದ್ದವು. ಪ್ರಕರಣದ ಮರು ತನಿಖೆ ನಡೆಸಬೇಕಾದರೆ ಸುಪ್ರೀಂ ಕೋರ್ಟ್ ಮೊರೆಹೋಗಬೇಕು. ಅಷ್ಟು ಆರ್ಥಿಕ ಶಕ್ತಿ ನಮ್ಮಲ್ಲಿ ಇಲ್ಲ. ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರ ಒತ್ತಡಕ್ಕೆ ಮಣಿದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು. ಈಗ ಮತ್ತೆ ಅದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರವೇ ಆರ್ಥಿಕ ನೆರವು ನೀಡಿದರೆ ನಾವು ಸುಪ್ರೀಂ ಕೋರ್ಟ್ ಮೊರೆಹೋಗಲು ಸಿದ್ಧ. ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ. ಅದು ಬಂದ ಬಳಿಕ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ’ ಎಂದು ಅಂಬಿಕಾ ಪ್ರಭು ತಿಳಿಸಿದರು.
ಸೌಜನ್ಯಾ ತಾಯಿ ಕುಸುಮಾವತಿ, ಮಾವ ವಿಠ್ಠಲ ಗೌಡ ಹಾಗ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ ಮಾಧ್ಯಮಗೋಷ್ಠಿಯಲ್ಲಿದ್ದರು.
ಸೌಜನ್ಯ ಪ್ರತಿಮೆ ಸ್ಥಾಪನೆ
‘ನಮ್ಮ ಹೋರಾಟ ಉಸಿರು ಇರುವವರೆಗೆ ನಡೆಯಲಿದೆ. ಮುಂದಿನ ಹಂತವಾಗಿ ಸೌಜನ್ಯಾ ಅವರ ಸಮಾಧಿಯ ಬಳಿಯಲ್ಲೇ ಆಕೆಯ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುತ್ತೇವೆ. ಆಕೆ ಒಂದು ಶಕ್ತಿಯಾಗಲಿದ್ದಾಳೆ, ಆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವ ಭಕ್ತರು ಮಾತ್ರವಲ್ಲ, ಅತ್ಯಾಚಾರ ನಡೆಸಿ ಕೊಲೆ ಮಾಡಿದವರು ಸಹ ಅದನ್ನು ನಿತ್ಯವೂ ನೋಡಿಯೇ ಮುಂದೆ ಸಾಗುವಂತಾಗಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ‘ಧಾರ್ಮಿಕ ಭಯೋತ್ಪಾದನೆ’ಯ ಭೀಕರತೆಯ ಅರಿವು ಎಲ್ಲರಿಗೂ ಆಗಬೇಕು. ನಮ್ಮ ಹೋರಾಟ ಕ್ಷೇತ್ರದ ವಿರುದ್ಧವಲ್ಲ, ಅಪರಾಧಿಗಳ ವಿರುದ್ಧ ಮಾತ್ರ’ ಎಂದು ಮಹೇಶ್ ಶೆಟ್ಟಿ ಹೇಳಿದರು.
‘ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಹೊರಟುಹೋಗಿದೆ. ನಾನು ನಂಬಿರುವುದು ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪನನ್ನು. ಅವರು ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅಪರಾಧಿಗಳು, ಅವರಿಗೆ ಬೆಂಬಲವಾಗಿ ನಿಂತವರು, ಅವರ ಕುಟುಂಬದವರೆಲ್ಲರೂ ಮುಂದೆ ಕಷ್ಟ ಅನುಭವಿಸುವುದಿದೆ. ಶಾಪದಿಂದ ಪಾರಾಗಬೇಕಾದರೆ ಮುಂದೆ ಬಂದು ಸತ್ಯವನ್ನು ಹೇಳಲಿ. ಇಲ್ಲವಾದರೆ ನೊಂದ ಮನಸ್ಸುಗಳ ಶಾಪ ತಟ್ಟುವುದು ಖಚಿತ. ಸೌಜನ್ಯಾಳ ನರಳಾಟ ಅಪರಾಧಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತವರ ಮನೆಯಲ್ಲೂ ಕೇಳಿಬರಲಿದೆ’ ಎಂದರು.
‘ತನಿಖಾಧಿಕಾರಿಯೂ ಸೇರಿದಂತೆ ಪೊಲೀಸ್ ಇಲಾಖೆಯ ಅನೇಕರು ನನಗೂ ಸ್ನೇಹಿತರು. ಅವರಲ್ಲಿ ಕೆಲವರು ಪುಣ್ಯ ಕ್ಷೇತ್ರವೊಂದಕ್ಕೆ ಬಂದು ಖಾಸಗಿಯಾಗಿ ನನ್ನ ಮುಂದೆ ಎಲ್ಲವನ್ನೂ ಹೇಳಿದ್ದಾರೆ. ದೊಡ್ಡವರ ಸೂಚನೆಯಂತೆ ನಡೆದಿದ್ದೇವೆ ಎಂದಿದ್ದಾರೆ. ದೊಡ್ಡವರು ಯಾರು, ಸಣ್ಣವರು ಯಾರು ಎಂಬುದು ಈ ಭಾಗದ ಜನರಿಗೆ ಸ್ಪಷ್ಟವಾಗಿ ಗೊತ್ತಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.