ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ನೆಲೆಸಿದ ವಿದೇಶಿಗರ ಪತ್ತೆಗೆ ವಿಶೇಷ ಸರ್ವೆ

ಗೃಹಸಚಿವ ಆರಗ ಜ್ಞಾನೇಂದ್ರ ಸೂಚನೆ
Last Updated 27 ಜೂನ್ 2022, 15:06 IST
ಅಕ್ಷರ ಗಾತ್ರ

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗಾಗಿ ಪ್ರತಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ಸರ್ವೆ ನಡೆಸಬೇಕು. ಅಗತ್ಯ ಬಿದ್ದರೆ ಅಂತಹ ವಿದೇಶಿಗರನ್ನು ಬಂಧಿಸುವಂತೆಯೂ ಸೂಚನೆ ನೀಡಿದ್ದೇನೆ’ ಎಂದು ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮಂಗಳೂರು ಪೊಲೀಸ್ ಕಮಿಷನರೇಟ್‌ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಡಿವೈಎಸ್‌ಪಿಗಿಂತ ಮೇಲಿನ ದರ್ಜೆಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಅವರು ಇಲ್ಲಿನ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನೂ ಮಾಡಿಸಿಕೊಂಡಿದ್ದರು. ಇಲ್ಲೂ ವಿಸಾ ಅವಧಿ ಮುಗಿದ ಬಳಿಕವು ನೆಲೆಸಿರುವವರು ಹಾಗೂ ಅಕ್ರಮವಾಗಿ ದೇಶದೊಳಗೆ ನುಸುಳಿರುವವರ ಮೇಲೆ ಕಣ್ಣಿಡಬೇಕಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಯಾವ ದೇಶದವರು, ಅವರ ಚಟುವಟಿಕೆಗಳೇನು ಎಂಬ ಬಗ್ಗೆಯೂ ಕಣ್ಣಿಡಬೇಕು. ಈ ವಿವರಗಳನ್ನು ಪ್ರತಿ ಠಾಣೆಯಲ್ಲಿ ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ. ಎರಡು ವಾರಗಳಲ್ಲಿಈ ಸರ್ವೆ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ’ ಎಂದರು.

‘ರಾಜ್ಯದಲ್ಲಿ ಒಂದೇ ವರ್ಷದಲ್ಲಿ 100 ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗಿದೆ. ಇಲ್ಲೂ ಸ್ವಂತ ಜಾಗ ಹೊಂದಿರುವ ಕಡೆ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯಕ್ಕೆ ಪೊಲೀಸ್‌ ಠಾಣೆ ಕಟ್ಟಡ ಮಂಜೂರು ಮಾಡಿದ್ದು, ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದರು.

‘ಉಪಗ್ರಹ ಫೋನ್‌ ಬಳಕೆ ಪ್ರಕರಣಗಳ ತನಿಖೆಯನ್ನೂ ಕೂಲಂಕಷವಾಗಿ ನಡೆಸಲಾಗುತ್ತಿದೆ. ಕೆಲವೊಮ್ಮೆ ಸಮುದ್ರದ ನಡುವೆ ಉಪಗ್ರಹ ಪೋನ್‌ ಬಳಸಿದರೆ ಅಕ್ಷಾಂಶ ಮತ್ತು ರೇಖಾಂಶಗಳ ನಿಖರ ವಿವರಗಳು ಸಿಗುವುದಿಲ್ಲ. ಆಂತರಿಕ ಭದ್ರತೆಗೆ ಸಂಬಂಧಿಸಿದ ಕಣ್ಗಾವಲನ್ನು ಹೆಚ್ಚಿಸಿದ್ದೇವೆ. ಶಾಂತಿ ಮತ್ತು ಭದ್ರತೆ ಕಾಪಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಕ್ತಿಮೀರಿ ಕೆಲಸ ಮಾಡುತ್ತಿವೆ’ ಎಂದು ಗೃಹಸಚಿವರು ತಿಳಿಸಿದರು.

ಬಿಜೆಪಿ ಮುಖಂಡ ಅನ್ವರ್‌ ಮಾಣಿಪ್ಪಾಡಿ ಅವರು ಮುಸ್ಲೀಮರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸುತ್ತಿರುವ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಜ್ಞಾನೇಂದ್ರ, ‘ಅವರು ಯಾವ ಕಾರಣಕ್ಕೆ ಆ ರೀತಿ ಮಾತನಾಡಿದ್ದಾರೋ ತಿಳಿಯದು. ಅವರ ಜೊತೆ ಮಾತನಾಡುತ್ತೇನೆ’ ಎಂದರು.

-0-

‘ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಹೆಚ್ಚಳಕ್ಕೆ ಕ್ರಮ’

‘ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುವವರಿಗೆ ಶಿಕ್ಷೆ ಆಗುವ ಪ್ರಮಾಣ ಕಡಿಮೆ ಇದೆ. ಪೊಲೀಸ್‌ ಅಧಿಕಾರಿಗಳು ಹಾಗೂ ಸರ್ಕಾರಿ ವಕೀಲರ ಸಮನ್ವಯದಿಂದ ಕೆಲಸ ಮಾಡುವ ಮೂಲಕ ಆರೋಪಿಗಳಿಗೆ ಶಿಕ್ಷೆ ಆಗುವ ಪ್ರಮಾಣವನ್ನು ಹೆಚ್ಚಿಸಬೇಕು. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ಹಮ್ಮಿಕೊಳ್ಳಬೇಕು ಎಂದುನಿರ್ದೇಶನ ನೀಡಿದ್ದೇನೆ’ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

‘ಕೆಲ ಪ್ರಕರಣಗಳ ವಿಚಾರಣೆ ನಾಲ್ಕೈದು ವರ್ಷಗಳ ಕಾಲ ಮುಂದುವರಿಯುತ್ತದೆ. ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯ ಹೇಳುವವರು ಸಹಕರಿಸುವುದಿಲ್ಲ. ಅಧಿಕಾರಿಗಳಿಗೂ ಪ್ರಕರಣದ ಆರಂಭದಲ್ಲಿ ಇರುವ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ಹಾಗಾಗಿ ಅಪಾರಾಧಿಗಳಿಗೆ ಶಿಕ್ಷೆ ಆಗುವ ಪ್ರಮಾಣ ಶೇ 15ಕ್ಕಿಂತ ಕಡಿಮೆ ಇದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ ಸರ್ಕಾರಿ ವಕೀಲರ ಕೊರತೆ ಇದೆ. ಅವರ ನೇಮಕಾತಿಗೂ ಕ್ರಮವಹಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

-0-

‘ಆನ್‌ಲೈನ್‌ ವಂಚನೆ– ತಕ್ಷಣ ದೂರು ನೀಡಿ’

‘ಆನ್‌ಲೈನ್‌ ವಂಚನೆಗಳಿಗೆ ಸಂಬಂಧಿಸಿದ ದೂರುಗಳನ್ನು ತಕ್ಷಣವೇ ನೀಡಬೇಕು. ಆನ್‌ಲೈನ್‌ ವಂಚನೆಗೆ ಒಳಗಾದ ಎರಡು ಗಂಟೆ ಒಳಗೆ ದೂರು ನೀಡಿದರೆ, ಕಳೆದುಕೊಂಡ ಹಣವನ್ನು ತಕ್ಷಣವೇ ಮರಳಿಕೊಡಿಸಬಹುದು. ತಿಂಗಳು ಕಳೆದ ನಂತರ ದೂರು ನೀಡಿದರೆ ಪೊಲೀಸರೂ ಅಸಹಾಯಕರಾಗುತ್ತಾರೆ’ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷಪೂರಿತ ಸಂದೇಶ ಹರಡುವರ ಮೇಲು ವಿಶೇಷ ನಿಗಾ ಇಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT