ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ: ಪಿಐಎಲ್‌ಗೆ ಚಿಂತನೆ

ಜಿಲ್ಲಾವಾರು ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿರುವ ಎನ್‌ಎಸ್‌ಯುಐ
Last Updated 17 ಸೆಪ್ಟೆಂಬರ್ 2020, 12:10 IST
ಅಕ್ಷರ ಗಾತ್ರ

ಮಂಗಳೂರು: ‘ಎಸ್ಸೆಸ್ಸೆಲ್ಸಿ ಮೌಲ್ಯಮಾಪನದಲ್ಲಿ ಆಗಿರುವ ಗಂಭೀರ ಲೋಪಗಳಿಂದ ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲು ಸಿದ್ಧತೆ ನಡೆದಿದೆ’ ಎಂದು ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರು ಮೌಲ್ಯಮಾಪನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 748 ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊದಲ ಸುತ್ತಿನ ಮೌಲ್ಯಮಾಪನದಲ್ಲಿ ಆಗಿರುವ ದೊಡ್ಡ ವೈಫಲ್ಯವನ್ನು ಇದು ತೋರಿಸುತ್ತದೆ. ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಈ ಕುರಿತು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

‘ಅನುತ್ತೀರ್ಣಗೊಂಡ ಸಾಕಷ್ಟು ವಿದ್ಯಾರ್ಥಿಗಳು ದುಬಾರಿ ಶುಲ್ಕ ಮತ್ತು ಕೋವಿಡ್‌ ಹಿನ್ನೆಲೆಯಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ. ಇಲ್ಲದಿದ್ದರೆ ಉತ್ತೀರ್ಣ ಪ್ರಮಾಣ ಇನ್ನೂ ಹೆಚ್ಚುತ್ತಿತ್ತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ಅಥವಾ ಎಸಿಬಿ ಮೂಲಕ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.

‘ಪದವಿ ತರಗತಿಗಳು ಪ್ರಾರಂಭಗೊಂಡ ನಂತರ ಕಾಲೇಜುಗಳಲ್ಲಿ ಡ್ರಗ್ಸ್‌ ವಿರುದ್ಧ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಫಾರೂಕ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎನ್‌ಎಸ್‌ಯುಐ ದ.ಕ. ಜಿಲ್ಲಾ ಕಾರ್ಯದರ್ಶಿ ಸವಾದ್ ಸುಳ್ಯ, ನಗರ ಅಧ್ಯಕ್ಷ ಶೌನಕ್ ರೈ, ಬಂಟ್ವಾಳ ಅಧ್ಯಕ್ಷ ವಿನಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ಅನ್ವೀತ್ ಕಟೀಲ್, ಶಫೀಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT