ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆಗೆ ದಕ್ಷಿಣ ರೈಲ್ವೆ ಹೊಸ ಆಲೋಚನೆ

ದಕ್ಷಿಣ ರೈಲ್ವೆಯಿಂದ ವಹಿವಾಟು ಅಭಿವೃದ್ಧಿ ಘಟಕ ಆರಂಭ
Last Updated 23 ಜುಲೈ 2020, 4:10 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ದಕ್ಷಿಣ ರೈಲ್ವೆ ಹೊಸ ವಹಿವಾಟು ಮಾದರಿಯನ್ನು ಅಭಿವೃದ್ಧಿಪಡಿಸಿದೆ. ರೈಲ್ವೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿಭಾಗಗಳ ಮೂಲಕ ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಪ್ರಯಾಣಿಕ ರೈಲುಗಳ ಸಂಚಾರ ವಿಳಂಬವಾಗುತ್ತಿದ್ದು, ರೈಲ್ವೆಗೆ ಆದಾಯ ವೃದ್ಧಿಯಾಗುವುದು ಅನಿವಾರ್ಯವಾಗಿದೆ. ಇದಕ್ಕಾಗಿಯೇ ವಹಿವಾಟು ಅಭಿವೃದ್ಧಿ ಘಟಕವನ್ನು ದಕ್ಷಿಣ ರೈಲ್ವೆ ಆರಂಭಿಸಿದೆ. ಈ ಮೂಲಕ ಸಣ್ಣ ಪ್ರಮಾಣದ ಸರಕುಗಳಾದ ಉತ್ಪಾದಿತ ವಸ್ತುಗಳು, ಕೃಷಿ ಉತ್ಪನ್ನಗಳು, ಕಚ್ಚಾ ವಸ್ತುಗಳ ಸಾಗಣೆಗೂ ಒಲವು ತೋರಿದೆ.

ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಹಿವಾಟು ಅಭಿವೃದ್ಧಿ ಘಟಕವು, ಸಹಾಯಕ ವಿಭಾಗೀಯ ಮಹಾಪ್ರಬಂಧಕ ಸಿ.ಟಿ. ಶಕೀರ್ ಹುಸೇನ್‌, ಹಿರಿಯ ವಿಭಾಗೀಯ ನಿರ್ವಹಣಾ ಪ್ರಬಂಧಕ ಪಿ.ಎಲ್‌. ಅಶೋಕಕುಮಾರ್‌ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಿರಿಯ ವಿಭಾಗೀಯ ವಾಣಿಜ್ಯ ಪ್ರಬಂಧಕ ಜೆರಿಸ್‌ ಜಿ. ಆನಂದ, ಹಿರಿಯ ಮೆಕಾನಿಕಲ್‌ ಪ್ರಬಂಧಕ ಕೆ.ವಿ. ಸುಂದರೇಶನ್‌, ಹಿರಿಯ ವಿಭಾಗೀಯ ಹಣಕಾಸು ಪ್ರಬಂಧಕ ಎ.ಪಿ. ಸಿವಚಂದರ್ ಈ ಘಟಕದ ಸದಸ್ಯರಾಗಿದ್ದಾರೆ.

‘ಈ ಘಟಕದ ಸದಸ್ಯರು ಸರಕು ಸಾಗಣೆಯ ಹೊಸ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದು, ಕೈಗಾರಿಕೋದ್ಯಮಿಗಳು, ವರ್ತಕರ ಸಂಘಗಳ ಜತೆಗೆ ನಿಯಮಿತವಾಗಿ ಸಂವಹನ ನಡೆಸಲಿದ್ದಾರೆ. ಸದ್ಯದ ಸರಕು ಸಾಗಣೆ ಮಾದರಿ ಹಾಗೂ ಬರಲಿರುವ ದಿನಗಳಲ್ಲಿ ಅನುಸರಿಸಬೇಕಾದ ಮಾದರಿಗಳ ಕುರಿತು ಚರ್ಚೆ ನಡೆಸುವ ಮೂಲಕ ರೈಲ್ವೆಯಿಂದ ಸರಕು ಸಾಗಣೆ ಹೆಚ್ಚಿಸಲು ಕಾರ್ಯಯೋಜನೆ ರೂಪಿಸಲಿದ್ದಾರೆ’ ಎಂದು ಪಾಲ್ಘಾಟ್‌ನ ವಿಭಾಗೀಯ ಮಹಾಪ್ರಬಂಧಕ ಪ್ರತಾಪ್‌ಸಿಂಗ್‌ ಶಮಿ ತಿಳಿಸಿದ್ದಾರೆ.

ಪಾಲ್ಘಾಟ್‌ ವಿಭಾಗದ ಘಟಕವನ್ನು ದೂ.ಸಂ. 0491– 2556198, ಮೊ.ಸಂ. 97467 63956, ಅಥವಾ ಇ–ಮೇಲ್‌ ccpgt@pgt.railnet.gov.in, comlpgt@gmail.com ಮೂಲಕವೂ ಸಂಪರ್ಕಿಸಬಹುದಾಗಿದೆ.

ಹೊಸ ಮಾದರಿ ಸರಕು ಸಾಗಣೆ

ರೈಲ್ವೆಯಿಂದ ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ ಹೊಸ ಮಾದರಿಯ ಸರಕು ಸಾಗಣೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಇತ್ತೀಚೆಗೆ ದಕ್ಷಿಣ ಮಧ್ಯ ರೈಲ್ವೆಯು ಗುಂಟೂರಿನಿಂದ ಬಾಂಗ್ಲಾದೇಶಕ್ಕೆ ಕೆಂಪು ಮೆಣಸಿನ ಕಾಯಿಯನ್ನು ಸಾಗಣೆ ಮಾಡಿತ್ತು. ಇದೀಗ ಇದೇ ಮಾದರಿಯಲ್ಲಿ ಪಾಲ್ಘಾಟ್‌ ವಿಭಾಗವೂ ಕಾರ್ಯ ನಿರ್ವಹಿಸುತ್ತಿದ್ದು, ಪಣಂಬೂರು ಗೂಡ್‌ಶೆಡ್‌ನಿಂದ 15 ಲೀಟರ್‌ ಟಿನ್‌ ಹಾಗೂ 10 ಲೀಟರ್‌ ಬಾಕ್ಸ್‌ಗಳ ರಿಫೈನ್ಡ್‌ ಪಾಮ್‌ ಆಯಿಲ್‌ ಅನ್ನು ಉತ್ತರ ಪ್ರದೇಶದ ಲಕ್ನೋಗೆ ಸಾಗಣೆ ಮಾಡಿದೆ. ಅಲ್ಲದೇ ಪಾಲ್ಘಾಟ್‌ ನಿಲ್ದಾಣದಿಂದ ಕ್ಯಾಮ್ಕೊ ಪವರ್ ಟಿಲ್ಲರ್‌ಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಣೆ ಮಾಡಲಾಗಿದೆ.

ವಿಭಾಗದ ಪೊಳ್ಳಾಚಿ ಜಂಕ್ಷನ್, ಪಾಲ್ಘಾಟ್ ಜಂಕ್ಷನ್, ಅಂಗಡಿಪುರಂ, ನಿಲಾಂಬುರ್‌ ರೋಡ್‌, ಕಲ್ಲಾಯಿ, ವೆಸ್ಟ್‌ ಹಿಲ್‌, ತಿಕ್ಕೊಟ್ಟಿ, ವಲಾಪಟ್ಟಣಂ, ನಿಲೇಶ್ವರ, ಮಂಗಳೂರು ಸೆಂಟ್ರಲ್‌ನ ಬಂದರು, ನವಮಂಗಳೂರು ಬಂದರಿನ ಪಣಂಬೂರಿನಲ್ಲಿರುವ ಗೂಡ್‌ಶೆಡ್‌ಗಳಲ್ಲಿ ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ಪಾಲ್ಘಾಟ್‌ ವಿಭಾಗದ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT